Advertisement
ಹೌದು. ಕಳೆದ ಎರಡು ವರ್ಷ ಕೊರೊನಾ ಮಹಾ ಮಾರಿಯ ಹೊಡೆತಕ್ಕೆ ಪಕ್ಕದ ಮನೆಯ ಬುತ್ತಿರೊಟ್ಟಿಗೂ ಕೊಕ್ಕೆ ಬಿದ್ದು ಸುಸ್ತಾಗಿದ್ದ ಹಳ್ಳಿಗರು, ಉಂಡಿ ಕಟ್ಟಿ ಪರಸ್ಪರ ಹಂಚಿಕೊಂಡು ತಿನ್ನುವುದಕ್ಕೂ ಹಿಂದೇಟು ಹಾಕಿದ್ದರು. ಅಷ್ಟೇಯಲ್ಲ, ಸ್ವತಃ ಗ್ರಾಮ ಪಂಚಾಯಿತಿಗಳೇ ಕೊರೊನಾದಿಂದಾಗಿ ಅಕ್ಕತಂಗಿಯರನ್ನು ಪರ ಊರುಗಳಿಂದ ತಮ್ಮ ಗ್ರಾಮಕ್ಕೆ ಕರೆದುಕೊಂಡು ಬರದಂತೆ ಡಂಗೂರ ಸಾರಿಸಿ ಬಿಟ್ಟಿದ್ದು ಇನ್ನೂ ಕಣ್ಣ ಮುಂದೆಯೇ ಇದೆ. ಆದರೆ ಈ ವರ್ಷ ಕೊರೊನಾ ಭಯದಿಂದ ಕೊಸರಿಕೊಂಡು ಮೇಲೆದ್ದಿರುವ ಹಳ್ಳಿಗರು ಮಾತ್ರ ನಾಗರ ಪಂಚಮಿ ಹಬ್ಬವನ್ನು ಜೋರಾಗಿ ಆಚರಿಸಲು ಸಜ್ಜಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಜೋಕಾಲಿ ಹಬ್ಬಕ್ಕೆ ಸೋಮವಾರ ನಾಗಪ್ಪನಿಗೆ ಹಾಲೆರೆಯುವ ಮೂಲಕ ಚಾಲನೆ ಲಭಿಸಲಿದೆ. ಮರುದಿನ ಪಂಚಮಿ, ಮೋಜು ಮಸ್ತಿ ಕೊನೆಯ ದಿನ ಕೆರಾಂಬಲಿ ಕರಿಗಡಿನ ಎಡೆ ಭೂಮಿ ತಾಯಿಗೆ ಸಮರ್ಪಣೆ ಮಾಡುವ ಪದ್ಧತಿಯೊಂದಿಗೆ ಕೊನೆಗೊಳ್ಳಲಿದೆ.
Related Articles
Advertisement
ನಗರದಲ್ಲೂ ಸಂಭ್ರಮ: ಧಾರವಾಡ, ಹುಬ್ಬಳ್ಳಿ ಮಹಾ ನಗರದಲ್ಲೂ ಅಲ್ಲಲ್ಲಿ ಮಹಿಳೆಯರು ಸಂಘಟಿತರಾಗಿ ಪಂಚಮಿ ಹಬ್ಬವನ್ನು ಜೋರಾಗಿ ಆಚರಿಸುತ್ತಿದ್ದಾರೆ. ಧಾರವಾಡದ ಜಾನಪದ ಸಂಶೋಧನಾ ಸಂಸ್ಥೆ, ಜಾನಪದ ಸಂಸ್ಕೃತಿ ಪ್ರತಿಷ್ಠಾನ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ನಾಗರ ಹುತ್ತಗಳಿಗೆ ಹಾಲೆರದು, ಉಂಡಿ ತಿಂದು, ಜೋಕಾಲಿ ಜೀಕಿ ಸಂಭ್ರಮ ಪಡುತ್ತಿದ್ದಾರೆ. ಒಂದು ದಿನ ಮುಂಚಿತವಾಗಿಯೇ ಪಂಚಮಿ ಹಬ್ಬ ಆಚರಿಸಿ ನಾಗರ ಪಂಚಮಿ ಹಬ್ಬದ ಮಹತ್ವ ಕುರಿತು ಜಾಗೃತಿ ಮೂಡಿಸಿರುವ ಸಂಘ ಸಂಸ್ಥೆಗಳು ನಗರ ಜೀವನದಲ್ಲೂ ಹಳ್ಳಿಹಬ್ಬವೊಂದರ ಸಂಭ್ರಮಾಚರಣೆ ಮಾಡಿದ್ದು ವಿಶೇಷ.
ಹಾಲೆರೆಯುವ ನೆಪ; ಬಾಂಧವ್ಯದ ಜಪ ನಾಗರ ಪಂಚಮಿ ನಾಡಿಗೆ ದೊಡ್ಡದು ನಾ ಹೆಂಗ ಮರಿಲವ್ವ ನಾರಿ ನನ್ನ ತವರೂರ ಎಂದು ಹಾಡು ಹೇಳುವ ಜನಪದರಿಗೆ ಪಂಚಮಿ ಹಬ್ಬವೇ ಮಹಿಳೆಯರ ಪಾಲಿಗೆ ನಾಡ ಹಬ್ಬ. ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿವರ್ಷ ನೆನಪಿಸುವ ಉತ್ತರ ಕರ್ನಾಟಕ ಭಾಗದ ಈ ಸಂಪ್ರದಾಯ ಪಂಚಮಿ ಹಬ್ಬ ಉಳಿದಾವ ದಿನ ನಾಕ ಅಣ್ಣ ಬರಲಿಲ್ಲ ಯಾಕ ಕರಿಲಾಕ ಎನ್ನುವ ಜನಪದ ಹಾಡು ಹುಕ್ಕೇರಿ ಬಾಳಪ್ಪನವರಿಂದಲೇ ಪ್ರಸಿದ್ಧಿ ಪಡೆಯಿತು. ಹಾಲೆರೆಯುವುದು ಇಲ್ಲಿ ಬರೀ ನೆಪಮಾತ್ರವಾಗಿದ್ದು, ಅಣ್ಣ-ತಂಗಿಯರ ನಡುವಿನ ಆತ್ಮೀಯ ಬಾಂಧವ್ಯವೇ ನಾಗರ ಪಂಚಮಿ ಹಬ್ಬದ ಮೂಲ ಆಶಯ. ಅಂತಹ ಹಬ್ಬವೇ ಕೊರೊನಾದಿಂದ ತೆರೆಗೆ ಸರಿದಿತ್ತು. ಇದೀಗ ಕೊರೊನಾದಿಂದ ಕೊಸೆರೆದ್ದಿರುವ ಜನರು ಈ ವರ್ಷ ಸಂಭ್ರಮಕ್ಕೆ ಸಜ್ಜಾಗಿದ್ದಾರೆ.
ನಾಗರ ಪಂಚಮಿ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ನಗರ ವಾಸಿಗಳಲ್ಲಿ ಮಹಿಳೆಯರು ಸಂಘಟಿತವಾಗಿ ಹಬ್ಬ ಆಚರಿಸುವುದು ಕಷ್ಟ. ಆದರೆ ಈ ಕುರಿತು ನಾವು ಜಾಗೃತಿ ಮೂಡಿಸಿ ಉಂಡಿ, ಉಸುಳಿ, ಒಳ್ಳೊಳ್ಳೆ ತಿಂಡಿ ಮಾಡಿಸಿ ಒಟ್ಟಿಗೆ ಸೇರಿ ಪಂಚಮಿ ಹಬ್ಬವನ್ನು ಕಳೆದ 20 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಕೊರೊನಾ ಭಯದಿಂದ ಹೊರ ಬಂದು ಈ ವರ್ಷ ಇನ್ನಷ್ಟು ಖುಷಿಯಿಂದ ಪಂಚಮಿ ಹಬ್ಬ ಆಚರಿಸುತ್ತಿದ್ದೇವೆ. –ವಿಶ್ವೇಶ್ವರಿ ಹಿರೇಮಠ, ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ
ಅಣ್ಣ ತಂಗಿಯರು ಬಂಧು-ಬಳಗವೆಲ್ಲ ಸೇರಿಕೊಂಡು ಸಂಭ್ರಮಿಸುವ ನಾಗರ ಪಂಚಮಿ ಎರಡು ವರ್ಷ ಕೊರೊನಾದಿಂದ ಕಳೆಗುಂದಿತ್ತು. ಆದರೆ ಈ ವರ್ಷ ದೇವರು ಎಲ್ಲವನ್ನೂ ಚೆನ್ನಾಗಿ ಇಟ್ಟಿದ್ದು, ಪಂಚಮಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದ್ದೇವೆ. –ಸನ್ಮತಿ ಅಂಗಡಿ, ರಂಗಭೂಮಿ ಹಿರಿಯ ಕಲಾವಿದ
-ಡಾ|ಬಸವರಾಜ ಹೊಂಗಲ್