Advertisement

ನೇಕಾರಿಕೆಯ ಐಸಿಹಾಸಿಕ ಮಾಹಿತಿಯೊಂದಿಗೆ ಪಾರಂಪರಿಕ ಸೀರೆಗಳ ಪ್ರದರ್ಶನ

09:51 PM Nov 17, 2022 | Team Udayavani |

ಗಂಗಾವತಿ: ವಿಶ್ವ ಪುರಾತನ ಶೈಲಿಯಲ್ಲಿ ನೇಯ್ಗೆಯ ಮೂಲಕ ತಯಾರಿಸಿದ ವೈಶಿಷ್ಟ್ಯ ಮತ್ತು ಇತಿಹಾಸವನ್ನು ಸಾರುವ ಸೀರೆಗಳ ಉಚಿತ ಪ್ರದರ್ಶನ ವಿಶ್ವಪರಂಪರೆಯ ಪ್ರದೇಶವಾದ ಆನೆಗೊಂದಿಯಲ್ಲಿ ದಿ ರಿಜಿಸ್ಟರಿ ಆಫ್ ಸಾರೀಸ್ ಸಂಸ್ಥೆ ಮೂಲಕ ಖ್ಯಾತ ಸೀರೆ ವಿನ್ಯಾಸಕಾರು ಮತ್ತು ಸಂಶೋದಕ ಮಯಾಂಕ್ ಮಾನಸಿಂಗ್ ಕೌಲ್ ಹಾಗೂ ರೇಹಾ ಸೋದಿ ದಿ.ಕಿಷ್ಕಿಂದಾ ಟ್ರಸ್ಟ್ ಆಶ್ರಯದಲ್ಲಿ ನ.14 ರಿಂದ ಡಿ.06 ವರೆಗೆ ಏರ್ಪಡಿಸಲಾಗಿದೆ.

Advertisement

ಪ್ರದರ್ಶನದಲ್ಲಿ ಭಾರತದಲ್ಲಿ ಸೀರೆಗಳ ಉದಯ ಮತ್ತು ಮಾದರಿಯ ಪರಿಚಯ ಕಾರ್ಯ ನಡೆಯುತ್ತದೆ. ರಾಜಮಹಾರಾಜರ ಕಾಲದಲ್ಲಿ ಸೀರೆಗಳ ನೇಯ್ಗೆ ಮತ್ತು ಮಾರಾಟ ವ್ಯವಸ್ಥೆ, ಅಂದು ಸೀರೆಗಳಲ್ಲಿ ಡಿಸೈನ್‌ ಮಾಡುವ ಕಲೆ, ಯಾವ ಪ್ರಾಂತ್ಯದಲ್ಲಿ ಯಾವ ಸೀರೆ ಧರಿಸಲಾಗುತ್ತದೆ ಎಂಬಿತ್ಯಾದಿ ಮಾಹಿತಿಯ ಜೊತೆಗೆ ಸೀರೆಗಳ ಮೇಲಿನ ಚಿತ್ರಗಳ ವಿನ್ಯಾಸ ಹಿನ್ನೆಲೆ ಕುರಿತು ಮಾಹಿತಿ ನೀಡಲಾಗುತ್ತಿದೆ.

ಮುಖ್ಯವಾಗಿ ದಕ್ಷಿಣ-ಉತ್ತರ ಭಾರತ ಹಾಗೂ ಪೂರ್ವ-ಪಶ್ಚಿಮ ಭಾರತದ ಮಹಿಳೆಯರ ಸೀರೆಗಳ ತಯಾರಿಕೆ ಮತ್ತು ಇತಿಹಾಸವನ್ನು ತಿಳಿಸಲಾಗುತ್ತಿದೆ.

ನಮ್ಮಲ್ಲಿ ದೊರಕುವ ಸಾಂಬಾರು ಪದಾರ್ಥ, ರೇಷ್ಮೇ, ಜವಳಿ ಹಾಗೂ ಚಿನ್ನಾಭರಣ ಕಾರಣಕ್ಕಾಗಿ ಇಂಗ್ಲೀಷರು ಸೇರಿ ವಿದೇಶಿಗರು ಭಾರತ ದೇಶಕ್ಕೆ ಲಗ್ಗೆ ಇಟ್ಟು ಸುಮಾರು ಎರಡು ನೂರು ವರ್ಷಗಳ ಕಾಲ ಆಡಳಿತ ನಡೆಸಿದರು.

ವಿಶ್ವದಲ್ಲಿಯೇ ಬಟ್ಟೆ ತಯಾರಿಕೆ ಮತ್ತು ನೇಯ್ಗೆಯಲ್ಲಿ ಭಾರತದ ವೈಶಿಷ್ಠ್ಯ ಹೊಂದಿದೆ. ದೇಶದ ಕೆಲ ಭಾಗಗಳಲ್ಲಿ ಸೀರೆ ಸೇರಿ ಬಟ್ಟೆ ನೇಯ್ಗೆಯಲ್ಲಿ ನೈಪುಣ್ಯತೆ ಹೊಂದಿದ ಜನಾಂಗವಿದೆ. ಸೀರೆ ನೇಯ್ಗೆಯಲ್ಲಿ ಬನಾರಸ್, ಕಾಂಚಿವರಂ, ಮೊಣಕಾಲ್ಮೂರು, ಇಳಕಲ್, ಗಜೇಂದ್ರಗಡಾ ಪ್ರಮುಖ ಸ್ಥಳಗಳಾಗಿದ್ದು, ಇಂದಿಗೂ ಖ್ಯಾತಿ ಹೊಂದಿವೆ.

Advertisement

ಪ್ರದರ್ಶನದಲ್ಲಿ ಕರ್ನಾಟಕದಲ್ಲಿ ನೇಯುವ ಸೀರೆಗಳ ಜತೆಗೆ ಗದ್ವಾಲ್, ಗುಜರಾತ್‌ನ ಪಟೋಲಾ, ಓರಿಸ್ಸಾದ ಸಂಬರಪೂರ, ಉಡುಪಿ, ಆಂದ್ರ ಪ್ರದೇಶದ ವೆಂಕಟಗಿರಿ ಸೇರಿದಂತೆ ಇಡೀ ದೇಶದ ಪುರಾತನ ಸೀರೆಗಳ ಪ್ರದರ್ಶನ ಮಾಹಿತಿ ನೀಡಲಾಗುತ್ತಿದೆ.

ಸೀರೆಗಳ ಐತಿಹಾಸಿಕ ಪರಂಪರೆ: ಭಾರತ ದೇಶವನ್ನು ಆಳಿದ ರಾಜ ಮಹಾರಾಜರುಗಳು ಪ್ರಮುಖ ವೃತ್ತಿ ಕೃಷಿ ಹಾಗೂ ಅದರ ಜೊತೆಗೆ ಜನರ ಸಾಂಪ್ರದಾಯಿಕ ಉದ್ಯೋಗಗಳಿಗೆ ಸದಾ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿದ್ದರು.

ಪ್ರಮುಖವಾಗಿ ದೇಶಿಯ ಕೈಗಾರಿಕೆಗಳ ಮೂಲಕ ನೇಕಾರಿಕೆ, ಬಡಿಗೆತನ, ಕಮ್ಮಾರಿಕೆ, ಶಿಲ್ಪಕಲೆ ಸೇರಿ ಬುಡಕಟ್ಟು ಆದಿವಾಸಿಗಳ ಜನಪದ ಬೇಟೆಯಾಡುವುದು ಮತ್ತು ಯುದ್ಧ ಕೌಶಲ್ಯದಂತಹ ಸಾಹಸಮಯ ಉದ್ಯೋಗಗಳ ಕುರಿತು ಪ್ರೋತ್ಸಾಹಿಸುತ್ತಿದ್ದರು.

ನೇಕಾರಿಕೆಯ ವೃತ್ತಿ ಮಾಡುವವರು ಸಹ ಸೀರೆ ನೇಯುವ ಸಂದರ್ಭದಲ್ಲಿ ಬೇಟೆಯಾಡುವುದು, ಸಿಂಹ, ಚಿರತೆ, ನವಿಲು, ಆನೆ ಮತ್ತು ಪ್ರಕೃತಿ ಸೂರ್ಯ ಮತ್ತು ಚಂದ್ರ ಚಿತ್ರಗಳನ್ನು ಸೀರೆಗಳ ಡಿಸೈನ್‌ಗಳಲ್ಲಿ ಬಿಂಬಿಸುತ್ತಿದ್ದರು.

ಮೂಲತಃ ನೇಯ್ಗೆಯ ಮೂಲಕ ಬಿಳಿ ಬಣ್ಣದ ಸೀರೆ, ನಂತರ ಕೆಂಪು, ಹೀಗೆ ವಿವಿಧ ಬಗೆಯ ಬಣ್ಣಗಳನ್ನು ಬಳಕೆ ಮಾಡುವ ಮೂಲಕ ಸೀರೆಗಳನ್ನು ತಯಾರಿಸುತ್ತಿದ್ದರು. ರಾಜ-ಮಹಾರಾಜರು ಸೇರಿ ಶ್ರೀಮಂತರ ಮಹಿಳೆಯರು ಧರಿಸುವ ಸೀರೆಗಳನ್ನು ವಿಶೇಷ ಕೌಶಲ್ಯಗಳ ಮೂಲಕ ತಯಾರಿಸುತ್ತಿದ್ದರು. ಇಂತಹ 108 ಸಂಪ್ರದಾಯಿಕ ಸೀರೆಗಳ ಪ್ರದರ್ಶನ ಮಾಡಲಾಗುತ್ತಿದೆ.

ಆನೆಗೊಂದಿ ಪಾರಂಪರಿಕ ಗ್ರಾಮವಾಗಿದ್ದು ಇಲ್ಲಿ ಯುನೆಸ್ಕೋ ಗುರುತಿಸಿದ ಸಂಪ್ರದಾಯಿಕ ಮನೆಗಳಲ್ಲಿ 9 ಬಗೆಯ ಅತೀ ಪುರಾತನ ಸಂರಕ್ಷಿತ ಸೀರೆಗಳ ಪ್ರದರ್ಶನ ಮಾಡಲಾಗಿದೆ. ಮೇಕಿನ್ ಇಂಡಿಯಾ ಪ್ರೇರಣೆಯಂತೆ ಇಂಡಿಯಾದ ಅತೀ ಪುರಾತನ ಕೌಶಲ್ಯಗಳನ್ನು ಬಳಸಿ ತಯಾರಿಸಿ ಈಗ ಸಂಗ್ರಹಿಸಿರುವ ಸೀರೆಗಳು ಆಕರ್ಷಕವಾಗಿದ್ದು, ಇವುಗಳ ಮೂಲಕ ಮಹಿಳೆಯರು ತಮ್ಮ ಆಮೂಲ್ಯ ಸೀರೆಗಳ ಸಂರಕ್ಷಣೆ ಕಲಿಯಬಹುದಾಗಿದೆ.

ವಿಶ್ವದ ಖ್ಯಾತ ಡಿಸೈನರ್ ಮತ್ತು ಸೀರೆಗಳ ಸಂಶೋದಕ ಮಯಾಂಕ್ ಮಾನಸಿಂಗ್ ಕೌಲ್ ಹಾಗೂ ರೇಹಾ ಸೋದಿ ಮಾರ್ಗದರ್ಶನದಲ್ಲಿ ಸೀರೆ ಪ್ರದರ್ಶನವನ್ನು ದಿ ಕಿಷ್ಕಿಂಧಾ ಟ್ರಸ್ಟ್ ಆಯೋಜನೆ ಮಾಡಿದ್ದು, ವಿಶ್ವ ಪರಂಪರೆಯ ಸಮಸ್ತ ಗ್ರಾಮಗಳ ಜನರು ಪ್ರದರ್ಶನಕ್ಕೆ ಆಗಮಿಸಬೇಕು. –ಪ್ರೀತಾ ಕೋನಾ, ಸಂಚಾಲಕರು

-ಕೆ.ನಿಂಗಜ್ಜ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next