ಮುಂಬೈ: ಕೋವಿಡ್ 19 ವೈರಸ್ ಕ್ಷಿಪ್ರವಾಗಿ ಹರಡುತ್ತಿರುವುದರಿಂದ 55ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಕೆಲವು ಅನಾರೋಗ್ಯ ಇರುವ ಪೊಲೀಸರು ರಜೆಯ ಮೇಲೆ ತೆರಳುವಂತೆ ಮಹಾರಾಷ್ಟ್ರ ಸರ್ಕಾರ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಕಳೆದ ಮೂರು ದಿನಗಳಲ್ಲಿ ಮುಂಬೈನಲ್ಲಿ ಕೋವಿಡ್ 19 ವೈರಸ್ ಗೆ ಮೂವರು ಪೊಲೀಸರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂವರು ಮೃತ ಪೊಲೀಸರ ಸಂಪರ್ಕಕ್ಕೆ ಬಂದಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಕೋವಿಡ್ 19 ವೈರಸ್ ಗೆ ಸಾವನ್ನಪ್ಪಿರುವವರು 50ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಮಂಗಳವಾರ ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ನಮ್ಮ ಪೊಲೀಸರು ಮತ್ತು ಅಧಿಕಾರಿಗಳನ್ನು ರಕ್ಷಿಸಲು ನಿರ್ಧರಿಸಿದ್ದು, 55 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಉಸಿರಾಟ, ಅಸ್ತಮಾ ಸಮಸ್ಯೆ ಇರುವವರು ರಜೆ ತೆಗೆದುಕೊಳ್ಳುವಂತೆ ಇಲಾಖೆ ಸೂಚಿಸಿದೆ ಎಂದು ಹೇಳಿದೆ.
50 ವರ್ಷಕ್ಕಿಂತ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಗಳು ಹೆಚ್ಚು ಅಪಾಯಕ್ಕೊಳಗಾಗಲಿದ್ದು, ಇಂತಹ ದಿನಗಳಲ್ಲಿ ರಜೆ ತೆಗೆದುಕೊಳ್ಳಲು ನಾವು ಅವಕಾಶ ಕೊಡುತ್ತೇವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಮಹಾರಾಷ್ಟ್ರದಾದ್ಯಂತ ಈವರೆಗೆ 20 ಅಧಿಕಾರಿಗಳು ಸೇರಿದಂತೆ 107 ಮಂದಿ ಪೊಲೀಸರಿಗೆ ಕೋವಿಡ್ 19 ಸೋಂಕು ತಗುಲಿದೆ. ಸೋಮವಾರ ಕೋವಿಡ್ 19 ವೈರಸ್ ಗೆ 57 ವರ್ಷದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಸಾವನ್ನಪ್ಪಿದ್ದರು.
ಇದಕ್ಕೂ ಮೊದಲು ಭಾನುವಾರ 52 ವರ್ಷದ ಹೆಡ್ ಕಾನ್ಸ್ ಟೇಬಲ್ ಹಾಗೂ ಶನಿವಾರ 57 ವರ್ಷದ ಪೊಲೀಸ್ ಕಾನ್ಸ್ ಟೇಬಲ್ ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿದ್ದರು.