ಬೆಂಗಳೂರು: ಟಿಕೆಟ್ ಕೈ ತಪ್ಪಿದ್ದರಿಂದ ಪಕ್ಷದ ನಾಯಕರ ವಿರುದ್ಧ ಬಂಡಾಯವೆದ್ದು ತುಮಕೂರು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಾಲಿ ಸಂಸದ ಮುದ್ದ ಹನುಮೇಗೌಡರ ಮನವೊಲಿಕೆಗೆ ರಾಜ್ಯ ಕಾಂಗ್ರೆಸ್ ನಾಯಕರು ಕಸರತ್ತು ಮುಂದುವರಿಸಿದ್ದಾರೆ.
ಬುಧವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತುಕತೆಗೆ ಕರೆದಿದ್ದರೂ, ಭೇಟಿಯಾಗದೇ ದೂರ ಉಳಿದಿದ್ದ ಮುದ್ದಹನುಮೇಗೌಡರ ಮನವೊಲಿಕೆಗೆ ಗುರುವಾರ ಜೆಡಿಎಸ್ ನಾಯಕರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಯತ್ನ ನಡೆಸಿದರು.
ಸಿದ್ದರಾಮಯ್ಯ ಅವರು ತಮ್ಮನ್ನು ಭೇಟಿ ಮಾಡುವಂತೆ ಮುದ್ದಹನುಮೇಗೌಡರಿಗೆ ದೂರವಾಣಿ ಮೂಲಕ ಆಹ್ವಾನ ನೀಡಿದ್ದರೂ, ಆಗಮಿಸಲಿಲ್ಲ. ಅಲ್ಲದೇ ತಮ್ಮ ಜತೆಗೆ ಪ್ರತ್ಯೇಕವಾಗಿ ಮಾತನಾಡುತ್ತೇನೆ ಎಂದು ತಾವು ಕಣದಿಂದ ಹಿಂದೆ ಸರಿಯುವುದಿಲ್ಲ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ ಎನ್ನಲಾಗಿದೆ.
ತುಮಕೂರು ಜೆಡಿಎಸ್ ಮುಖಂಡರಾದ ಸಚಿವ ಎಸ್.ಆರ್.ಶ್ರೀನಿವಾಸ್, ಶಾಸಕರಾದ ಡಿ.ಸಿ. ಗೌರಿಶಂಕರ್, ಬಿ.ಸತ್ಯನಾರಾಯಣ, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಕೂಡ ಮುದ್ದ ಹನುಮೇಗೌಡರನ್ನು ಭೇಟಿ ಮಾಡಿ ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ.
ಈ ನಡುವೆ ಮತ್ತೂಬ್ಬ ಬಂಡಾಯ ಅಭ್ಯರ್ಥಿ ಕೆ.ಎನ್. ರಾಜಣ್ಣ ಅವರನ್ನು ತಮ್ಮ ನಿವಾಸಕ್ಕೆ ಕರೆಸಿ ಮಾತುಕತೆ ನಡೆಸಿದ ಸಿದ್ದರಾಮಯ್ಯ, ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ. ಮುದ್ದಹನುಮೇಗೌಡ ನಾಮಪತ್ರ ವಾಪಸ್ ಪಡೆದರೆ ತಾವು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಎಲ್ಲ ನಾಯಕರ ಮನವೊಲಿಕೆ ಪ್ರಯತ್ನದ ನಂತರವೂ ಮುದ್ದಹನುಮೇಗೌಡ, ಗುರುವಾರ ಸಂಜೆ ತಮ್ಮ ಆಪ್ತರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ, ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.