ಅವಳ ಮಾತುಗಳೇ ಅರ್ಥವಾಗದೆ ನಾನು ಕಣ್ಣು, ಬಾಯಿ ಬಿಟ್ಟುಕೊಂಡು ಸುಮ್ಮನೆ ನಿಂತಿದ್ದೆ. ಅದನ್ನು ಗಮನಿಸಿದ ಅವಳು -“ವೈ ಆರ್ ಯು ನಾಟ್ ರಿಪ್ಲೆ„ಯಿಂಗ್?’ ಎಂದು ಕೇಳಿದಳು…
ಬಾಲ್ಯದಲ್ಲಿ ಸಂಬಂಧಿಕರೊಬ್ಬರ ಮನೆಗೆ ಹೋದಾಗ ಅಲ್ಲಿ ಪರಿಚಯವಾದ ಅವರ ಸಂಬಂಧಿ, ನನ್ನದೇ ವಯಸ್ಸಿನ ಹುಡುಗಿಯಿಂದ ನನ್ನ ಇಂಗ್ಲಿಷ್ ಸಂವಹನ ಪಯಣ ಆರಂಭವಾಯ್ತು ಎನ್ನಬಹುದು. ಮೊದಮೊದಲು ನನ್ನ ಮತ್ತು ಅವಳ ಸಂಭಾಷಣೆ ಮಾತೃಭಾಷೆ ಕೊಂಕಣಿಯಲ್ಲಿ ನಡೆದಿತ್ತು . ಊರಿನ ಪ್ರಸ್ತಾಪ ಬಂದಾಗ ನಾನು ನಮ್ಮ ಊರು “ಮುಂಬಾರು’ ಅಂದೆ. ತಕ್ಷಣ ಆಕೆಯ ಮಾತಿನ ವರಸೆಯೇ ಬದಲಾಯಿತು.
ಅಲ್ಲಿಯವರೆಗೆ ಕೊಂಕಣಿಯಲ್ಲಿ ಮಾತಾಡುತ್ತಿದ್ದವಳು ಇದ್ದಕ್ಕಿದ್ದಂತೆ ಇಂಗ್ಲಿಷ್‌ನಲ್ಲಿ ವಟಗುಟ್ಟತೊಡಗಿದಳು. ನಾನಾಗ ಕನ್ನಡ ಮಾಧ್ಯಮದಲ್ಲಿ ಐದನೇ ತರಗತಿ ಓದುತ್ತಿದ್ದೆ. ಆಗತಾನೆ ಇಂಗ್ಲಿಷ್‌ಅಕ್ಷರಗಳ ಪರಿಚಯವಾಗಿತ್ತು ಅಷ್ಟೆ. ನಾನು ಓದುತ್ತಿದ್ದುದು ಹಳ್ಳಿಯ ಸರ್ಕಾರಿ ಗ್ರಾಮೀಣ ಶಾಲೆಯಾದ್ದರಿಂದ ಇಂಗ್ಲಿಷ್‌ನಲ್ಲಿ ಮಾತಾಡಲು ನಮಗೆ ಹೇಳಿಕೊಟ್ಟಿರಲಿಲ್ಲ. ಹಾಗಾಗಿ ಅವಳೇನು ಹೇಳುತ್ತಿದ್ದಾಳೆಂಬುದು ಅರ್ಥವಾಗದೆ ಕಣ್ಣು ಬಾಯಿ ಬಿಟ್ಟುಕೊಂಡು ಅವಳನ್ನೇ ನೋಡತೊಡಗಿದೆ.
ಸನ್ನೆಯಲ್ಲೂ ಸಂಭಾಷಣೆ ನಡೆಸದೆ, ಗರಬಡಿದಂತೆ ನಿಂತಿದ್ದ ನನ್ನನ್ನು ತಿವಿದು ಆಕೆ “ವೈ ಆರ್ ಯು ನಾಟ್ ರಿಪ್ಲೆ„ಯಿಂಗ್? ಅಂತ ಕೇಳಿದಳು. ಉತ್ತರಿಸುವುದು ಬಿಡಿ, ಈ ಬಾರಿ ಅವಳ ಪ್ರಶ್ನೆಯೇ ನನಗೆ ಅರ್ಥವಾಗಲಿಲ್ಲ. ಕೊನೆಗೊಮ್ಮೆ “ವೈ ಆರ್ ಯು ನಾಟ್ ರಿಪ್ಲೆ„ಯಿಂಗ್?’ ಎಂಬುದನ್ನೇ ಕೊಂಕಣಿಯಲ್ಲಿ ಕೇಳಿದಾಗ, ಒಣಗಿದ ಬಾಯಿಗೆ ನೀರು ಬಿಟ್ಟಂತಾಗಿ “ನನಗೆ ಇಂಗ್ಲಿಷ್ ಬರುವುದಿಲ್ಲ’ ಅಂತ ಸಪ್ಪೆಯಾಗಿ ಹೇಳಿದೆ. ಆಗ ಅವಳು ಚಕಿತಳಾಗಿ, “ಅಲ್ಲ, ಮುಂಬೈಯವಳು ಅಂತ ಈಗ ತಾನೇ ಹೇಳಿದೆಯಲ್ಲ?
ಅಂದ್ಮೇಲೆ ಸಿಂಪಲ್ ಇಂಗ್ಲಿಷ್ ಆದ್ರೂ ಗೊತ್ತಿರಬೇಕು ತಾನೇ? ಅಂದಳು. ಓಹೋ, ನಾನು ಮುಂಬಾರು ಅಂದಿದ್ದು, ಅವಳಿಗೆ ಮುಂಬೈ ಅಂತ ಕೇಳಿಸಿದೆ. ಮುಂಬೈ ಹುಡುಗಿ ಮುಂದೆ ತಾನೇನೂ ಕಡಿಮೆ ಇಲ್ಲ ಅಂತ ತೋರಿಸೋಕೆ ಅವಳು ಇಂಗ್ಲಿಷ್‌ನಲ್ಲಿ ಮಾತಾಡಿದ್ದಾಳೆ ಅನ್ನೋದು ಅರ್ಥವಾಯ್ತು. ನಾನು ಅವಳ ಗೊಂದಲ ನಿವಾರಿಸಿದ ಮೇಲೆಯೇ ಧಾರೆಯಂತೆ ಸುರಿಯುತ್ತಿದ್ದ ಇಂಗ್ಲಿಷ್ ಮಳೆ ನಿಂತಿದ್ದು. ಆ ಘಟನೆಯ ನಂತರ ನನಗೂ ಇಂಗ್ಲಿಷ್ ಕಲಿಯುವ ಛಲ ಮೂಡಿತು. ಈಗ ನಾನೂ ಇಂಗ್ಲಿಷ್‌ನಲ್ಲಿ ಮಾತಾಡಬಲ್ಲೆ.
* ನಾಗಲಕ್ಷ್ಮಿ ಎನ್, ಹೊಸನಗರ