ಬೆಂಗಳೂರು: ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಆಚರಣೆ ಸಂಭ್ರಮ ಬುಧವಾರ ಸಿಲಿಕಾನ್ ಸಿಟಿಯಲ್ಲೂ ಕಳೆಗಟ್ಟಿತ್ತು. ಜಿಟಿ ಜಿಟಿ ಮಳೆ ಹಾಗೂ ಸ್ವಾತಂತ್ರೋತ್ಸವದ ಸಂಭ್ರಮ ಹಬ್ಬಕ್ಕೆ ಮತ್ತಷ್ಟು ಮೆರುಗು ತಂದಿತ್ತು.
ಮಲ್ಲೇಶ್ವರದಲ್ಲಿರುವ ಕಾಡುಮಲ್ಲೇಶ್ವರ ದೇವಾಲಯ, ಓಕಳಿಪುರ ಸಮೀಪದ ಅಮ್ಮ ನಾಗಮ್ಮ ದೇವಾಲಯ, ಗವಿಪುರದ ಗವಿ ಗಂಗಾಧರೇಶ್ವರ ದೇವಾಲಯ, ಸಜ್ಜನ ರಾವ್ ವೃತ್ತ, ಮೈಸೂರು ರಸ್ತೆಯ ದೊಡ್ಡಆಲದ ಮರ, ಪಾದುರಾಯನಪುರ, ಹಲಸೂರು ಸೇರಿದಂತೆ ಇನ್ನಿತರೆ ದೇವಾಲಯಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಿತ್ತು.
ಹಬ್ಬದ ಅಂಗವಾಗಿ ದೇವರಿಗೆ ತಂಬಿಲೆ ಸೇವೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕದಂಥ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಜತೆಗೆ ನಗರದ ವಿವಿಧೆಡೆ ಇರುವ ಈಶ್ವರ ಹಾಗೂ ಸುಬ್ರಹ್ಮಣ್ಯೇಶ್ವರ ದೇವಾಲಯಗಳು, ಅರಳೀ ಕಟ್ಟೆಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ನಾಗರಮೂರ್ತಿಗಳು ಹಾಗೂ ಹುತ್ತಗಳಿಗೆ ಮಹಿಳೆಯರು ಶ್ರದ್ಧಾಭಕ್ತಿಯಿಂದ ಹಾಲೆರೆದು ಭಕ್ತಿ ಸಮರ್ಪಿಸಿದರು.
ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಂಡಿದ್ದ ಮಹಿಳೆಯರು ನಾಗಮೂರ್ತಿಗಳಿಗೆ ಹಂಗುನೂಲು ಸುತ್ತಿ ಪ್ರದಕ್ಷಿಣೆ ಹಾಕಿದರು. ಅಲ್ಲದೆ, ಪಂಚಮಿಯ ಹಬ್ಬಕ್ಕೆ ತಯಾರಿಸಿದ್ದ ತರತರಹದ ಉಂಡೆ, ಕಜ್ಜಾಯ, ನೆನೆದ ಕಡಲೆಕಾಳುಗಳನ್ನು ನೈವೇದ್ಯವಾಗಿ ಅರ್ಪಿಸಿದರು. ಜನ ನಾಗರ ಪಂಚಮಿ ಆಚರಿಸುತ್ತಾ ಶುಭಾಶಯಳನ್ನು ಪರಸ್ಪರ ವಿನಿಮಯ ಮಾಡಿಕೊಂಡು, ಪ್ರಸಾದ ಹಂಚುತ್ತಿದ್ದ ದೃಶ್ಯಗಳು ಕಂಡುಬಂತು.
ಹೂವು ಹಣ್ಣು/ ತಿಂಡಿ ತಿನಿಸುಗಳ ಮಾರಾಟವೂ ಜೋರು: ಸ್ವಾತಂತ್ರೊತ್ಸವ ಹಾಗೂ ನಾಗರ ಪಂಚಮಿ ಹಬ್ಬ ಹಿನ್ನೆಲೆಯಲ್ಲಿ ಹೂವು, ಹಣ್ಣು ಮಾರಾಟವೂ ಜೋರಾಗಿತ್ತು. ಅಲ್ಲದೆ, ಉತ್ತರಕರ್ನಾಟಕದ ಭಾಗದ ನಾಗರ ಪಂಚಮಿಯ ವಿಶೇಷ ತಿನಿಸುಗಳಾದ ತಂಬಿಟ್ಟು, ಅಳ್ಳಿನ ಉಂಡಿ, ಎಳ್ಳುಂಡಿ, ಶೇಂಗಾ ಉಂಡಿ, ನವಣೆ ಉಂಡಿ, ಬೂಂದಿ ಉಂಡಿ, ಅಂಟಿನ ಉಂಡಿ, ಬೇಸನ್ ಉಂಡಿ, ಚಕ್ಕುಲಿ, ನಿಪ್ಪಟ್ಟು, ಅವಲಕ್ಕಿ, ಮಂಡಕ್ಕಿ ವ್ಯಾಪಾರವೂ ಹೆಚಿತ್ತು.