ನೀನು ಮೌನದ ಮನೆಯ ಒಡೆಯ. ನನಗೆ ಅದರ ವಿಳಾಸವೇ ತಿಳಿಯದು. ನಿನ್ನದು ಹಳ್ಳಿ, ನನ್ನದು ಷಹರು. ಭೂಮಿಯಲ್ಲಿ ದುಡಿದು ಖುಷಿ ಪಡುವ ಜೀವ ನೀನಾದರೆ, ಕುಳಿತು ತಿಂದು ಬೆಳೆದವಳು ನಾನು.
ಅವತ್ತು ಆಫೀಸ್‌ನಲ್ಲಿ ವಿಪರೀತ ಕೆಲಸ. ಅದರ ನಡುವೆಯೂ ಮದುವೆಯ ಯೋಚನೆ ತಲೆ ಕೊರೆಯುತ್ತಿತ್ತು. ನಿನಗೆ ಕರೆ ಮಾಡಿ, “ನಂಗೆ ಈ ಮದುವೆ ಬೇಡ ಅನ್ನಿಸ್ತಾ ಇದೆ. ನೀವು ಬೇರೆ ಹುಡುಗಿಯನ್ನು ನೋಡಿಕೊಳ್ಳಿ’ ಅಂತ ಹೇಳಿಬಿಡಲೇ ಎಂದು ಒಂದೆರಡಲ್ಲ; ಸಾವಿರ ಸಲ ನನಗೆ ನಾನೇ ಕೇಳಿಕೊಂಡೆ. ಕೆಲಸದ ಒತ್ತಡದಿಂದ ತಲೆ ಸಿಡಿದು ಹೋಗುವ ಹಾಗಾಗಿತ್ತು. ಬೇಗ ಕೆಲಸ ಮುಗಿಸಿ, ರಾತ್ರಿ 9 ಗಂಟೆಗೆ ನಿನಗೆ ಕಾಲ್ ಮಾಡಿದೆ. ಕರೆ ಮಾಡುವ ಮುನ್ನ ಎದೆಯಲ್ಲಿ ನಡುಕ. ಏನೆಂದು ಮಾತು ಶುರು ಮಾಡಲಿ? ನೀನು ಬೇಡ ಅಂತ ಹೇಗೆ ಹೇಳಲಿ? ಜಾತಕ ಕೂಡುತ್ತಿಲ್ಲ ಅಂತ ಸುಳ್ಳು ಹೇಳಲೇ, ನನ್ನ- ನಿಮ್ಮ ವೃತ್ತಿ ಬೇರೆ ಬೇರೆ ಎನ್ನುವುದನ್ನೇ ನೆಪ ಮಾಡಿ ಒಲ್ಲೆ ಎನ್ನಲೇ? ಹೀಗೆ… ತಲೆತುಂಬಾ ನೂರಾರು ಪ್ರಶ್ನೆಗಳು.
ನಾನು ಕಾಲ್ ಮಾಡಿದಾಗ ನಿನ್ನ ನಂಬರ್ ಬ್ಯುಸಿ ಅಂತ ಬಂತು. ಅರ್ಧಗಂಟೆ ಬಿಟ್ಟು ಮತ್ತೆ ಮಾಡಿದರೂ, ಅದೇ ರಾಗ. ಎದೆಯಲ್ಲಿ ಏನೋ ತಳಮಳವಾಯ್ತು. ಅರೇ, ನಿನ್ನ ಮೊಬೈಲ್ ಬ್ಯುಸಿ ಬಂದರೆ ನನಗ್ಯಾಕೆ ಹೀಗೆಲ್ಲಾ ಆಗಬೇಕು ಎಂಬ ಪ್ರಶ್ನೆಗೆ ಆ ಹೊತ್ತಿಗೆ ನನ್ನಲ್ಲಿ ಉತ್ತರವಿರಲಿಲ್ಲ. ಹೀಗೆ ಚಿಂತಿಸುತ್ತಿರುವಾಗಲೇ “ಯಾರು ನೀವು?’ ಎಂಬ ಸಂದೇಶ ನಿನ್ನಿಂದ ಬಂತು. “ನಿಮಗೆ ಮದುವೆ ಪ್ರಪೋಸಲ್ ಬಂದಿರುವ ಹುಡುಗಿ ನಾನೇ’ ಎಂದು ಸಂದೇಶ ಕಳಿಸಿದ್ದಷ್ಟೇ: ಮರುಕ್ಷಣ ನೀನೇ ಕಾಲ್ ಮಾಡಿದೆ. “ಹಲೋ’ ಎಂದ ಇಬ್ಬರಿಗೂ, ಹೇಗೆ ಮಾತು ಮುಂದುವರಿಸಬೇಕೆಂಬ ಕಸಿವಿಸಿ ಕಾಡಿತು. ಅವತ್ತೇನೋ ಒಂದೆರಡು ಮಾತಾಡಿ ಮುಗಿಸಿದೆವು.
ನಂತರದ ಕೆಲವು ದಿನಗಳು ಊಟ ಆಯ್ತಾ, ಕೆಲಸ ಮುಗಿಯಿತಾ? ಅನ್ನೋ ಸಪ್ಪೆ ಮಾತುಗಳ ವಿನಿಮಯ. ಆಮೇಲೆ ನಿಧಾನಕ್ಕೆ ಮಾತುಗಳು ಜೀವನ, ಹವ್ಯಾಸಗಳ ಕಡೆ ಹೊರಳಿದಾಗಲೇ ಗೊತ್ತಾಗಿದ್ದು: ನಮ್ಮಿಬ್ಬರ ಯೋಚನಾ ಲಹರಿ ಒಂದೇ ಬಗೆಯದ್ದು ಎಂದು. ಆದರೆ ನಮ್ಮಿಬ್ಬರ ವ್ಯಕ್ತಿತ್ವಗಳಲ್ಲಿ ತುಂಬಾ ವ್ಯತ್ಯಾಸವಿದೆ ಎಂದು ಕೂಡಾ ಅರ್ಥವಾಯ್ತು.
ನೀನು ಮೌನದ ಮನೆಯ ಒಡೆಯ. ನನಗೆ ಅದರ ವಿಳಾಸವೇ ತಿಳಿಯದು. ನಿನ್ನದು ಹಳ್ಳಿ, ನನ್ನದು ಷಹರು. ಭೂಮಿಯಲ್ಲಿ ದುಡಿದು ಖುಷಿ ಪಡುವ ಜೀವ ನೀನಾದರೆ, ಕುಳಿತು ತಿಂದು ಬೆಳೆದವಳು ನಾನು. ಆತುರ, ಕೋಪಗಳಿಗೆ ನಾ ಫೇಮಸ್ಸು. ತಾಳ್ಮೆ ಮತ್ತು ಶಾಂತ ಸ್ವಭಾವ ನಿನ್ನ ಟ್ರೇಡ್‌ಮಾರ್ಕ್. ಸದಾ ಪುಸ್ತಕದ ಹುಳು ನಾನಾದರೆ, ನಿನಗೆ ಯಶಸ್ವೀ ಬದುಕಿನ ಚಿಂತೆ. ಕಾಡು, ಮಳೆ ನನ್ನ ತವರಾದರೆ, ಬಿಸಿಲೂರಿನವ ನೀನು. ಕಾರು ಬೈಕುಗಳ ಅಬ್ಬರವೇ ಎನ್ನ ಪಾಲಿಗೆ ಸಂಗೀತ, ನಿನಗೆ ಸಮುದ್ರದ ಅಲೆಗಳು ಹಿತ… ಇಷ್ಟೆಲ್ಲಾ ಅಂತರದಲ್ಲಿ ಬೆಳೆದು ಬಂದ ನಮ್ಮಿಬ್ಬರ ಮಧ್ಯೆ ಪ್ರೀತಿಯ ತಂಗಾಳಿ ಬೀಸತೊಡಗಿತ್ತು. ಒಬ್ಬರನ್ನೊಬ್ಬರು ನೋಡದಿದ್ದರೂ ಪ್ರೀತಿ ಪಯಣ ಶುರುವಾಗಿತ್ತು. ವೀಡಿಯೊ ಕಾಲ್ ಯುಗದವರಾಗಿದ್ದರೂ ಮುಖಾಮುಖೀ ಭೇಟಿಗಾಗಿ ಇಬ್ಬರೂ ಹಾತೊರೆಯುತ್ತಿದ್ದೆವು.
ಕೊನೆಗೂ ಆ ಸಮಯ ಬಂತು. ಆ ದಿನ ಹಸಿರು ಸೀರೆಯಲ್ಲಿ ನಾನು, ಹಸಿರಂಗಿಯಲ್ಲಿ ನೀನು. ಮೊದಲು ಭೇಟಿಯಾದದ್ದು ಕೂಡ ಹಸಿರು ಸಿರಿಯ ನಡುವೆಯೇ. ಪೂರ್ಣಚಂದ್ರ ತೇಜಸ್ವಿಯವರ “ಅಣ್ಣನ ನೆನಪು’ ಪುಸ್ತಕವನ್ನು ನಿನ್ನ ಕೈಗಿತ್ತ ನಾನು, ಊರ ತುಂಬ ಕಂಪು ಬೀರುವ “ಮೈಸೂರು ಮಲ್ಲಿಗೆ’ಯನ್ನು ಉಡುಗೊರೆಯಾಗಿ ಪಡೆದಿದ್ದೆ. ಅಲ್ಲಿ ಮತ್ತೂಮ್ಮೆ ರುಜುವಾತಾಯ್ತು ನಮ್ಮಿಬ್ಬರ ಮನ ಬೆಸೆದುಕೊಂಡಿದೆ ಎಂದು. ನನ್ನ ಅಂತರಂಗದಲ್ಲಿ ಶುರುವಾದ ಪ್ರೇಮದ ಹೊಳೆ ನಿನ್ನೆದೆಯ ಪ್ರೀತಿ ಸಮುದ್ರ ಸೇರಲು ಕಾತರಿಸಿದೆ.
ಇಂತಿ
ಶ್ರುತಿ ಮಲೆನಾಡತಿ