Advertisement

ಪುರಸಭೆ ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ನಿರ್ಧಾರ

06:49 PM Apr 29, 2022 | Team Udayavani |

ಮುಂಡರಗಿ: ಕಳೆದ ಒಂದೂವರೆ ವರ್ಷದ ಹಿಂದಷ್ಟೇ ಪುರಸಭೆಯ ಗದ್ದುಗೆಯನ್ನೇರಿದ್ದ ಬಿಜೆಪಿಯ ಕವಿತಾ ಅಂದಪ್ಪ ಉಳ್ಳಾಗಡ್ಡಿ ಅಧ್ಯಕ್ಷೆಯಾಗಿ ಆಡಳಿತ ನಡೆಸತೊಡಗಿದ್ದರು. ಆದರೆ, ಏಕಪಕ್ಷೀಯ ನಿರ್ಧಾರ, ಇತರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದಿರುವುದು, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ, ಜನಪ್ರತಿನಿಧಿ ಗಳ ಮಾತಿಗೆ ಮನ್ನಣೆ ನೀಡದಿರುವುದರಿಂದ ಬಿಜೆಪಿ ಸದಸ್ಯರೇ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದು, ಸ್ವಪಕ್ಷೀಯರೇ ಬಂಡಾಯದ ಬಾವುಟ ಹಾರಿಸಿದಂತಾಗಿದೆ.

Advertisement

ಏ.29ರಂದು ಶುಕ್ರವಾರ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ದಿನಾಂಕ ನಿಗದಿಯಾಗಿದೆ. ಕವಿತಾ ಉಳ್ಳಾಗಡ್ಡಿ ಪಾಲಿಗೆ ಶುಭ ಶುಕ್ರವಾರವೋ, ಅಶುಭವೋ ಎನ್ನುವುದು ಸಾಬೀತಾಗುವುದಂತೂ ನಿಶ್ಚಿತವಾಗಿದೆ. ಕಳೆದ 2020ರ ನ.4ರಂದು ಕವಿತಾ ಅ. ಉಳ್ಳಾಗಡ್ಡಿಯವರು ಅವಿರೋಧವಾಗಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಅವಿಶ್ವಾಸಕ್ಕೆ ಬಿಜೆಪಿ-ಕಾಂಗ್ರೆಸ್‌ ಸದಸ್ಯರ ಬೆಂಬಲ: ಏ.11ರಂದು ಪುರಸಭೆಯ ಬಿಜೆಪಿ ಮತ್ತು ಕಾಂಗ್ರೆಸ್‌ ನ 18ಜನ ಸದಸ್ಯರು ಅವಿಶ್ವಾಸ ಕುರಿತು ಪುರಸಭೆ ಅಧ್ಯಕ್ಷರಿಗೆ ಪತ್ರ ಬರೆದು, ಸಹಿ ಮಾಡುವ ಮೂಲಕ ಅವಿಶ್ವಾಸ ಗೊತ್ತುವಳಿ ಮಂಡನೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ಅವಿಶ್ವಾಸ ಪತ್ರದಲ್ಲಿ 18 ಜನ ಸದಸ್ಯರು, ಪುರಸಭೆ ಹಾಲಿ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಸದಸ್ಯರ ಅಭಿಪ್ರಾಯಗಳಿಗೆ ಸ್ಪಂ ದಿಸದೇ ಹಾಗೂ ಗಣನೆಗೆ ತಗೆದುಕೊಳ್ಳದೇ ಸ್ವ-ಇಚ್ಛೆಯಂತೆ ಆಡಳಿತ ನಡೆಸುತ್ತಿದ್ದಾರೆ. ಇದರಿಂದ ಚುನಾಯಿತ ಪ್ರತಿನಿಧಿಗಳಿಗೆ ಅವಮಾನವಾಗುತ್ತಿದೆ. ಪ್ರಸ್ತುತ ಅಧಿಕಾರದಲ್ಲಿರುವ ಅಧ್ಯಕ್ಷರ ಮೇಲೆ ಯಾವುದೇ ರೀತಿಯ ವಿಶ್ವಾಸ ಉಳಿದಿಲ್ಲ. ಆದ್ದರಿಂದ, ನಾವುಗಳು ಒಮ್ಮತದಿಂದ ಹಾಗೂ ಸ್ವಇಚ್ಛೆಯಿಂದ ಸಹಿ ಮಾಡುವುದರೊಂದಿಗೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಅರ್ಜಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಅವಿಶ್ವಾಸದ ಅರ್ಜಿಗೆ ಪುರಸಭೆ ಉಪಾಧ್ಯಕ್ಷ ಶಿವಪ್ಪ ಚಿಕ್ಕಣ್ಣವರ, ಸದಸ್ಯರು, ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪವನಕುಮಾರ ಮೇಟಿ, ಜಿಲ್ಲಾ ಎಸ್‌ಸಿ ಮಹಿಳಾ ಮೋರ್ಚಾದ ರುಕ್ಮಿಣಿ ಸುಣಗಾರ, ಸ್ಥಾಯಿ ಸಮಿತಿ ಅಧ್ಯಕ್ಷೆ ನಿರ್ಮಲಾ ಕೋರ್ಲಹಳ್ಳಿ ಸೇರಿದಂತೆ ಬಿಜೆಪಿ-ಕಾಂಗ್ರೆಸ್‌ ಪಕ್ಷದ ಸದಸ್ಯರು ಸಹಿ ಮಾಡಿದ್ದಾರೆ.

Advertisement

ವಿಶ್ವಾಸವೋ-ವಿಫ್‌ ಬಳಕೆಯೋ: ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಮತ್ತು ರಾಜ್ಯ ಮುಖಂಡರು ತಕ್ಷಣವೇ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿ, ಅವಿಶ್ವಾಸ ಗೊತ್ತುವಳಿ ನಡೆಯದಂತೆ ತಡೆದು, ಪಕ್ಷಕ್ಕೆ ಮುಜುಗರ ಆಗದಂತೆ ಹಾನಿ ತಪ್ಪಿಸಬಹುದಿತ್ತು. ಆದರೆ, ಕಾಲ ಮಿಂಚಿದ ಮೇಲೆ ವಿಪ್‌ನಂತಹ ಅಸ್ತ್ರ ಉಪಯೋಗಿಸಿದರೆ ಏನು ಫಲ ಎನ್ನುವಂತಾಗಿದೆ. ಆದರೆ, ಬಿಜೆಪಿ ವರಿಷ್ಠರ ಒತ್ತಡದ ತಂತ್ರವೇನಾದರೂ ಸದಸ್ಯರ ಮೇಲೆ ಪ್ರಯೋಗವಾಗಿ ಫಲಿಸಿದರೆ ಮಾತ್ರ ಕವಿತಾ ಅ. ಉಳ್ಳಾಗಡ್ಡಿ ಅಧ್ಯಕ್ಷ ಕುರ್ಚಿಯ ಮೇಲೆ ಉಳಿದುಕೊಳ್ಳಬಹುದು ಎನ್ನಲಾಗುತ್ತಿದೆ.

ಹು.ಬಾ.ವಡ್ಡಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next