ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂದಿದುರ್ಗ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ದಿ. ವಿ.ಪಿ.ದೀನದಯಾಳು ನಾಯ್ಡು ರಸ್ತೆ ಎಂದು ಬಿಬಿಎಂಪಿ ಮೇಯರ್ ಆರ್.ಸಂಪತ್‌ರಾಜ್ ಗುರುವಾರ ಮರು ನಾಮಕಾರಣ ಮಾಡಿದರು.
ಬಿಬಿಎಂಪಿ ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ವತಿಯಿಂದ ಮಿಲ್ಲರ್ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಅಭಿವೃದ್ಧಿಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ ಎಂದರು.
ಭಾರತ್ ಸ್ಕೌಟ್ ಹಾಗೂ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ. ಆರ್.ಸಿಂಧ್ಯಾ ಮಾತನಾಡಿ, ಮುಂದಿನ ವರ್ಷ ಬೆಂಗಳೂರಿನಲ್ಲಿ ವಿಶ್ವ ಜಾಂಬೂರಿ ಸಮ್ಮೇಳನ ನಡೆಸಲು ನಿರ್ಧರಿಸಿದ್ದೇವೆ. ಭಾರತದಾಚೆಗೂ ಸ್ಕೌಟ್ ಮತ್ತು ಗೈಡ್ಸ್ ಜನಪ್ರಿಯವಾಗಿಸಲು ಈ ಸಮ್ಮೇಳನ ಸಹಕಾರಿಯಾಗಲಿದೆ ಎಂದು ವಿವರಿಸಿದರು.
ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ದೀನದಾಯಾಳು ಅವರ ಶತಮಾನೋತ್ಸವ ಸಮಾರೋಪಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಆಹ್ವಾನಿಸಲಾಗುತ್ತದೆ. ಶತಮಾನೋತ್ಸವ ವರ್ಷಾಚರಣೆಯಲ್ಲಿ ಈವರೆಗೆ ವಿವಿಧ ಶಾಲೆಯ ಎರಡು ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ರಾಷ್ಟ್ರದ ರಾಜಧಾನಿ ದೆಹಲಿಯ ರಸ್ತೆಯೊಂದಕ್ಕೆ ಇವರ ಹೆಸರು ಇಡುವಂತೆ ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಕೋರಿಕೊಳ್ಳಲಿದ್ದೇವೆ ಎಂದರು. ರಾಷ್ಟ್ರೀಯ ಆಯುಕ್ತ ಖಾಲಿದ್, ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಪಾಲಿಕೆ ಸದಸ್ಯ ಎಂ.ಕೆ.ಗುಣಶೇಖರ್ ಮೊದಲಾದವರು ಇದ್ದರು.