ಮುಂಡ್ಕೂರು:ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡ ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರೀ ದೇಗುಲದಲ್ಲಿ ಅಷ್ಟಬಂಧ, ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಫೆ. 11ರ ಬೆಳಗ್ಗೆ 8.40ಕ್ಕೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮುಂಡ್ಕೂರು ಸಾಂತ್ರಾಲಗುತ್ತು ವಾದಿರಾಜ ಶೆಟ್ಟಿ ಅವರು ಫೆ. 6ರ ಉಗ್ರಾಣ ಮುಹೂರ್ತದೊಂದಿಗೆ ಬ್ರಹ್ಮಕಲಶೋತ್ಸವದ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಲಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಫೆ. 9ರಂದು ವಾದಿರಾಜ ಕಲಾಮಂದಿರದ ಉದ್ಘಾಟನೆ, ಫೆ.10ರಂದು ದಿ| ಸುನಂದ ಯಂ. ಕರ್ಕೇರಾ ಸ್ಮರಣಾರ್ಥ ಮಹಾಬಲ ಕರ್ಕೇರಾ ಹಾಗೂ ಮಕ್ಕಳ ಕೊಡುಗೆಯ ಕಟ್ಟಡ, ತಡ್ಯಾರು ಸದಾಶಿವ ಶೆಟ್ಟಿ ಮತ್ತು ಸಹೋದರರ ಕೊಡುಗೆಯ ಸಭಾಗೃಹ, ಮುಂಡ್ಕೂರು ದೊಡ್ಡಮನೆ ಫ್ಯಾಮಿಲಿ ಟ್ರಸ್ಟ್‌ನ ಕೊಡುಗೆಯ ಸಭಾಗೃಹದ ಉದ್ಘಾಟನೆ ನಡೆಯಲಿದೆ ಹಾಗೂ ಪ್ರತೀ ದಿನ ಸಂಜೆ 6ರಿಂದ ಶ್ರೀ ದುರ್ಗಾ ವೇದಿಕೆಯಲ್ಲಿ ಧಾರ್ಮಿಕ ಸಭೆ ಮತ್ತು ಉಭಯ ಜಿಲ್ಲೆಗಳ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಲಿವೆ ಎಂದು ವ್ಯವಸ್ಥಾಪನ ಸಮಿತಿಯ ಸದಸ್ಯ ಕೋರಿಬೆಟ್ಟುಗುತ್ತು ಸುರೇಂದ್ರ ಶೆಟ್ಟಿ ತಿಳಿಸಿದರು.
ಫೆ. 11ರ ಬೆಳಗ್ಗೆ 5ಕ್ಕೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನಿಗೆ 25 ದ್ರವ್ಯ ಮೀಳಿತ ಪರಿಕಲಶಾಭಿಷೇಕ ಪೂರ್ವಕ ಬ್ರಹ್ಮಕಲಶಾಭಿಷೇಕ ಪ್ರಾರಂಭ ಗೊಳ್ಳ ಲಿದ್ದು 8.40ಕ್ಕೆ ಪ್ರಧಾನ ಕಲಶಾಭಿಷೇಕ ನಡೆಯಲಿದೆ ಎಂದು ಕ್ಷೇತ್ರದ ಪ್ರಧಾನ ಅರ್ಚಕ ರಾಮದಾಸ ಆಚಾರ್ಯ ತಿಳಿಸಿದರು.
ಮುಂಡ್ಕೂರು ನಡಿಗುತ್ತು ವಿನಯಕುಮಾರ್ ಶೆಟ್ಟಿ ಯವರ ನಿರ್ವಹಣೆಯ ತಂಡ ಬ್ರಹ್ಮ ಕಲಶೋತ್ಸವದಂದು ಆಗಮಿಸಲಿರುವ ಭಕ್ತರ ಆತಿಥ್ಯದ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ವಹಿಸಲಿದೆ. ಕ್ಷೇತ್ರದಲ್ಲಿ ಹಲವಾರು ವರ್ಷ ಗಳಿಂದ ನಿತ್ಯ ಅನ್ನದಾನ ನಡೆಯುತ್ತಿದ್ದು ಬ್ರಹ್ಮಕಲಶೋತ್ಸವದ ಸಂದರ್ಭ ಫೆ. 6ರಿಂದ ಫೆ.18ರಂದು ನಡೆಯುವ ವರ್ಷಾವಧಿ ಜಾತ್ರೆಯ ಪರ್ಯಂತ ವಿಶೇಷ ಅನ್ನದಾನ ನಡೆಯಲಿದೆ ಎಂದು ವಾದಿರಾಜ ಶೆಟ್ಟಿ ತಿಳಿಸಿದರು.ಫೆ. 13ರಂದು ಧ್ವಜಾರೋಹಣ ನಡೆಯಲಿದ್ದು 18ರಂದು ಬ್ರಹ್ಮ ರಥೋತ್ಸವ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯ ರಾದ ರಾಮದಾಸ ಆಚಾರ್ಯ, ಸುರೇಂದ್ರ ಶೆಟ್ಟಿ, ಕೃಷ್ಣ ಪೂಜಾರಿ, ಸಂಜೀವ ಕರ್ಕೇರಾ, ಪ್ರಮುಖರಾದ ಅಶೋಕ ಶೆಟ್ಟಿ, ಸ್ವರಾಜ್ ಶೆಟ್ಟಿ, ಶೇಖರ ಶೆಟ್ಟಿ, ಅರುಣ್ ರಾವ್, ಮಾಧ್ಯಮ ಸಮಿತಿಯ ಸಂಚಾಲಕ ಶರತ್ ಶೆಟ್ಟಿ ಮತ್ತಿತರರಿದ್ದರು.