ಸೋಲ್ : ಅಮೆರಿಕ ಮತ್ತು ದಕ್ಷಿಣ ಕೊರಿ ಜಂಟಿ ನೌಕಾ ಸಮರಾಭ್ಯಾಸವನ್ನು ಕೈಗೊಳ್ಳುವುದಕ್ಕೆ ಮುನ್ನವೇ ಉತ್ತರ ಕೊರಿ ಅಣ್ವಸ್ತ್ರ ಕ್ಷಿಪಣಿಯನ್ನು ಹಾರಿಸಲು ಉದ್ದೇಶಿಸಿರುವುದಾಗಿ ಸರಕಾರಿ ಮೂಲಗಳನ್ನು ಉಲ್ಲೇಖೀಸಿ ವರದಿಯೊಂದು ತಿಳಿಸಿದೆ.
ಮುಂದಿನ ವಾರದಲ್ಲಿ ಅಮೆರಿಕ ನಡೆಸಲಿರುವ ಜಂಟಿ ನೌಕಾ ಸಮರಾಭ್ಯಾಸದ ನೇತೃತ್ವವನ್ನು ಅಮೆರಿಕದ ವಿಮಾನ ವಾಹಕ ಸಮರ ನೌಕೆ ವಹಿಸಲಿದೆ ಎಂದು ಅಮೆರಿಕ ನೌಕಾ ಪಡೆ ಹೇಳಿದೆ.
ಸಮರೋತ್ಸಾಹಿ ಉತ್ತರ ಕೊರಿಯದ ಎಗ್ಗಿಲ್ಲದೆ ನಡೆಸುತ್ತಿರುವ ಅಣ್ವಸ್ತ್ರ ಕಾರ್ಯಕ್ರಮದಿಂದ ಉಂಟಾಗಿರುವ ಉದ್ವಿಗ್ನತೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಅಮೆರಿಕವು ದಕ್ಷಿಣ ಕೊರಿಯ ಜತೆಗೆ ಸೇರಿಕೊಂಡು ಮುಂದಿನ ವಾರ ನಡೆಸಲಿರುವ ನೌಕಾ ಸಮರಾಭ್ಯಾಸವು ಉತ್ತರ ಕೊರಿಯ ವಿರುದ್ಧದ ಹೊಸ ಬಲಪ್ರದರ್ಶನವಾಗಲಿದೆ ಎಂದು ಅಮೆರಿಕ ಹೇಳಿದೆ.
ಈ ಮೊದಲಿನ ಅಮೆರಿಕದ ಜಂಟಿ ಸಮಾರಾಭ್ಯಾಸಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಉತ್ತರ ಕೊರಿಯ, ಈ ಹೊಸ ಸಮರಾಭ್ಯಾಸದಿಂದ ಇನ್ನಷ್ಟು ಕಿಡಿ ಕಾರುವ ನಿರೀಕ್ಷೆ ಇದೆ.
ಡೋಂಗಾ ಇಲ್‌ಬೋ ದಿನಪತ್ರಿಕೆ ಸರಕಾರಿ ಮೂಲಗಳನ್ನು ಉಲ್ಲೇಖೀಸಿ ಮಾಡಿರುವ ವರದಿಯ ಪ್ರಕಾರ ಉತ್ತರ ಕೊರಿ ತನ್ನ ಅಣ್ವಸ್ತ್ರ ಕ್ಷಿಪಣಿಗಳ ಉಡಾವಣೆಗೆ ವೇದಿಕೆಯನ್ನು ಸಜ್ಜುಗೊಳಿಸಿದೆ. ಪಾಂಗ್‌ಯಾಂಗ್ ಮತ್ತು ಉತ್ತರ ಫಯೋಂಗಾನ್ ಪ್ರಾಂತ್ಯದಲ್ಲಿನ ರಹಸ್ಯ ದಾಸ್ತಾನು ಕೇಂದ್ರದಿಂದ ಉತ್ತರ ಕೊರಿಯ ತನ್ನ ಅಣ್ವಸ್ತ್ರ ಕ್ಷಿಪಣಿಗಳನ್ನು ಹೊರ ತಂದು ಉದ್ದೇಶಿತ ಸ್ಥಳಗಳಿಗೆ ಒಯ್ಯುತ್ತಿದೆ.