ಮುಂಬೈ: ಫೋನ್ ಕದ್ದಾಲಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕರಾಗಿದ್ದ ರಶ್ಮಿ ಶುಕ್ಲಾ ಅವರನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿ ಸೋಮವಾರ(ನ.4) ಆದೇಶ ಹೊರಡಿಸಿದೆ.
ಇದರ ಬೆನ್ನಲ್ಲೇ ಮಹಾರಾಷ್ಟ್ರದ ನೂತನ ಡಿಜಿಪಿ ನೇಮಕಕ್ಕೆ ಮೂವರು ಐಪಿಎಸ್ ಅಧಿಕಾರಿಗಳ ಸಮಿತಿಯನ್ನು ನವೆಂಬರ್ 5ರೊಳಗೆ ರಚಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಆಯೋಗ ಸೂಚಿಸಿದೆ.
ಅಕ್ಟೋಬರ್ 31 ರಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ಡಿಜಿಪಿ ರಶ್ಮಿ ಶುಕ್ಲಾ ಅವರು ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಕಡೆಗೆ ಪಕ್ಷಪಾತ ಧೋರಣೆ ಹೊಂದಿದ್ದಾರೆ ಮತ್ತು ಅವರು ಉನ್ನತ ಹುದ್ದೆಯಲ್ಲಿದ್ದರೆ ನ್ಯಾಯಯುತ ಚುನಾವಣೆ ನಡೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದರು. ಅದರಂತೆ ಶುಕ್ಲಾ ಅವರ ಬಳಿಯಿರುವ ಉಸ್ತುವಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಹಿರಿಯ ಐಪಿಎಸ್ ಅಧಿಕಾರಿಗೆ ಹಸ್ತಾಂತರಿಸುವಂತೆ ಚುನಾವಣಾ ಆಯೋಗವು ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್ ಅವರಿಗೆ ಸೂಚನೆ ನೀಡಿದೆ.
ಇದರೊಂದಿಗೆ ಮಹಾರಾಷ್ಟ್ರ ಚುನಾವಣೆಗೆ ಇನ್ನೇನು ಎರಡು ವಾರಗಳು ಮಾತ್ರ ಬಾಕಿ ಇರುವಂತೆ ಡಿಜಿಪಿ ವರ್ಗಾವಣೆಗೊಂಡಿರುವುದು ಗಮನಾರ್ಹ ಸಂಗತಿಯಾಗಿದೆ.
ಇದೇ ನವೆಂಬರ್ 20 ರಂದು ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ನವೆಂಬರ್ 23 ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ