ಮೂಲ್ಕಿ : ಇಲ್ಲಿಯ ಹೆದ್ದಾರಿಯ ಟ್ರಾಫಿಕ್ ಸಮಸ್ಯೆ ಬಗ್ಗೆ ಮಂಗಳೂರಿನ ಟ್ರಾಫಿಕ್ ವಿಭಾಗದ ಎ.ಸಿ.ಪಿ. ಮಂಜುನಾಥ ಶೆಟ್ಟಿ ಅವರ ನೇತೃತ್ವದಲ್ಲಿ ಬುಧ ವಾರ ಹೆದ್ದಾರಿ ವಿಭಾಗದ ಮತ್ತು ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳು ಪರಿವೀಕ್ಷಣೆ ನಡೆಸಿದರು. ಹೆಚ್ಚುತ್ತಿರುವ ಅಪಘಾತಕ್ಕೆ ಪರಿಹಾರ ಬಗ್ಗೆ ನಡೆದ ಸಭೆಯ ತೀರ್ಮಾನದಂತೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು. ಮೊದಲ ಹಂತವಾಗಿ ಇಲಾಖೆಯಿಂದ ತರಿಸಲಾದ ಬ್ಯಾರಿಕೇಡರ್‌ಗಳನ್ನು ಹೆದ್ದಾರಿಯಲ್ಲಿ ಅಳವಡಿಸಲಾಯಿತು. ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಯಿತು. ರಿಕ್ಷಾ ಚಾಲಕರ ಜತೆಗೆ ಮಾತನಾಡಿದ ಪೊಲೀಸರು ಕೆಲವೊಂದು ಮುನ್ನೆಚ್ಚರಿಕೆ ಕ್ರಮವಾಗಿ ರಿಕ್ಷಾ ನಿಲುಗಡೆಯಲ್ಲೂ ಬದಲಾವಣೆ ಮಾಡುವಂತೆ ಸೂಚಿಸಿದರು.
ಬ್ಲಿಂಕರ್ ದೀಪ ಅಳವಡಿಕೆ
ಬ್ಲಿಂಕರ್ ದೀಪ ತತ್‌ಕ್ಷಣದಿಂದ ಅಳವಡಿಸುವಲ್ಲಿ ಪೊಲೀಸರು ನೀಡಿದ ಸಲಹೆಗೆ ಹೆದ್ದಾರಿ ಇಲಾಖೆ ಒಪ್ಪಿಗೆ ನೀಡಿತು. ಆದಿಧನ್ ಎದುರಿನ ನೇರ ಹಾಗೂ ಅಡ್ಡ ತಿರುಗುವ ಬದಲು ಆರ್. ಆರ್. ಟವರಿನತ್ತ ಬದಲಾಯಿಸುವ ಮೂಲಕ ಹೆಚ್ಚಿನ ಪ್ರಯೋಜನ ಸಿಗದು ಎಂದು ಅಭಿಪ್ರಾಯ ಪಟ್ಟಿರುವ ಹೆದ್ದಾರಿ ತಜ್ಞರು ಪ್ರಾಯೋಗಿಕವಾಗಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಅಧಿಕಾರಿಗಳು ಮುಂದಾಗ ಬೇಕು ಎಂದರು.
ಬಸ್ಸು ನಿಲ್ದಾಣದ ಬಳಿಯ ಎರಡು ರಿಕ್ಷಾ ಪಾರ್ಕ್‌ಗಳ ಬಗ್ಗೆ ಅಧಿಕಾರಿಗಳು ಕೊಟ್ಟಿರುವ ಸಲಹೆಯನ್ನು ರಿಕ್ಷಾ ಚಾಲಕರು ಒಪ್ಪಿಕೊಳ್ಳದಿದ್ದರೆ ಮುಂದಕ್ಕೂ ಈ ಕ್ರಮದಿಂದ ಅನಾಹುತ ತಪ್ಪಿದಲ್ಲ ಎಂಬುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಹೆದ್ದಾರಿ ಪಕ್ಕದ ಜಾಗವನ್ನು ಹೆದ್ದಾರಿ ವಶಪಡಿಸಿಕೊಂಡಿದ್ದು ಅಲ್ಲಿರುವ ಕಟ್ಟಡ ಅಥವಾ ಇತರ ನಿರ್ಮಾಣಗಳನ್ನು ತೆಗೆದು ಖಾಲಿ ಮಾಡಿ ಕೊಟ್ಟಲ್ಲಿ ನಗರ ಪಂಚಾಯತ್ ನಿಂದ ಸಾಧ್ಯವಾದಷ್ಟು ಪ್ರಮಾಣದಲ್ಲಿ ಚಾಲಕರಿಗೆ ಸಹಾಯ ಮಾಡುವ ಪ್ರಯತ್ನ ಮಾಡಬಹುದು ಎಂದು ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವ ತಿಳಿಸಿದರು.
ಪೊಲೀಸ್ ವ್ಯವಸ್ಥೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಾರ್ವಜನಿಕರು, ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ಸಂಪೂರ್ಣವಾಗಿ ಸಹಕರಿಸುವುದು ಅಗತ್ಯವಾಗಿದೆ. ಜನರ ಹಿತಕ್ಕಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಯನ್ನು ಇಲಾಖೆಯಿಂದ ನಿರ್ವಹಿಸಲು ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಇನ್‌ಸ್ಪೆಕ್ಟರ್ ಅಮಾನುಲ್ಲಾ ತಿಳಿಸಿದರು. ಎ.ಸಿ.ಪಿ. ಮಂಜುನಾಥ ಶೆಟ್ಟಿ, ಮಂಗಳೂರು ಪಶ್ಚಿಮ ಪಾಂಡೇಶ್ವರ ಮತ್ತು ಮಂಗಳೂರು ಉತ್ತರ ವಿಭಾಗದ ಇನ್‌ಸ್ಪೆಕ್ಟರ್ ಅಮಾನುಲ್ಲಾ, ಎಸ್.ಐ. ರವಿ ಪವಾರ್, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಸರ್ವಿಸ್ ರಸ್ತೆಗಳಲ್ಲಿ ಪಾರ್ಕಿಂಗ್ ಬೇಡ
ಸರ್ವಿಸ್ ರಸ್ತೆ ಗಳ ಕಾಮಗಾರಿ ಮಾಡುವಲ್ಲಿ ಸ್ಥಳೀಯರ ಅಸಹಕಾರದಿಂದ ವಿಳಂಬವಾಗಿದೆ ಸರ್ವಿಸ್ ರಸ್ತೆಗಳಲ್ಲಿ ಯಾವುದೇ ವಾಹನ ಪಾರ್ಕ್ ಮಾಡದೆ ಉಡುಪಿ ಕಡೆಯಿಂದ ಬರುವ ಬಸ್ಸುಗಳು ಆರ್.ಆರ್.ಟವರ್ ಎದುರಿನ ಸರ್ವಿಸ್ ರಸ್ತೆ ಮೂಲಕ ವಿಜಯ ಸನ್ನಿಧಿ ಬಳಿಯ ಬಸ್ ನಿಲ್ದಾಣಕ್ಕೆ ಹಾಗೂ ಮಂಗಳೂರು ಕಡೆಯಿಂದ ಬರುವ ಬಸ್‌ಮಿಶನ್ ಕಾಂಪೌಂಡ್ ಬಳಿಯ ಸರ್ವಿಸ್ ರಸ್ತೆ ಮೂಲಕ ಮೂಲ್ಕಿ ಬಸ್ ನಿಲ್ದಾಣಕ್ಕೆ ಬರ ಬೇಕು. ಸರ್ವಿಸ್ ಮಾರ್ಗವನ್ನು ಬಳಸಿದಲ್ಲಿ ಮಾತ್ರ ಇದಕ್ಕೆ ಪೂರ್ಣ ಪರಿಹಾರ ಸಾಧ್ಯ ಎಂದು ಹೆದ್ದಾರಿ ಇಲಾಖೆ ತಜ್ಞರು ಅಭಿಪ್ರಾಯಪಟ್ಟರು.