ಬೆಳಗಾವಿ: ನಾಲ್ಕು ದಿನಗಳ ಹಿಂದೆಯಷ್ಟೇ ಬಿಮ್ಸ್ ನಲ್ಲಿ ನಡೆದ ಬಾಣಂತಿ ಸಾವು ಮಾಸುವ ಮುನ್ನವೇ ಈಗ ಮತ್ತೊರ್ವ ಬಾಣಂತಿ ಮಗುವಿಗೆ ಜನ್ಮ ನೀಡಿದ ಮರುದಿನವೇ ಮೃತಪಟ್ಟಿದ್ದಾರೆ.
ಗೋಕಾಕ ತಾಲೂಕಿನ ಕುಂದರಗಿ ಗ್ರಾಮದ ಪೂಜಾ ಅಡಿವೆಪ್ಪ ಖಡಕಬಾವಿ (25) ಎಂಬ ಬಾಣಂತಿ ಬಿಮ್ಸ್ ನಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಹೆರಿಗೆಗಾಗಿ ಪೂಜಾ ಡಿ. 24ರಂದು ಇಲ್ಲಿಯ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಗಂಡು ಮಗುವಿಗೆ ಪೂಜಾ ಜನ್ಮ ನೀಡಿದ್ದರು. ಮೂರು ಹೆಣ್ಣು ಮಕ್ಕಳಿರುವ ಪೂಜಾಗೆ ಇದು ನಾಲ್ಕನೇ ಪ್ರಸೂತಿಯಾಗಿತ್ತು. ಆದರೆ ಪ್ರಸೂತಿ ಬಳಿಕ ಪೂಜಾ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಸರಿಯಾಗಿ ಚಿಕಿತ್ಸೆ ಫಲಿಸದೇ ಪೂಜಾ ಮೃತಪಟ್ಟಿದ್ದಾರೆ. ಪೂಜಾಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಬಗ್ಗೆ ಬಿಮ್ಸ್ ಆಸ್ಪತ್ರೆ ಹೆರಿಗೆ ವೈದ್ಯ ವಸಂತ್ ಕಬ್ಬೂರ ಮಾಧ್ಯಮದವರೊಂದಿಗೆ ಮಾತನಾಡಿ ಡಿ.24ರಂದು ಪೂಜಾ ಎಂಬವರು ಆಸ್ಪತ್ರೆಗೆ ದಾಖಲಾಗಿದ್ದರು. ಪೂಜಾಗೆ 3 ಮಕ್ಕಳಾಗಿದ್ವು, ಒಂದು ಆಪರೇಷನ್ ಆಗಿತ್ತು. ಬಿಮ್ಸ್ ಆಸ್ಪತ್ರೆಗೆ ಬಂದಾಗಲೇ ಪೂಜಾಗೆ ಪ್ರಜ್ಞೆ ಇರಲಿಲ್ಲ. ಕೂಡಲೇ ಅವರನ್ನು ನಾವು ಐಸಿಯುಗೆ ವರ್ಗಾಯಿಸಿದ್ದೆವು ಎಂದಿದ್ದಾರೆ.
ಪೂಜಾ ಖಡಕಬಾವಿಯವರು ಮೊದಲೇ ಪ್ರಜ್ಞಾಹೀನ ಅವಸ್ಥೆಯಲ್ಲಿದ್ದರು. ಪೂಜಾಳ ಹೃದಯ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಸಾಮಾನ್ಯವಾಗಿ ಹೆರಿಗೆ ಸಮಯದಲ್ಲಿ ಹೃದಯ ದೊಡ್ಡದಾಗಿರುತ್ತದೆ. ಹೃದಯ ಸಮಸ್ಯೆ ಇತ್ತು ಚಿಕಿತ್ಸೆ ನೀಡಿದರೂ ಫಲಿಸದೇ ಬಾಣಂತಿ ಮೃತಪಟ್ಟಿದ್ದಾರೆ. ಮಗು 1.6 ಕೆಜಿ ಇದೆ, ಅದಕ್ಕೂ ಐಸಿಯುನಲ್ಲಿ ಚಿಕಿತ್ಸೆ ಕೊಡುತ್ತಿದ್ದೇವೆ. ಇದರಲ್ಲಿ ನಮ್ಮದು ಯಾವುದೇ ನಿರ್ಲಕ್ಷ್ಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.