ಮುಂಬಯಿ: 2019ರಲ್ಲಿ ಮುಕೇಶ್ ಅಂಬಾನಿ ಮಾತು ನೀಡಿದ್ದಂತೆ, ರಿಲಯನ್ಸ್ ಕಂಪನಿ ಸಂಪೂರ್ಣ ಸಾಲಮುಕ್ತವಾಗಿದೆ.
ಅದು 1,61,035 ಕೋಟಿ ರೂ. ಸಾಲ ಹೊಂದಿತ್ತು. ಬರೀ 58 ದಿನಗಳಲ್ಲಿ ರಿಲಯನ್ಸ್ 1,68,818 ಕೋಟಿ ರೂ.ಗಳನ್ನು ಸಂಗ್ರಹಿಸಿ ಸಾಲದಿಂದ ಹೊರಬಂದಿದೆ.
ಇಷ್ಟು ಕಡಿಮೆ ಅವಧಿಯಲ್ಲಿ ಈ ಮೊತ್ತವನ್ನು ಸಂಗ್ರಹಿಸಿದ ಉದಾಹರಣೆ ಜಾಗತಿಕವಾಗಿಯೂ ಇಲ್ಲ.
ಹಾಗೆಯೇ ಇಷ್ಟು ಕಡಿಮೆ ಅವಧಿಯಲ್ಲಿ ಸಾಲಮುಕ್ತವಾಗಿದ್ದು, ಭಾರೀ ಹಣ ಸಂಗ್ರಹಿಸಿದ್ದು ಭಾರತೀಯ ವಾಣಿಜ್ಯ ಕಂಪನಿಗಳ ಇತಿಹಾಸದಲ್ಲೂ ನಡೆದಿಲ್ಲ ಎಂದು ರಿಲಯನ್ಸ್ ಹೇಳಿಕೊಂಡಿದೆ.
10 ವಿದೇಶಿ ಕಂಪನಿಗಳಿಗೆ ಜಿಯೋ ದೂರ ಸಂಪರ್ಕ ಕಂಪನಿ ಷೇರು ಮಾರಾಟ ಮಾಡಿ 1.16 ಲಕ್ಷ ಕೋಟಿ ರೂ., ಹಕ್ಕಿನ ಷೇರುಗಳನ್ನು ಬಿಡುಗಡೆ ಮಾಡಿ 53,124 ಕೋಟಿ ರೂ.ಗಳನ್ನು ರಿಲಯನ್ಸ್ ಸಂಗ್ರಹಿಸಿದೆ. ಇದರೊಂದಿಗೆ ತಾನು ಹೇಳಿಕೊಂಡಿದ್ದ ಗುರಿಗೂ ಬಹಳ ಮುನ್ನವೇ ಸಾಲದಿಂದ ಹೊರಬಂದಿದೆ.
2019ರಲ್ಲಿ ಮುಕೇಶ್, 2021 ಮಾ.31ರೊಳಗೆ ತಮ್ಮ ಕಂಪನಿ ಸಾಲಮುಕ್ತವಾಗಲಿದೆ ಎಂದು ಹೇಳಿದ್ದರು.