Advertisement
ಶಬರಿಮಲೆಯ ಪರಮ ಭಕ್ತೆ ಆಗಿರುವ ಈ ಅಜ್ಜಿ ಈ ರೀತಿ ದಾನ ನೀಡುತ್ತಿರುವ 7ನೇ ದೇವಸ್ಥಾನ ಇದು. ತನ್ನೂರು ಕಂಚುಗೋಡಿನ ದೇಗುಲಕ್ಕೆ ನೀಡಿದ 1.5 ಲಕ್ಷ ರೂ. ದೇಣಿಗೆ ಯೊಂದಿಗೆ ಅಜ್ಜಿಯ ದಾನದ ಅಧ್ಯಾಯ ಆರಂಭಗೊಂಡಿತು. ಬಳಿಕ ಆನೆಗುಡ್ಡೆ ಕುಂಭಾಶಿ ದೇವಸ್ಥಾನ, ಮಂಗಳಾದೇವಿ, ಬಪ್ಪನಾಡು, ಪೊಳಲಿ ದೇವಸ್ಥಾನಗಳಿಗೆ ತಲಾ 1.5 ಲಕ್ಷ ರೂ., ಬ್ರಹ್ಮಾವರ ತಾಲೂಕಿನ ಸಾಲಿ ಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ 1 ಲಕ್ಷ ರೂ.ಗಳನ್ನು ಭೋಜನ ನಿಧಿಗೆ ಸಮರ್ಪಿಸಿದ್ದಾರೆ. ಅನ್ನದಾನವೇ ಶ್ರೇಷ್ಠ ದಾನ ಎಂಬುದು ಅವರ ನಂಬಿಕೆ.
ಅಶ್ವತ್ಥಮ್ಮ ತನ್ನ ಪತಿ ಹಾಗೂ ಪುತ್ರ ತೀರಿಕೊಂಡ ಅನಂತರ ಭಿಕ್ಷೆ ಬೇಡುವ ಕಾಯಕ ಆರಂಭಿಸಿದರು. ಶಬರಿ ಮಲೆಯ ಭಕ್ತೆಯಾಗಿ ವರುಷವೂ ವ್ರತಧಾರಿಯಾಗಿ ಮಲೆಗೆ ಭೇಟಿ ನೀಡುತ್ತಾರೆ. ಅಲ್ಲಿನ ಪಂಪಾ ಕ್ಷೇತ್ರದಲ್ಲಿ ಅನ್ನದಾನಕ್ಕಾಗಿ 1 ಲಕ್ಷ ರೂ., ಪಂದಳ ಕ್ಷೇತ್ರಕ್ಕೆ ಅನ್ನದಾನಕ್ಕಾಗಿ 30 ಸಾವಿರ ರೂ.ಗಳನ್ನು ಕೊಟ್ಟಿದ್ದಾರೆ. ಇಲ್ಲಿಯವರೆಗೆ ಎಷ್ಟು ಕೊಟ್ಟಿರಬಹುದು ಎಂಬ ಪ್ರಶ್ನೆಗೆ, ಆ ಲೆಕ್ಕದ್ದೇನೋ ಗೊತ್ತಿಲ್ಲ, ಅಷ್ಟಕ್ಕೂ ನಾನು ಕೊಟ್ಟದ್ದಲ್ಲ; ಸ್ವಾಮಿ ಪಡೆದದ್ದು. ಅವನಿಂದ ಪಡೆದದ್ದು ಅವನಿಗೇ ಅರ್ಪಣೆ ಎನ್ನುತ್ತಾರೆ. ಇದರ ಜತೆ ಕೋವಿಡ್ ಸಮಯದಲ್ಲಿ ದೇಶ ಸಂಕಟದಲ್ಲಿದ್ದಾಗ ಕೊರೊನಾದಿಂದ ದೇಶ ಮುಕ್ತವಾಗಲಿ, ಶಬರಿಮಲೆಗೆ ಕವಿದಿರುವ ಕತ್ತಲು ದೂರವಾಗಲಿ ಎಂದು ಹರಕೆಯನ್ನೂ ಹೊತ್ತಿದ್ದರು.
Related Articles
ದುಡ್ಡಿರುವವರೂ ಎಷ್ಟು ಮಂದಿ ಹೀಗೆ ಕೊಟ್ಟಾರು? ಆದರೆ ಅಶ್ವತ್ಥಮ್ಮ ತಮ್ಮ ಇಳಿ ವಯಸ್ಸಿನಲ್ಲೂ ಕರಾವಳಿಯ ನಾನಾ ದೇವಸ್ಥಾನಗಳ ಆವರಣಗಳಲ್ಲಿ ಮತ್ತು ಸಾಸ್ತಾನ ಟೋಲ್‌ಗೇಟ್‌ನಲ್ಲಿ ಜನರ ಮುಂದೆ ಕೈ ಚಾಚಿ ಭಿಕ್ಷೆ ಬೇಡುತ್ತಾರೆ. ಹೀಗೆ ಸಂಗ್ರಹವಾದ ಹಣದಲ್ಲಿ ತನ್ನ ವೈಯಕ್ತಿಕ ಖರ್ಚಿಗೆ ಎಷ್ಟು ಬೇಕೋ ಅಷ್ಟು ಇಟ್ಟುಕೊಂಡು ಉಳಿದದ್ದನ್ನು ದಾನ ಮಾಡುತ್ತಿದ್ದಾರೆ. ಭಿಕ್ಷೆ ಬೇಡಿದ ಹಣವನ್ನು ದೇವರಿಗೆ ಸಮರ್ಪಿಸುವ ಈಕೆಯ ಹೃದಯ ವೈಶಾಲ್ಯಕ್ಕೆ ಜನರೂ ಬೆರಗಾಗಿದ್ದಾರೆ.
ಸಮ್ಮಾನ: ಕೊಡುಗೆ ನೀಡಿದ ಅಶ್ವತ್ಥಮ್ಮ ಅವರನ್ನು ದೇವಾಲಯದ ಆಡಳಿತ ಸಮಿತಿಯ ಗೋಕುಲ್ ಶೇಟ್ ಸಮ್ಮಾನಿಸಿದರು. ಹೊಟೇಲ್ ಉದ್ಯಮಿ ವಿಜಯ್ ಉಪಸ್ಥಿತರಿದ್ದರು.
Advertisement
ಎಲ್ಲಿಗೆ ಎಷ್ಟು ಕೊಟ್ಟಿದ್ದೇನೆ ಎನ್ನುವುದು ಮುಖ್ಯವೇ ಅಲ್ಲ. ನಾನು ಅದರ ಲೆಕ್ಕವೂ ಇಟ್ಟಿಲ್ಲ. ಒಂದಷ್ಟು ಮೊತ್ತ ಸಂಗ್ರಹವಾದಾಗ ನನ್ನ ಖರ್ಚಿಗೆ ಚೂರು ಇಟ್ಟು ಕೊಂಡು ಉಳಿಕೆ ಮೊತ್ತವನ್ನು ದೇವಾಲಯಗಳಿಗೆ ನೀಡುತ್ತಿದ್ದೇನೆ. ಇದು ನನ್ನ ಸೇವೆಯಷ್ಟೇ.-ಅಶ್ವತ್ಥಮ್ಮ, ಕಂಚುಗೋಡು