ಯಂಗೂನ್: ಮ್ಯಾನ್ಮಾರ್‌ನಲ್ಲಿ ಅಲ್ಲಿನ ಸೇನೆ ನಡೆಸಿದ ಗೋಲಿಬಾರ್‌ಗೆ ಮಕ್ಕಳೂ ಸೇರಿದಂತೆ 100ಕ್ಕಿಂತಲೂ ಹೆಚ್ಚು ಸಾವು ಸಂಭವಿಸಿರುವುದನ್ನು ಜಗತ್ತಿನ ನಾನಾ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.
ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್, ಜಪಾನ್ ಸೇರಿದಂತೆ 12 ರಾಷ್ಟ್ರಗಳ ಗೃಹ ಸಚಿವರು ಈ ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಜೆಗಳನ್ನು ರಕ್ಷಿಸಬೇಕಾದ ಸೇನೆಯೇ ತನ್ನ ಪ್ರಜೆಗಳ ಮೇಲೆ ಗುಂಡಿನ ಮಳೆಗರೆದಿರುವುದು ಬೇಸರದ ಸಂಗತಿ.
ಈ ಘಟನೆಯಿಂದ ತನ್ನ ಘನತೆಯನ್ನು ಕಳೆದುಕೊಂಡಿರುವ ಸೇನೆ, ಆ ಗೌರವವನ್ನು ಮರಳಿ ಪಡೆಯುವ ಕೆಲಸಕ್ಕೆ ಕೈ ಹಾಕಬೇಕು. ಪ್ರಜೆಗಳ ವಿರುದ್ಧ ಉಗ್ರ ಕ್ರಮಗಳನ್ನು ಜಾರಿಗೊಳಿಸುವುದನ್ನು ಈ ಕೂಡಲೇ ನಿಲ್ಲಿಸಿ, ಶಾಂತಿ ಮಾತುಕತೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ :ಮಹಿಳೆಯರ ಅರೆಬೆತ್ತಲೆ ಫೋಟೋ ಕುರಿತು ನಟಿ ತಾಪ್ಸಿ ಪನ್ನು ಹೇಳಿದ್ದೇನು?
ಫೆಬ್ರವರಿಯಲ್ಲಿ, ಮ್ಯಾನ್ಮಾರ್ ನಾಯಕಿ ಆಂಗ್‌ಸಾನ್ ಸೂಕಿಯವರ ಚುನಾಯಿತ ಸರ್ಕಾರವನ್ನು ಬರಖಾಸ್ತುಗೊಳಿಸಿರುವ ಸೇನೆ, ಇಡೀ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದು, ಆಗಿನಿಂದ ಅಲ್ಲಿ ಆಂತರಿಕ ದಂಗೆಗಳು ಭುಗಿಲೆದ್ದಿವೆ. ಪ್ರತಿಭಟನಾಕಾರರ ಮೇಲೆ ಸೇನೆ ನಡೆಸಿರುವ ಗುಂಡಿನ ದಾಳಿಗೆ ಶನಿವಾರದಂದು ಅಸುನೀಗಿದವರೂ ಸೇರಿದಂತೆ 423 ಜನರು ಸಾವನ್ನಪ್ಪಿದ್ದಾರೆ.