Advertisement

ಬ್ಲ್ಯಾಕ್‌ಸ್ಪಾಟ್‌ಗೆ ಮುಕ್ತಿ ನೀಡಲು ಮುಂದಾದ ನಗರಸಭೆ

05:32 PM Feb 10, 2022 | Team Udayavani |

ಉಡುಪಿ: ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡುವ ನಿಟ್ಟಿನಲ್ಲಿ ಉಡುಪಿ ನಗರಸಭೆ ನಗರದಲ್ಲಿರುವ ಬ್ಲ್ಯಾಕ್‌ಸ್ಪಾಟ್‌ಗಳಿಗೆ ಮುಕ್ತಿ ನೀಡಲು ಮುಂದಾಗಿದೆ.

Advertisement

ಈಗಾಗಲೇ ಮಲ್ಪೆ ಬೀಚ್‌, ಮಲ್ಪೆ ಪೊಲೀಸ್‌ ಠಾಣೆ ಬಳಿ, ಅಂಬಲಪಾಡಿ ಸಂದೀಪ್‌ ನಗರದ ಬಳಿ, ಕುಕ್ಕಿಕಟ್ಟೆ ಬಳಿ, ಪಣಿಯಾಡಿ ಜಂಕ್ಷನ್‌, ಮಣಿಪಾಲ ಅನಂತನಗರಗಳಲ್ಲಿ ಮಿನಿ ಪಾರ್ಕ್‌ ನಿರ್ಮಾಣ ಮಾಡಲಾಗಿದೆ. ಮಲ್ಪೆ ನೆರ್ಗಿ ಬಳಿ, ಕೊಳ ರಸ್ತೆ, ಮೂಡುಬೆಟ್ಟು ಭಾಗಗಳಲ್ಲಿ ನೆಟ್‌ ಅಳವಡಿಕೆ ಮಾಡಲಾಗಿದೆ.

ಸ್ಥಳೀಯರ ಸಹಕಾರ
ನಗರಸಭೆ, ಬೀಚ್‌ ಅಭಿವೃದ್ಧಿ ಸಮಿತಿ, ಸಾಹಸ್‌ ಸಂಸ್ಥೆ ಮತ್ತು ಸ್ಥಳೀಯ ಸದಸ್ಯರ ಸಹಕಾರದಿಂದ ಸುಂದರಗೊಳಿಸಿ ಬ್ಲ್ಯಾಕ್‌ ಸ್ಪಾಟ್‌ಗಳನ್ನು ಮಿನಿ ಪಾರ್ಕ್‌ಗಳನ್ನಾಗಿ ಬದಲಾವಣೆ ಮಾಡಲಾಗುತ್ತಿದೆ. “ಕಸದಿಂದ ರಸ’ ಎಂಬ ಪರಿಕಲ್ಪನೆಯಂತೆ ಮರುಬಳಕೆ ವಸ್ತುಗಳು, ಹಳೆಯ ವಸ್ತುಗಳನ್ನು ಬಳಸಿ ಮತ್ತಷ್ಟು ಸುಂದರ ಮಾಡಲಾಗುತ್ತದೆ. ಇದರಿಂದಾಗಿ ಪ್ರಕೃತಿಯ ಅಂದವೂ ಹೆಚ್ಚಳವಾಗಲು ಸಾಧ್ಯವಿದೆ.

ಬ್ಲ್ಯಾಕ್‌ ಸ್ಪಾಟ್‌ಗಳ ಸಂಖ್ಯೆ ಇಳಿಕೆ
ನಗರದ 35 ವಾರ್ಡ್‌ಗಳಲ್ಲಿ 500ಕ್ಕೂ ಅಧಿಕವಿದ್ದ ಬ್ಲ್ಯಾಕ್‌ ಸ್ಪಾಟ್‌ಗಳ ಸಂಖ್ಯೆ ಈಗ ಇಳಿಕೆ ಕಂಡು 150ಕ್ಕೆ ಬಂದಿದೆ. ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ಬ್ಲ್ಯಾಕ್‌ಸ್ಪಾಟ್‌ಗಳನ್ನು ತೆರವು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬ್ಲ್ಯಾಕ್‌ಸ್ಪಾಟ್‌ ಮುಕ್ತಿ ಮಾಡಿ ನಗರವನ್ನು ಸ್ವತ್ಛವಾಗಿಸುವ ಉದ್ದೇಶ ನಗರಸಭೆಯದ್ದು.

25 ಸಾವಿರ ರೂ.ವರೆಗೆ ದಂಡ!
ರಾತ್ರಿ ಹಾಗೂ ಹಗಲು ವೇಳೆ ಹೆದ್ದಾರಿ ಬದಿ ಸಹಿತ ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ಹಾಕುವ ಘಟನೆಗಳು ಮುಂದುವರಿಯುತ್ತಿವೆ. ಅವರಿಗೆ 5ರಿಂದ 25 ಸಾವಿರ ರೂ.ಗಳವರೆಗೆ ದಂಡ ವಿಧಿಸುವ ಹಕ್ಕು ನಗರಸಭೆಗಿದೆ. ಇದುವರೆಗೆ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುವವರಿಂದ ಸಂಗ್ರಹಿಸಿದ ದಂಡದ ಮೊತ್ತವೇ 4 ಲ.ರೂ.ಆಗಿದೆ.

Advertisement

ಹೇಗಿದೆ ಮಿನಿ ಪಾರ್ಕ್‌?
ತ್ಯಾಜ್ಯ ಹಾಕುತ್ತಿದ್ದ ಸ್ಥಳವನ್ನು ಗುರುತಿಸಿ ಅಲ್ಲಿದ್ದ ತ್ಯಾಜ್ಯಗಳನ್ನು ತೆಗೆದು ಜಾಗವನ್ನು ಸಮತಟ್ಟು ಗೊಳಿಸಲಾಗುತ್ತದೆ. ಅನಂತರ ಆ ಜಾಗದ ಸುತ್ತ ಬಿದಿರು ಹಾಗೂ ಮರದ ಕೋಲು ಬಳಸಿ ಕಾಂಪೌಂಡ್‌ ರೀತಿ ಮಾಡಲಾಗುತ್ತದೆ. ಬಳಿಕ ವಿವಿಧ ಬಗೆಯ ಗಿಡಗಳು, ಹಳೆಯ ಟಯರ್‌ಗಳಿಗೆ ಬಣ್ಣ ಬಳಿದು ಅಲಂಕಾರ, ಸ್ವಚ್ಛತೆ ಮಾಡುತ್ತಿರುವ ಸಿಬಂದಿಯ ಪ್ರತಿಕೃತಿಗಳನ್ನು ಮಿನಿ ಗಾರ್ಡನ್‌ನೊಳಗೆ ಪ್ರತಿಷ್ಠಾಪಿಸಲಾಗುತ್ತದೆ.

ಸ್ವಯಂ ಪರಿವರ್ತನೆ ಅಗತ್ಯ
ನಗರಸಭೆ ವತಿಯಿಂದ ಮನೆಮನೆಗೆ ಮನೆಮನೆಗೆ ತೆರಳಿ ಕಸ ಸಂಗ್ರಹ ನಡೆಯುತ್ತಿದ್ದರೂ ವಿನಾಕಾರಣ ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದು ನಗರಾದ್ಯಂತ ಕಂಡುಬರುತ್ತಿದೆ. ಈ ಬಗ್ಗೆ ನಾಗರಿಕರಲ್ಲಿ ಸ್ವಯಂ ಜಾಗೃತಿಯ ಆವಶ್ಯಕತೆಯಿದೆ.

ಸ್ವಚ್ಛತೆಗೆ ಆದ್ಯತೆ
ಈಗಾಗಲೇ ನಗರದ ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಿ ಮಿನಿ ಪಾರ್ಕ್‌ಮಾಡಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ತ್ಯಾಜ್ಯ ಸಂಗ್ರಾಹಕರಿಗೆ ನೀಡಿ ನಗರದ ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರೂ ಆದ್ಯತೆ ನೀಡಬೇಕು.
-ಸುಮಿತ್ರಾ ನಾಯಕ್‌,
ಅಧ್ಯಕ್ಷೆ, ಉಡುಪಿ ನಗರಸಭೆ

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next