Advertisement

Waqf ಮಂಡಳಿಗೆ ರೈತರ ಒಂದಿಂಚು ಜಾಗವೂ ಬೇಡ: ಸಚಿವ ತ್ರಯರು

02:53 AM Oct 29, 2024 | Team Udayavani |

ಬೆಂಗಳೂರು: ರೈತರಿಗೆ ವಕ್ಫ್ ಮಂಡಳಿ ಜಾರಿಗೊಳಿಸಿರುವ ನೋಟಿಸ್‌ ವಿವಾದ ಸಂಬಂಧ ವಿಜಯಪುರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿರುವ ಸರಕಾರ, ವಿವಾದವನ್ನು ಇತ್ಯರ್ಥಪಡಿಸುವ ಹೊಣೆ ಹೊರಿಸಿದೆ. ಅಲ್ಲದೆ ಈ ಬಗ್ಗೆ ಸಚಿವರಾದ ಎಂ.ಬಿ. ಪಾಟೀಲ್‌, ಕೃಷ್ಣ ಬೈರೇಗೌಡ, ಜಮೀರ್‌ ಖಾನ್‌ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ರಾಜ್ಯದಲ್ಲಿ ಒಟ್ಟು 1.12 ಲಕ್ಷ ಎಕರೆ ವಕ್ಫ್ ಆಸ್ತಿ ಇದ್ದು, 23 ಸಾವಿರ ಎಕರೆ ಮಾತ್ರ ಉಳಿದಿದೆ. ಈಗ ವಿಜಯಪುರದಲ್ಲಿ ಮಂಜೂರಾಗದ ಭೂಮಿಯನ್ನಷ್ಟೇ ವಕ್ಫ್ ಕೇಳುತ್ತಿದೆ. ವಕ್ಫ್ ಮಂಡಳಿಗೆ ರೈತರ ಒಂದಿಂಚು ಜಾಗವೂ ಬೇಡ ಎಂದೂ ಸ್ಪಷ್ಟನೆ ನೀಡಿದ್ದಾರೆ.

Advertisement

ಈ ಟಾಸ್ಕ್ಫೋರ್ಸ್‌ನಲ್ಲಿ ಜಿ.ಪಂ. ಸೇರಿದಂತೆ ಎಲ್ಲ ಪಂಚಾಯತ್‌ಗಳ ಇಒಗಳು, ಎಲ್ಲ ತಾಲೂಕುಗಳ ಉಪವಿಭಾಗಾಧಿಕಾರಿ, ತಹಶೀಲ್ದಾರ್‌, ಆಯುಕ್ತರು, ವಕ್ಫ್ ಮಂಡಳಿ ಇರಲಿದ್ದು, 1964ರಿಂದ 1974ರ ವರೆಗಿನ ಕಂದಾಯ ದಾಖಲೆಗಳನ್ನು ಪುನರ್‌ಪರಿಶೀಲನೆ ಮಾಡಲು ಟಾಸ್ಕ್ಫೋರ್ಸ್‌ಗೆ ಹೊಣೆ ನೀಡಲಾಗಿದೆ ಎಂದರು.

ಒಂದೆರಡು ಕಡೆ ಅಕಸ್ಮಾತ್‌ ತಪ್ಪಾಗಿದೆ
ಭೂಸುಧಾರಣೆ ಕಾಯ್ದೆ ಅನ್ವಯ 11,835.29 ಎಕರೆ ಉಳುವವನೇ ಭೂಮಿಯ ಒಡೆಯ ಯೋಜನೆಯಡಿ ಮಂಜೂರಾಗಿದ್ದು, 1459 ಎಕರೆ ಇನಾಮ್‌ ರದ್ದತಿ ಕಾಯ್ದೆಯಡಿ ಮಂಜೂರಾಗಿದೆ. ಇವ್ಯಾವಕ್ಕೂ ನೋಟಿಸ್‌ ಕೊಟ್ಟಿಲ್ಲ. ಒಂದೆರಡು ಪ್ರಕರಣದಲ್ಲಿ ಮಾತ್ರ ಅಕಸ್ಮಾತ್‌ ಆಗಿ ತಪ್ಪಾಗಿದೆ. ಯಾರ ಅನುಭೋಗದಲ್ಲಿ ಇಲ್ಲದ, ಮಂಜೂರಾಗದ 1,319 ಎಕರೆಯನ್ನು ಮಾತ್ರ ವಕ್ಫ್ ಮಂಡಳಿ ಕೇಳುತ್ತಿದೆ. ಇದನ್ನು ಇಂದೀಕರಣ ಮಾಡಲು ಅವಕಾಶವಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ರಾಜ್ಯದಲ್ಲಿದೆ 1.12 ಲಕ್ಷ ಎಕರೆ ವಕ್ಫ್ ಆಸ್ತಿ
ಅಲ್ಪಸಂಖ್ಯಾಕರ ಕಲ್ಯಾಣ ಸಚಿವ ಜಮೀರ್‌ ಖಾನ್‌ ಮಾತನಾಡಿ, ವಕ್ಫ್ ಆಸ್ತಿ ಎಂದರೆ ದಾನಿಗಳು ಕೊಟ್ಟ ಜಾಗ. ಸರಕಾರಿ ಜಾಗ ಅಲ್ಲ. ಇತ್ತೀಚಿನ ವರ್ಷಗಳಲ್ಲಿ ಅಂತ್ಯಸಂಸ್ಕಾರಕ್ಕೆ ಎಲ್ಲ ಸಮುದಾಯಗಳಿಗೆ ಜಾಗ ಕೊಟ್ಟಂತೆ ನಮ್ಮ ಸಮುದಾಯದ ಖಬರಸ್ತಾನಗಳಿಗಷ್ಟೇ ಸರಕಾರ ಜಾಗ ಕೊಟ್ಟಿದೆ. ರಾಜ್ಯದಲ್ಲಿ ಒಟ್ಟು 1.12 ಲಕ್ಷ ಎಕರೆ ವಕ್ಫ್ ಆಸ್ತಿ ಇದ್ದು, ಇದಿಷ್ಟೂ ಮುಸ್ಲಿಮರಿಂದ ದಾನವಾಗಿ ಬಂದ ಜಾಗಗಳೇ ಆಗಿವೆ. ಈ ಪೈಕಿ 23 ಸಾವಿರ ಎಕರೆ ಮಾತ್ರ ಉಳಿದಿದ್ದು, ಉಳಿದದ್ದು ಒತ್ತುವರಿ ಆಗಿವೆ. ಉಳಿದಿರುವ ಜಾಗವನ್ನು ಉಳಿಸಿಕೊಳ್ಳುವ ಸಲುವಾಗಿ ನಾನು ವಕ್ಫ್ ಅದಾಲತ್‌ ನಡೆಸಿದ್ದೆ. ಇದಕ್ಕೆ ಬಿಜೆಪಿ ನಾಯಕರನ್ನೂ ಆಹ್ವಾನಿಸಲಾಗಿತ್ತು. ಸಭೆಗೆ ಬಾರದೆ ಈ ರೀತಿಯ ಆರೋಪಗಳನ್ನು ಬೇಕೆಂದೇ ಮಾಡುತ್ತಿದ್ದಾರೆ. ವಕ್ಫ್ ಮಂಡಳಿಗೆ ರೈತರ ಒಂದಿಂಚು ಜಾಗವೂ ಬೇಡ. ಹಾಗೇನಾದರೂ ವ್ಯತ್ಯಾಸ ಆಗಿದ್ದರೆ ಸರಿಪಡಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next