ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ನಿರಾಶಾದಾಯಕ ನಿರ್ವಹಣೆಗೆ ದ್ವೇಷದ ಹೇಳಿಕೆಗಳೂ ಒಂದುಮಟ್ಟಕ್ಕೆ ಕಾರಣವಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿ ಚುನಾವಣಾ ಪ್ರಚಾರ ಸಂದರ್ಭಗಳಲ್ಲಿ ಪಕ್ಷದ ವಿವಿಧ ನಾಯಕರು ಎದುರಾಳಿ ಅಭ್ಯರ್ಥಿಗಳ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದರು ಮತ್ತು ಚುನಾವಣಾ ಆಯೋಗದ ಕೆಂಗಣ್ಣಿಗೂ ಗುರಿಯಾಗಿದ್ದರು.
ಟೈಮ್ಸ್ ನೌ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈ ವಿಚಾರದ ಕುರಿತಂತೆ ಪ್ರಶ್ನಿಸಿದಾಗ ಅವರು, ‘ಪಕ್ಷದ ನಾಯಕರು ನೀಡಿದ್ದ ದ್ವೇಷಪೂರಿತ ಹೇಳಿಕೆಗಳು ಫಲಿತಾಂಶದಲ್ಲಿ ನಮಗೆ ಹಿನ್ನಡೆಯಾಗಲು ಪ್ರಮುಖ ಕಾರಣವಾಗಿರಬಹುದೆಂದು ನಮಗನಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.
ನಮ್ಮ ನಾಯಕರು ಆ ರೀತಿಯ ಹೇಳಿಕೆಗಳನ್ನು ನೀಡಬಾರದಿತ್ತು ಎಂದೂ ಸಹ ಬಿಜೆಪಿಯ ಮಾಜೀ ರಾಷ್ಟ್ರಾಧ್ಯಕ್ಷರೂ ಆಗಿರುವ ಅಮಿತ್ ಶಾ ಅಭಿಪ್ರಾಯಪಟ್ಟರು. ದೆಹಲಿ ಚುನಾವಣಾ ಪ್ರಚಾರ ಸಂದರ್ಭಗಳಲ್ಲಿ ಬಿಜೆಪಿಯ ನಾಯಕರು, ‘ಗೋಲಿ ಮಾರೋಂ’, ಮತ್ತು ದೆಹಲಿ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ಥಾನ ನಡುವಿನ ಕ್ರಿಕೆಟ್ ಪಂದ್ಯಾಟಕ್ಕೆ ಹೋಲಿಸಿದ್ದು ಮುಂತಾದ ವಿಚಾರಗಳು ರಾಷ್ಟ್ರರಾಜಧಾನಿಯಲ್ಲಿ ಕಮಲ ಅರಳುವಲ್ಲಿ ತೊಡಕಾಯಿತು ಎಂದು ಶಾ ಅಭಿಪ್ರಾಯಪಟ್ಟರು.
ದ್ವೇಷಪೂರಿತ ಮತ್ತು ಆಕ್ಷೇಪಣಾಕಾರಿ ಹೇಳಿಕೆಗಳನ್ನು ನೀಡಿದ್ದ ಕಾರಣಕ್ಕಾಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದ ಪರ್ವೇಶ್ ವರ್ಮಾ ಮತ್ತು ಬಿಜೆಪಿಯ ಮಾಡೆಲ್ ಟೌನ್ ಅಭ್ಯರ್ಥಿ ಕಪಿಲ್ ಮಿಶ್ರಾ ಅವರನ್ನು ಚುನಾವಣಾ ಪ್ರಚಾರ ನಡೆಸುವುದಕ್ಕೆ ಚುನಾವಣಾ ಆಯೋಗವು ಬಹಿಷ್ಕಾರ ಹಾಕಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.