Advertisement

ಎಂ.ವಿ. ವಸ್ತು ಪ್ರದರ್ಶನಾಲಯ: ಡಿಸಿ ಮೆಚ್ಚುಗ

10:14 AM Dec 06, 2017 | |

ಕಲಬುರಗಿ: ಸರ್‌. ಎಂ. ವಿಶ್ವೇಶ್ವರಯ್ಯ ಅವರ ಜೀವನ ಹಾಗೂ ಸಾಧನೆಗಳ ಕುರಿತು ಹಮ್ಮಿಕೊಂಡ ಸಂಚಾರಿ ವಸ್ತು
ಪ್ರದರ್ಶನಾಲಯದ ಕುರಿತು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ದೇಶ ಕಂಡ ಅಪರೂಪದ ಇಂಜಿನಿಯರ್‌, ವಿಜ್ಞಾನಿ ಸರ್‌. ಎಂ. ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಸಾಧನೆಗಳ ಕುರಿತು ಮಂಗಳವಾರ ಹಮ್ಮಿಕೊಂಡ ಎಂ. ವಿಶ್ವೇಶ್ವರಯ್ಯ ಸಂಚಾರಿ
ವಸ್ತು ಪ್ರದರ್ಶನಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಸರ್‌. ಎಂ.ವಿ ಅವರ ಬಾಲ್ಯ, ಹುಟ್ಟೂರು ಮತ್ತು ಅವರು ಕಲಿತ ಶಾಲೆ, ಅಭಿಯಂತರರು ಆಗಿರುವುದು ಸೇರಿದಂತೆ
ಅವರ ಜೀವನದ ಅಮೂಲ್ಯವಾದ ಘಳಿಗೆಗಳ ಪ್ರದರ್ಶನವು ಒಳಗೊಂಡಿದ್ದು, ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು ವಸ್ತು
ಪ್ರದರ್ಶನಾಲಯವನ್ನು ವೀಕ್ಷಿಸುವ ಮೂಲಕ ಸ್ಪೂರ್ತಿ ಹಾಗೂ ಪ್ರೇರಣೆ ಪಡೆಯಬೇಕು ಎಂದರು.

ಸರ್‌. ಎಂ. ವಿ ಅವರು ದೇಶ ಕಂಡ ಅಪರೂಪದ ವಿಜ್ಞಾನಿ ಮತ್ತು ಇಂಜಿನಿಯರ್‌ ಆಗಿದ್ದರು. ದೇಶದ ಅನೇಕ ಜ್ವಲಂತ
ಸಮಸ್ಯೆಗಳಿಗೆ ಅವರು ಪರಿಹಾರ ಕಂಡು ಹಿಡಿದಿದ್ದರು. ಅವರು ರಾಷ್ಟ್ರಕ್ಕೆ ಕೊಟ್ಟ ಕೊಡುಗೆಯನ್ನು ಮರೆಯಲಾಗದು ಎಂದು ಬಣ್ಣಿಸಿದರು. 

ಜನರ ಸಮಸ್ಯೆಗಳಿಗೆ ಅಭಿಯಂತರರು ಪರಿಹಾರ ಕಂಡುಹಿಡಿಯುವ ಕೆಲಸ ಮಾಡಬೇಕು ಎಂದು ಹೇಳಿದ ಅವರು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಅತ್ಯಂತ ಅಗತ್ಯವಾಗಿದೆ. ಆ ಹಿನ್ನೆಲೆಯಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು ಭೇಟಿ ನೀಡಬೇಕು. ಆ ದಿಸೆಯಲ್ಲಿ ಜಿಲ್ಲಾಡಳಿತವು ಅಗತ್ಯ ಸಹಕಾರ ಕೊಡಲಿದೆ ಎಂದು ಭರವಸೆ ನೀಡಿದರು. 

Advertisement

ಜಿಲ್ಲಾ ವಿಜ್ಞಾನ ಕೇಂದ್ರದ ವಿಜ್ಞಾನಾಧಿಕಾರಿ ಎನ್‌. ಲಕ್ಷ್ಮೀನಾರಾಯಣ ಮಾತನಾಡಿ, ಸರ್‌. ಎಂ. ವಿಶ್ವೇಶ್ವರಯ್ಯ ಸಂಚಾರಿ ವಸ್ತು ಪ್ರದರ್ಶನಾಲಯವು 45ರಿಂದ 60 ದಿನಗಳ ಕಾಲ ಪ್ರದರ್ಶನ ನೀಡಲಿದೆ. ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಪ್ರದರ್ಶನ ವೀಕ್ಷಿಸಬೇಕು ಎಂದರು. ಹಿರಿಯ ಅಭಿಯಂತರ ಪಿ.ಎಸ್‌. ಮಹಾಗಾಂವಕರ್‌, ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಡಾ| ಶಶಿಕಾಂತ ಮೀಸೆ ಹಾಜರಿದ್ದರು. ಜಿಲ್ಲಾ ವಿಜ್ಞಾನ ಕೇಂದ್ರದ ಶಿಕ್ಷಣ ಅಧಿಕಾರಿ ಆರ್‌. ವೆಂಕಟೇಶ್ವರಲು ನಿರೂಪಿಸಿದರು. ನಗರದ
ಸರ್ಕಾರಿ ಮಹಿಳಾ ಮಹಾವಿದ್ಯಾಲಯ, ಚೇತನ್‌ ಯೂಥ್‌ ಫೋರಂ ಪ್ರೌಢಶಾಲೆ, ಆರಾಧನಾ ಶಾಲೆ ಸೇರಿದಂತೆ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next