ಮುಂಬಯಿ: ಮೂರು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ನೂತನ ಹೆಸರಿನ “ಡೆಲ್ಲಿ ಕ್ಯಾಪಿಟಲ್ಸ್’ ತಂಡಗಳು ರವಿವಾರ ರಾತ್ರಿ ಐಪಿಎಲ್ ಅಖಾಡಕ್ಕಿಳಿಯಲಿವೆ.
“ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆಯುವ ಕಾರಣ ಇದು ರೋಹಿತ್ ಪಡೆಗೆ ತವರಿನ ಪಂದ್ಯ. ಇನ್ನೊಂದೆಡೆ ಡೆಲ್ಲಿ ನಾಯಕನಾಗಿರುವ ಶ್ರೇಯಸ್ ಅಯ್ಯರ್ ಹಾಗೂ ಯುವ ಆರಂಭಕಾರ ಪೃಥ್ವಿ ಶಾ ಮೂಲತಃ ಮುಂಬಯಿಯವರೇ ಆಗಿರುವುದರಿಂದ ಅವರಿಗೂ ಇದು ತವರು ಪಂದ್ಯ!
ಆರಂಭದಲ್ಲಿ ಸೋಲಿನಾಟವಾಡುತ್ತ, ನಾಕೌಟ್ ಸಮೀಪಿಸುತ್ತಿದ್ದಂತೆ ಒಮ್ಮೆಲೇ ಚಿಗುರಿಕೊಳ್ಳುವ ಮುಂಬೈ ಇಂಡಿಯನ್ಸ್ ಸ್ಟಾರ್ ಆಟಗಾರರನ್ನು ಹೊಂದಿರುವ ತಂಡ. ವಿಶ್ವಕಪ್‌ಗೆ ಅಣಿಯಾಗಿರುವ ಟೀಮ್ ಇಂಡಿಯಾದ 3 ಪ್ರಧಾನ ಆಟಗಾರರು ಇಲ್ಲಿದ್ದಾರೆ. ಇವರೆಂದರೆ ರೋಹಿತ್ ಶರ್ಮ, ಜಸ್‌ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ. ಒಂದಾನೊಂದು ಕಾಲದ ಹೀರೋ ಯುವರಾಜ್ ಸಿಂಗ್ ಕೂಡ ಈ ಬಾರಿ ಮುಂಬೈ ಪಾಲಾಗಿದ್ದಾರೆ. ಮುಂಬಯಿ ರಣಜಿಯ ಬಹುತೇಕ ಆಟಗಾರರ ಜತೆಗೆ ಕ್ವಿಂಟನ್ ಡಿ ಕಾಕ್, ಜಾಸನ್ ಬೆಹೆÅಂಡಾಫ್ì, ಬೆನ್ ಕಟಿಂಗ್, ಎವಿನ್ ಲೆವಿಸ್, ಕೈರನ್ ಪೊಲಾರ್ಡ್ ಅವರೆಲ್ಲ ಈ ತಂಡದ ಸ್ಟಾರ್ ಕ್ರಿಕೆಟಿಗರಾಗಿದ್ದಾರೆ.
ಇತ್ತೀಚೆಗೆ ಗಾಯಾಳಾಗಿ ಟೀಮ್ ಇಂಡಿಯಾದಿಂದ ಬೇರ್ಪಟ್ಟಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಪ್ರಮುಖ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರ ಫಾರ್ಮ್ ಮತ್ತು “ವರ್ಕ್ ಲೋಡ್’ ಮೇಲೆ ತಂಡದ ಆಡಳಿತ ಮಂಡಳಿ ಹೆಚ್ಚಿನ ನಿಗಾ ಇರಿಸಲು ನಿರ್ಧರಿಸಿದೆ. ಇವರಿಬ್ಬರೂ ವಿಶ್ವಕಪ್ ತಂಡದ ಪ್ರಧಾನ ಅಸ್ತ್ರಗಳಾಗಿರುವುದೇ ಇದಕ್ಕೆ ಕಾರಣ.
ಆದರೆ ಪ್ರಧಾನ ವೇಗಿ ಲಸಿತ ಮಾಲಿಂಗ ಮೊದಲ 6 ಪಂದ್ಯಗಳಿಗೆ ಲಭ್ಯರಿಲ್ಲದಿರುವುದು ತಂಡಕ್ಕೆ ಎದುರಾದ ದೊಡ್ಡ ಹಿನ್ನಡೆ. ಹೀಗಾಗಿ ಮೆಕ್ಲೆನಗನ್, ಮಾರ್ಖಂಡೆ, ಕೃಣಾಲ್ ಪಾಂಡ್ಯ, ಜಯಂತ್ ಯಾದವ್, ರಾಹುಲ್ ಚಹರ್, ಸ್ರಾನ್ ಹೆಚ್ಚಿನ ಭಾರ ಹೊರಬೇಕಿದೆ.
ಡೆಲ್ಲಿಯೂ ಬಲಿಷ್ಠ ತಂಡ
ಈವರೆಗೆ ಐಪಿಎಲ್‌ನಲ್ಲಿ ಗಮನಾರ್ಹ ಸಾಧನೆ ದಾಖಲಿಸದೇ ಹೋದರೂ ಡೆಲ್ಲಿ ಕೂಡ ಪ್ರಬಲ ತಂಡವಾಗಿ ಗೋಚರಿಸುತ್ತಿದೆ. ಬೌಲ್ಟ್, ಇಶಾಂತ್, ರಬಾಡ, ನಾಥು ಸಿಂಗ್, ಕೀಮೊ ಪೌಲ್ ಅವರನ್ನೊಳಗೊಂಡ ಬೌಲಿಂಗ್ ವಿಭಾಗ ಹೆಚ್ಚು ಬಲಿಷ್ಠವಾಗಿದೆ.
ಬ್ಯಾಟಿಂಗ್ ವಿಭಾಗದಲ್ಲಿ ಹೈದರಾಬಾದ್‌ನಿಂದ ತವರಿಗೆ ಮರಳಿದ ಧವನ್, ಹಾರ್ಡ್ ಹಿಟ್ಟರ್ ಪಂತ್, ನಾಯಕ ಅಯ್ಯರ್, ಪೃಥ್ವಿ ಶಾ, ಮನ್‌ಜೋತ್ ಕಾರ್ಲಾ, ಆಲ್‌ರೌಂಡರ್ ಕ್ರಿಸ್ ಮಾರಿಸ್, ಕಾಲಿನ್ ಮುನ್ರೊ, ಹನುಮ ವಿಹಾರಿ, ಜಲಜ್ ಸಕ್ಸೇನಾ ಅವರೆಲ್ಲ ಡೆಲ್ಲಿ ಬೆಂಬಲಕ್ಕಿದ್ದಾರೆ.ಹೆಸರು ಬದಲಾದೊಡನೆ ಡೆಲ್ಲಿ ತಂಡದ ಅದೃಷ್ಟವೂ ಬದಲಾದೀತೇ ಎಂಬ ಕುತೂಹಲಕ್ಕೆ ರವಿವಾರ ರಾತ್ರಿಯಿಂದ ಉತ್ತರ ಲಭಿಸಲಿದೆ.