ಹುಣಸೂರು: ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ಮೂಲಕ ಪಕ್ಷವು ನಗರಸಭೆ ಅಧಿಕಾರವನ್ನು ಹಿಡಿಯಲಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಆಯೋಜಿಸಿದ್ದ ಪಕ್ಷದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಫೆ.8ರಂದು ನಡೆಯಲಿರುವ ನಗರಸಭೆ ಚುನಾವಣೆಗೆ 31 ವಾರ್ಡ್‌ಗಳ ಪೈಕಿ ಪಕ್ಷದ ವತಿಯಿಂದ 22 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಾಗಿದೆ. ಈ ಪೈಕಿ 11 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ. ಹೆಚ್ಚಿನ ಸಂಖ್ಯೆಯ ಯುವಕರಿದ್ದಾರೆ. ಇವರೆಲ್ಲರನ್ನು ಮತದಾರರು ಒಪ್ಪಿಕೊಳ್ಳಲಿದ್ದಾರೆನ್ನುವ ಸಂದೇಶಗಳು ಈಗಾಗಲೇ ಬಂದಿದೆ ಎಂದು ತಿಳಿಸಿದರು.
ಪಕ್ಷದ ಪರವಾಗಿ ಪ್ರತಿ ಅಭ್ಯರ್ಥಿಗೆ 5 ಸಾವಿರ ಕರಪತ್ರಗಳನ್ನು ಮುದ್ರಿಸಿ ನೀಡಲಾಗುವುದು. ಕರಪತ್ರಗಳು 2-3 ಬಾರಿ ಮತದಾರರ ಮನೆ ತಲುಪಲಿ. ಅಲ್ಲದೇ ಪ್ರಸ್ತುತ ಕೇಂದ್ರ ಸರ್ಕರದ ಜನಪರ ಕಾಳಜಿ ಯೋಜನೆಗಳು, ರಾಜ್ಯದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದ ಯೋಜನೆಗಳನ್ನು ಮತದಾರರರಿಗೆ ತಿಳಿಸುವ ಗುರುತರ ಕಾರ್ಯವನ್ನು ಕಾರ್ಯಕರ್ತರು ಒಂದಾಗಿ ಮಾಡೋಣ ಎಂದರು.
ಹುಣಸೂರು ಉಪವಿಭಾಗವನ್ನು ಜಿಲ್ಲೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ತಮ್ಮ ಗುರಿಯನ್ನು ಸಾಧ್ಯವಾಗಿಸಲು ಹುಣಸೂರು ನಾಗರಿಕರು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ಹುಣಸೂರು ಉಪವಿಭಾಗ ಜಿಲ್ಲೆಯಾದಲ್ಲಿ ಹುಣಸೂರು ಪಟ್ಟಣದ ಚಿತ್ರಣವೇ ಬದಲಾಗಲಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಡಿ.ಮಹೇಂದ್ರ ಮಾತನಾಡಿ, ಪಕ್ಷದ ಅಭ್ಯರ್ಥಿಗಳು ಅತ್ಯಂತ ಉತ್ಸಾಹದಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಪಕ್ಷದ ಕಟ್ಟಾಳುಗಳಾಗಿ ನಾವೆಲ್ಲರೂ ದುಡಿದು ಅವರನ್ನು ಗೆಲ್ಲಿಸೋಣ ಎಂದು ಮನವಿ ಮಾಡಿದರು.
ಸಭೆಯಲ್ಲಿ ತಾಲೂಕು ಅಧ್ಯಕ್ಷ ನಾಗಣ್ಣಗೌಡ, ಮುಖಂಡರಾದ ಬಿ.ಎಸ್.ಯೋಗಾನಂದಕುಮಾರ್, ಸಿ.ಟಿ.ರಾಜಣ್ಣ, ವಿಭಾಗಿಯ ಸಂಘಟನಾ ಕಾರ್ಯದರ್ಶಿ ಸುರೇಶ್‌ಬಾಬು, ಪಕ್ಷದ ಮುಖಂಡರಾದ ಸತ್ಯಪ್ಪ, ನಾಗರಾಜ ಮಲ್ಲಾಡಿ, ಕೆ.ಟಿ.ಗೋಪಾಲ್, ಅಣ್ಣಯ್ಯನಾಯ್ಕ, ರಾಜೇಂದ್ರ, ಪಕ್ಷದ ಅಭ್ಯರ್ಥಿಗಳಾದ ಚೇತನ್, ನಾಗರಾಜು, ಚಂದ್ರಮ್ಮ ಗೋವಿಂದನಾಯಕ, ನಾಗೇಶ್, ರವಿ, ಸವಿತಾ ಇತರರಿದ್ದರು.