Advertisement

ನಾಡೋಜ ಪಾಟೀಲ ಪುಟ್ಟಪ್ಪ ವಿಧಿವಶ: ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಗಣ್ಯರ ಸಂತಾಪ

10:00 AM Mar 18, 2020 | Mithun PG |

ಬೆಂಗಳೂರು: ನಾಡೋಜ ಪುರಸ್ಕೃತರಾದ ಪಾಟೀಲ್ ಪುಟ್ಟಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸೇರಿಂದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ನಾಡೋಜ ಪಾಟೀಲ್ ಪುಟ್ಟಪ್ಪನವರು ಗುಣಮುಖರಾಗಿ ಬರಲಿ ಎಂಬ ನಮ್ಮೆಲ್ಲರ ಪ್ರಾರ್ಥನೆ ಫಲಿಸಲಿಲ್ಲ. ಕರ್ನಾಟಕದ ಏಕೀಕರಣ ಚಳುವಳಿಯಿಂದ ಹಿಡಿದು – ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಮಾಡಿದ ಪ್ರತಿಯೊಂದು ಕಾರ್ಯವೂ ಅವಿಸ್ಮರಣೀಯ. ರಾಜ್ಯಸಭಾ ಸದಸ್ಯರಾಗಿ ದೆಹಲಿಯಲ್ಲಿ ಕನ್ನಡ ಡಿಂಡಿಮ ಬಾರಿಸಿದ್ದು ಮಾತ್ರವಲ್ಲ, ಪತ್ರಿಕೋದ್ಯಮಕ್ಕೆ ಅವರ ಕೊಡುಗೆ ಅಪಾರ. ನಿನ್ನೆಯಷ್ಟೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆ. ಪಾಪು ಗುಣಮುಖರಾಗುತ್ತಾರೆ ಎಂಬ ಭರವಸೆ ಇತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖ ಭರಿಸುವ ಶಕ್ತಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದೊರೆಯಲಿ. ಓಂ ಶಾಂತಿ ಎಂದು ಸಿಎಂ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದಾರೆ.

ಹಿರಿಯ ಪತ್ರಕರ್ತ, ಕನ್ನಡದ ಕಟ್ಟಾಳು ಮತ್ತು ರಾಜ್ಯಸಭೆಯ ಮಾಜಿ ಸದಸ್ಯರಾದ ಪಾಟೀಲ್ ಪುಟ್ಟಪ್ಪ ಅವರ ಅಗಲಿಕೆಯಿಂದ ನಾಡು-ನುಡಿ ಬಡವಾಗಿದೆ.ರಾಜ್ಯದ ನೆಲ-ಜಲ-ಭಾಷೆಯ ರಕ್ಷಣೆಗಾಗಿ ಸದಾ ಟೊಂಕಕಟ್ಟಿ ನಿಲ್ಲುತ್ತಿದ್ದ ಪಾಪು ಕನ್ನಡದ   ನಿಷ್ಠಾವಂತ ಕಾವಲುಗಾರರಾಗಿದ್ದರು. ಅವರ ಗೆಳೆಯರು ಮತ್ತು ಕುಟುಂಬದವರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಶತಾಯುಷಿ ಗಳಾಗಿದ್ದ ಪಾಟೀಲ್ ಪುಟ್ಟಪ್ಪ ಅವರು ಕನ್ನಡದ ದಿಟ್ಟ ಹೋರಾಟಗಾರರಾಗಿ ಏಕೀಕರಣದ ರೂವಾರಿಗಳಾಗಿ ನಾಡಿನ ಭಾಷೆ, ಸಂಸ್ಕೃತಿಗೆ ಅಪಾರವಾದ ಕಾಣಿಕೆ ಸಲ್ಲಿಸಿದ್ದರು. ಅತ್ಯುತ್ತಮ ಸಾಹಿತಿಯಾಗಿ 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರು  ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದರು. ಹಾಗೆಯೇ ಪತ್ರಕರ್ತರಾಗಿ ತಮ್ಮ ಕೊನೆಯ ದಿನಗಳವರೆಗೂ ವೃತ್ತಿ ಪ್ರೀತಿಯನ್ನು ಉಳಿಸಿಕೊಂಡಿದ್ದರು.

ನಮ್ಮೆಲ್ಲರ ಕನ್ನಡ ಕಣ್ಮಣಿ ಪಾಟೀಲ್ ಪುಟ್ಟಪ್ಪ ಅವರು ನಮ್ಮನ್ನು ಬಿಟ್ಟು ಆಗಲಿರುವುದು ನಾಡಿಗೆ ತುಂಬಲಾರದ ನಷ್ಟವಾಗಿದೆ. ಇವರ ಅಗಲಿಕೆಯಿಂದ ಅವರ ಕುಟುಂಬದವರಿಗೆ ಮತ್ತು ಅವರ ಅಭಿಮಾನಿಗಳು ಮತ್ತು ಶಿಷ್ಯ ಸಮೂಹಕ್ಕೆ ಆಗಿರುವ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು ದಯಪಾಲಿಸಲಿ ಎಂದು ಡಿ.ಕೆ. ಶಿವಕುಮಾರ್ ಅವರು ಸಂತಾಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

ಪಾಪು ಎಂಬ ಕಾವ್ಯನಾಮದಿಂದಲೇ ಖ್ಯಾತರಾದವರು ಪಾಟೀಲ ಪುಟ್ಟಪ್ಪ. ಕನ್ನಡ ಸಾಹಿತ್ಯ ಮತ್ತು ಪತ್ರಿಕಾ ರಂಗದಲ್ಲಿ ಬಹುದೊಡ್ಡ ಹೆಸರು ಗಳಿಸಿದವರು. ಬೆಳಗಾವಿಯಲ್ಲಿ ನಡೆದ 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪಾಪು ಅವರು ಕನ್ನಡ ನಾಡು, ನುಡಿಗಾಗಿ ಜೀವನದುದ್ದಕ್ಕೂ ಶ್ರಮಿಸಿದವರು. ಇಂದು ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ಸಾವು ಇಡೀ ಕರ್ನಾಟಕಕ್ಕೆ ತುಂಬಲಾರದ ಬಹುದೊಡ್ಡ ನಷ್ಟ. ಅವರ ಕುಟುಂಬದವರಿಗೆ  ಮತ್ತು ಅನುಯಾಯಿಗಳಿಗೆ ಈ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಧೀಮಂತ ನಾಯಕನಿಗೆ ಭಾವಪೂರ್ವ ವಿದಾಯಗಳು ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಹಿರಿಯ ಪತ್ರಕರ್ತ, ಶತಾಯುಷಿ, ನಾಡೋಜ ಪಾಟೀಲ ಪುಟ್ಟಪ್ಪ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಂತಾಪ ಸೂಚಿಸಿದ್ದು, ಕರ್ನಾಟಕ ಏಕೀಕರಣದ ರೂವಾರಿಗಳೂ, ನಾಡುನುಡಿಗಾಗಿ ಶ್ರಮಿಸಿದ ಧೀಮಂತ ವ್ಯಕ್ತಿ. ಅವರ ನಿಧನದಿಂದ ಕನ್ನಡ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ನಾಡೋಜ ಪುರಸ್ಕೃತರಾದ ಪಾಟೀಲ್ ಅಗಲಿಕೆಯಿಂದ ಸಾರಸತ್ವ ಲೋಕ ಬಡವಾಗಿದೆ. ಈ ಅಗಲಿಕೆಯನ್ನು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಸಹಕಾರ ಸಚಿವರಾದ ಎಸ್. ಟಿ. ಸೋಮಶೇಖರ್ ರವರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next