Advertisement

ರೈತರ ಸಾಲಕ್ಕೆ ನಬಾರ್ಡ್‌ ಮೊರೆ

11:42 PM Aug 16, 2019 | Lakshmi GovindaRaj |

ಬೆಂಗಳೂರು: ಪ್ರಸಕ್ತ ವರ್ಷ ಸಹಕಾರ ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಹಣ ಹೊಂದಿಸಲು ಕೇಂದ್ರ ಸರ್ಕಾರದ ಮೂಲಕ ನಬಾರ್ಡ್‌ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರೈತರಿಗೆ ಸಾಲ ನೀಡಲು ನಬಾರ್ಡ್‌ ಈ ಹಿಂದೆ ಶೇ.85ರಷ್ಟು ಹಣಕಾಸು ನೆರವು ನೀಡುತ್ತಿತ್ತಾದರೂ ಅದನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶೇ.60 ರಿಂದ 65ಕ್ಕೆ ಇಳಿಸಲಾಗಿತ್ತು. ಹೀಗಾಗಿ, ಮತ್ತೆ ಶೇ.85ರಷ್ಟು ನೆರವು ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.

Advertisement

ಈ ವರ್ಷ 32 ಲಕ್ಷ ರೈತರಿಗೆ 13 ಸಾವಿರ ಕೋಟಿ ರೂ.ಸಾಲ ನೀಡುವ ಗುರಿ ಹೊಂದಿರುವುದರಿಂದ ಪ್ರವಾಹ ಮತ್ತಿತರ ಕಾರಣಗಳಿಂದ ಸಂಪನ್ಮೂಲ ಕ್ರೋಢೀಕರಣ ಕಷ್ಟ. ಹಾಗೆಂದು ಸಂಕಷ್ಟದಲ್ಲಿರುವ ರೈತರಿಗೆ ಸಾಲ ನೀಡದಿರುವಂತೆಯೂ ಇಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿಲ್ಲದ ಕಾರಣ ರೈತರಿಗೆ ಸಾಲ ನೀಡಲು ನಬಾರ್ಡ್‌ ನಿಂದ ಹೆಚ್ಚುವರಿ ನೆರವು ಪಡೆಯುವುದು ಸರ್ಕಾರದ ಲೆಕ್ಕಾಚಾರವಾಗಿದೆ.

ಪ್ರಸ್ತಾವನೆ ಸಿದ್ಧ: ಈಗಾಗಲೇ ಈ ಕುರಿತು ಸಹಕಾರ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ನಬಾರ್ಡ್‌ನಿಂದ ಹೆಚ್ಚುವರಿ ಯಾಗಿ ಹಣಕಾಸು ನೆರವು ಪಡೆಯುವ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ವರ್ಷ ಹೊಸದಾಗಿ 10 ಲಕ್ಷ ರೈತರಿಗೆ ಕನಿಷ್ಠ ತಲಾ 30 ಸಾವಿರ ರೂ.ವರೆಗೆ ಸಾಲ ನೀಡುವ ಗುರಿ ಹಮ್ಮಿಕೊಳ್ಳಲಾಗಿತ್ತು. ಆಗ ಸಹಕಾರ ಸಚಿವರಾಗಿದ್ದ ಬಂಡೆಪ್ಪ ಕಾಶೆಂಪೂರ್‌ ಅವರು ಹತ್ತು ಲಕ್ಷ ಹೊಸ ರೈತರ ಸೇರ್ಪಡೆ ಸಂಬಂಧ 2-3 ಹಂತದ ಸಭೆಗ ಳನ್ನು ನಡೆಸಿ, ರೂಪುರೇಷೆ ಸಿದ್ಧಪಡಿಸಿದ್ದರು. ಈಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಅಧಿಕಾರಿಗಳು ಆದೇಶಕ್ಕಾಗಿ ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

2018ರಲ್ಲಿ 22 ಲಕ್ಷ ರೈತರು 9 ಸಾವಿರ ಕೋಟಿ ರೂ.ಸಾಲ ಪಡೆದಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್‌.ಡಿ.ಕುಮಾರ ಸ್ವಾಮಿಯವರು ಸಾಲ ಮನ್ನಾ ಘೋಷಣೆ ಮಾಡಿದ್ದರಿಂದ ಆ ಪ್ರಕ್ರಿಯೆ ಯಡಿ ಸಹಕಾರ ಸಂಘಗಳಲ್ಲಿನ 11.20 ಲಕ್ಷ ರೈತರ 4,830 ಕೋಟಿ ರೂ.ಸಾಲ ಮನ್ನಾ ಆಗಿತ್ತು. ವಾಣಿಜ್ಯ ಬ್ಯಾಂಕುಗಳಲ್ಲಿ 7.49 ರೈತರು ಪಡೆದಿರುವ 3,929 ಕೋಟಿ ರೂ. ಮನ್ನಾ ಆಗಿತ್ತು.

Advertisement

ಹೀಗಾಗಿ, ವಾಣಿಜ್ಯ ಹಾಗೂ ಸಹಕಾರ ಬ್ಯಾಂಕುಗಳ ಒಟ್ಟು 18.70 ಲಕ್ಷ ರೈತರ 8,759 ಕೋಟಿ ರೂ.ಮನ್ನಾ ಆದಂತಾಗಿದೆ. ಸಾಲ ಮನ್ನಾ ಬಾಬ್ತಿನ ಕೊನೆಯ ಕಂತು ಆರ್ಥಿಕ ಇಲಾಖೆ ಮುಂದಿದ್ದು, ಮುಂದಿನ ವಾರ ಒಪ್ಪಿಗೆ ದೊರೆತು ಹಣ ಬಿಡುಗಡೆ ಯಾಗುವ ಸಾಧ್ಯತೆಯಿದೆ. ಸಾಲ ಮನ್ನಾ ಅವಧಿ ಮುಗಿಯುತ್ತಿದ್ದಂತೆ ಹೊಸದಾಗಿ ಸುಮಾರು 4,500 ಕೋಟಿ ರೂ.ಸಾಲಕ್ಕೆ ಬೇಡಿಕೆಯೂ ಬಂದಿದೆ ಎಂದು ಸಹಕಾರ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

ಬ್ಯಾಂಕರುಗಳ ಸಮಿತಿ ಸಭೆ: ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ರೈತರಿಗೆ ಹೊಸದಾಗಿ ಸಾಲ ನೀಡುವ ಸಂಬಂಧ ಸದ್ಯದಲ್ಲೇ ಬ್ಯಾಂಕರುಗಳ ಸಮಿತಿ ಸಭೆ ಕರೆಯಲು ನಿರ್ಧರಿ ಸಲಾಗಿದೆ. ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬ್ಯಾಂಕರು ಗಳ ಸಮಿತಿ ಸಭೆ ಕರೆಯಲಾಗುವುದು. ಬರ ಹಾಗೂ ಪ್ರವಾಹದಿಂದ ರೈತರು ಸಂಕಷ್ಟದಲ್ಲಿರುವುದರಿಂದ ರೈತರಿಗೆ ಹೊಸ ಸಾಲ ನೀಡಲು ನಿರ್ದೇಶನ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next