ಕಲುಬುರಗಿ: ಕರ್ನಾಟಕಕ್ಕೆ ಕಳೆದ ಹತ್ತು ವರ್ಷಗಳಿಂದ ಆರ್ಥಿಕವಾಗಿ ಅನ್ಯಾಯ ಮಾಡಲಾಗುತ್ತಿದೆ. ಈಗ ಪುನರ್ ವಿಂಗಡನೆ ಮಾಡಿ ರಾಜಕೀಯವಾಗಿಯೂ ನಮಗೆ ಅನ್ಯಾಯ ಮಾಡುವ ಸಂಚು ನಡೆದಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಗಣತಿ 2-3 ವರ್ಷಗಳ ಹಿಂದೆ ಆಗಬೇಕಿತ್ತು. ಅದು ಆಗಿಲ್ಲ. ಪುನರ್ ವಿಂಗಡಣೆ ಈ ಮಾನದಂಡದ ಮೇಲೆ ಆದರೆ ಕರ್ನಾಟಕಕ್ಕೆ ಮತ್ತು ದಕ್ಷಿಣ ಭಾರತಕ್ಕೆ ಅನ್ಯಾಯವಾಗಲಿದೆ. ನಾವು ಒಳ್ಳೆಯ ಆಡಳಿತ ನೀಡಿದರೂ ಜನಸಂಖ್ಯೆ ನಿಯಂತ್ರಣ ಮಾಡಿದ್ದಕ್ಕೆ ನಮಗೆ ಶಿಕ್ಷೆಯಾಗುತ್ತದೆ.ಈ ಬಗ್ಗೆ ಪ್ರತಿಭಟನೆ ಮಾಡುವ ಪ್ರಶ್ನೆ ಇಲ್ಲ ಇದು ಜನರಿಗೆ ಮನವರಿಕೆ ಆಗಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ನಮ್ಮ ಪ್ರತಿನಿಧಿಗಳು ಸಂಸತ್ತಿನಲ್ಲಿ ಮಾತನಾಡದಿದ್ದರೆ ನಮ್ಮ ರಾಜ್ಯದ ಪರವಾಗಿ ಮಾತನಾಡುವವರು ಯಾರು? ದೇಶ ನಡೆಸಲು ನಮ್ಮ ರಾಜ್ಯದ ಆರ್ಥಿಕ ಕೊಡುಗೆ ಸಾಕಷ್ಟಿದೆ, ಜಿಎಸ್ಟಿ ನಲ್ಲಿ ಎರಡನೇ ಸ್ಥಾನದಲ್ಲಿ ನಾವಿದ್ದೇವೆ. ನಮ್ಮ ದುಡಿಮೆಗೆ ತಕ್ಕಂತೆ ಪ್ರತಿಫಲ ಸಿಗಬೇಕು ಎನ್ನುವುದಷ್ಟೇ ನಮ್ಮ ಬೇಡಿಕೆ. ಕೇಂದ್ರದ ನೀತಿಯಿಂದಾಗಿ ಪ್ರತಿವರ್ಷ ನಮಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಮುಂದಿನ ಐವತ್ತು ವರ್ಷ ನಾವು ಯಾವ ರೀತಿ ಅಭಿವೃದ್ಧಿ ಮಾಡಬೇಕು ಎನ್ನುವ ನೀಲಿ ನಕ್ಷೆಯಿದೆ ಎಂದು ಖರ್ಗೆ ಹೇಳಿದರು.
ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿ, ಕರ್ನಾಟಕ ರಾಜ್ಯಕ್ಕೆ ಜೋಶಿಯವರ ಕೊಡುಗೆ ಏನಿದೆ ಎನ್ನುವುದು ಹೇಳಲಿ? ಕೇಂದ್ರದಿಂದ ರಾಜ್ಯಕ್ಕೆ ಯಾವ ಯೋಜನೆ ತಂದಿದ್ದಾರೆ ಎನ್ನುವುದು ಅವರು ಹೇಳಲಿ. ಅವರಿಗೆ ಹೋಲಿಕೆ ಮಾಡಿದರೆ ಅವರಿಗಿಂತ ನಾನೇ ಹೆಚ್ಚಿಗೆ ಕೆಲಸ ಮಾಡಿದ್ದೇನೆ. ಪ್ರಹ್ಲಾದ ಜೋಶಿ ಅವರು ಯಾವತ್ತಾದರೂ ರಾಜ್ಯದಲ್ಲಿ ದೀಪ ಹಚ್ಚುವ ಕೆಲಸ ಮಾಡಿದ್ದಾರಾ? ಅವರಿಗೆ ಕೇವಲ ಬೆಂಕಿ ಹಚ್ಚುವ ಕೆಲಸ ಮಾತ್ರ ಗೊತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿಯಲ್ಲಿ ಆದ ಅನ್ಯಾಯದ ಬಗ್ಗೆ ಇವರು ಚಕರ ಎತ್ತಲ್ಲ. ರಾಜ್ಯದಿಂದಲೇ ಆಯ್ಕೆಯಾಗಿರುವ ನಿರ್ಮಾಲ ಸೀತಾರಾಮ್ ಅವರಾಗಲಿ ಜೋಶಿ ಅವರಾಗಲಿ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಧ್ವನಿಯೆತ್ತಿಲ್ಲ. ದೆಹಲಿಯಲ್ಲಿ ಕೇವಲ ಮನ್ ಕಿ ಬಾತ್ ಕೇಳಿಕೊಂಡು ಬರುವುದಷ್ಟೇ ಇವರ ಕೆಲಸವಾಗಿದೆ ಎಂದು ಟೀಕೆ ಮಾಡಿದರು.