ಮಲ್ಪೆ: ದುರಸ್ತಿಗೆಂದು ಹೋಗಿದ್ದ ಮಲ್ಪೆ ಬಂದರಿನ ಮೀನುಗಾರಿಕ ಬೋಟಿಗೆ ಗಂಗೊಳ್ಳಿ ಅಳಿವೆ ಸಮೀಪ ಮರದ ದಿಮ್ಮಿ ಬೋಟಿಗೆ ಢಿಕ್ಕಿ ಹೊಡೆದ ಪರಿಣಾಮ ಬೋಟ್ ಭಾಗಶಃ ಮುಳುಗಡೆಗೊಂಡು ಅಪಾರ ನಷ್ಟ ಉಂಟಾದ ಘಟನೆ ಜ. 4ರಂದು ನಡೆದಿದೆ.
ಸಂಜಾತ ಅವರ ಮಾಲಕತ್ವದ ತವಕಲ್ ಎನ್ನುವ ಹೆಸರಿನ ಮೀನುಗಾರಿಕೆ ಬೋಟನ್ನು ಜ. 4ರಂದು ಸಂಜೆ 5.30ಕ್ಕೆ ದುರಸ್ತಿಗೆಂದು ಮೀನುಗಾರರಾದ ರವಿ ಸಾಲ್ಯಾನ್ ಮತ್ತು ಹರೀಶ್ ಅವರು ಮಲ್ಪೆ ಬಂದರಿನಿಂದ ಗಂಗೊಳ್ಳಿಗೆ ಕೊಂಡು ಹೋಗುತ್ತಿದ್ದರು.
ಗಂಗೊಳ್ಳಿ ಬಂದರಿನ ಅಳಿವೆಯಿಂದ ಸುಮಾರು 2 ನಾಟಿಕಲ್ ಮೈಲು ದೂರದಲ್ಲಿ ಚಲಿಸುತ್ತಿರುವಾಗ ರಾತ್ರಿ 7.30ರ ವೇಳೆಗೆ ದೊಡ್ಡದಾದ ಮರದ ದಿಮ್ಮಿ ಬಂದು ಬೋಟಿಗೆ ಢಿಕ್ಕಿ ಹೊಡೆದಿದೆ.
ಪರಿಣಾಮ ಬೋಟಿನ ಮುಂಭಾಗದ ತಳಬದಿಯಲ್ಲಿ ಹಾನಿಯಾಗಿ ನೀರು ಒಳ ಬರಲು ಪ್ರಾರಂಭಿಸಿತ್ತು. ನೀರಿನ ಒಳ ಹರಿವು ಜಾಸ್ತಿಯಾಗಿ ಬೋಟು ಮುಳುಗುವ ಸಂಭವ ಇರುವುದನ್ನು ಗಮನಿಸಿದ ಬೋಟಿನ ತಾಂಡೇಲ ರವಿ ಸಾಲ್ಯಾನ್ ಅವರು ದುರಸ್ತಿ ಕೆಲಸ ಮಾಡುವ ಗಂಗೊಳ್ಳಿ ಪುಂಡಲೀಕ ಹರಾಟೆ ಅವರನ್ನು ಸಂಪರ್ಕಿಸಿದಾಗ ಅವರು ಜಲರಾಣಿ ಎಂಬ ಹೆಸರಿನ ಬೋಟನ್ನು ನೆರವಿಗೆ ಕಳುಹಿಸಿದ್ದರು.
ಜಲರಾಣಿ ಬೋಟಿನವರು ಮುಳುಗಡೆಗೊಳ್ಳುತ್ತಿದ್ದ ಬೋಟಿನಲ್ಲಿದ್ದ ರವಿ ಸಾಲ್ಯಾನ್ ಮತ್ತು ಹರೀಶ್ ಅವರನ್ನು ರಕ್ಷಣೆ ಮಾಡಿ ಬೋಟನ್ನು ತನ್ನ ಬೋಟಿಗೆ ಹಗ್ಗ ಕಟ್ಟಿ ಗಂಗೊಳ್ಳಿಗೆ ಎಳೆದು ತಂದಿದ್ದಾರೆ. ಬೋಟು ಹಾನಿಗೊಂಡಿದ್ದು, ಸುಮಾರು 65 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.