Advertisement

ಚಲಿಸಿದ ಮರಗಳು!

10:13 AM Mar 15, 2020 | Lakshmi GovindaRaj |

ಬಸವನಗುಡಿಯ ಬಿಎಂಎಸ್‌ ಕಾಲೇಜಿನ ಕ್ಯಾಂಪಸ್ಸಿನಲ್ಲಿದ್ದ 5 ಮರಗಳು ಯಾಕೋ ದುಃಖದಲ್ಲಿದ್ದವು. ಕಟ್ಟಡ ಕಟ್ಟುವ ಸಂಬಂಧ, ಅವು ಇನ್ನೇನು ಧರೆಗೆ ಉರುಳಬೇಕಿತ್ತು. ಅವುಗಳ ಪಾಲಿಗೆ ಅಕ್ಷರಶಃ ದೇವರಾಗಿ ಬಂದವರು ಇಬ್ಬರು ಹುಡುಗರು: ಚಿರಂಜನ್‌ ಮತ್ತು ಕೌಸ್ತುಭ್‌…

Advertisement

ಬೆಂಗಳೂರಿನಲ್ಲಿ ಮರಗಳ ಕಷ್ಟಗಳಿಗೆ ಕಿವಿಗೊಡುವ ದೇವರೇ ಇಲ್ಲ. ಯಾವುದೇ ಕಾಮಗಾರಿಗೂ ಮೊದಲು ಬಲಿಯಾಗುವುದೇ ಇಲ್ಲಿನ ಮರಗಳು. ಬಸವನಗುಡಿಯ ಬಿಎಂಎಸ್‌ ಕಾಲೇಜಿನ ಕ್ಯಾಂಪಸ್ಸಿನಲ್ಲಿದ್ದ 5 ಮರಗಳೂ ಇದೇ ದುಃಖದಲ್ಲೇ ಇದ್ದವು. ಕಟ್ಟಡ ಕಟ್ಟುವ ಸಂಬಂಧ, ಅವು ಇನ್ನೇನು ಧರೆಗೆ ಉರುಳಬೇಕಿತ್ತು. ಅವುಗಳ ಪಾಲಿಗೆ ಅಕ್ಷರಶಃ ದೇವರಾಗಿ ಬಂದವರು ಇಬ್ಬರು ಹುಡುಗರು: ಚಿರಂಜನ್‌ ಮತ್ತು ಕೌಸ್ತುಭ್‌.

ವಿದೇಶದಲ್ಲಿ ಮರಗಳಿಗೆ ಇಂಥ ದುಃಸ್ಥಿತಿ ಎದುರಾದಾಗ, ಅವುಗಳನ್ನು ಒಂದೆಡೆಯಿಂದ ಮತ್ತೂಂದೆಡೆಗೆ ಶಿಫ್ಟ್ ಮಾಡುವುದರ ವಿಡಿಯೊ ಈ ಹುಡುಗರ ಕಣ್ಣಿಗೆ ಬಿದ್ದಿತ್ತು. ಆ ಪ್ರಕ್ರಿಯೆ ಬಗ್ಗೆ ಯೂಟ್ಯೂಬ್‌ಗಳಲ್ಲಿ ತಡಕಾಡುವಾಗಲೇ, ಈ ಹಿಂದೆ ಇದೇ ಬೆಂಗಳೂರಿನಲ್ಲಿ ವಿಜಯ್‌ ನಿಶಾಂತ್‌ ಎಂಬುವರು ಮರಗಳನ್ನು ಶಿಫ್ಟ್ ಮಾಡಿದ್ದ ಸಂಗತಿ ಕಣ್ಣಿಗೆ ಬಿತ್ತು. ಕೂಡಲೇ ಅವರನ್ನು ಸಂಪರ್ಕಿಸಿ, ಮಾಹಿತಿ ಪಡೆದು, ಮರ ವರ್ಗಾಯಿಸುವ ಸಾಹಸಕ್ಕೆ ಇವರಿಬ್ಬರೂ ಮುಂದಾದರು. ಕಾಲೇಜಿನ ಟ್ರಸ್ಟಿ ದಯಾನಂದ ಪೈ ಮತ್ತು ನಿರ್ದೇಶಕರು ಅಗತ್ಯ ಧನಸಹಾಯ ನೀಡಿದ್ದರಿಂದ ಕೆಲಸ ಇನ್ನಷ್ಟು ಸಲೀಸಾಯಿತು.

ಮರವನ್ನು ಯಥಾವತ್ತಾಗಿ, ಒಂದೆಡೆಯಿಂದ ಮತ್ತೂಂದೆಡೆಗೆ ಕೊಂಡೊಯ್ದು ಕೂರಿಸಲು ಸಾಧ್ಯವಿಲ್ಲ. ಅದರ ರೆಂಬೆಕೊಂಬೆಗಳು ಬಹಳ ಎತ್ತರಕ್ಕೆ ಚಾಚಿಕೊಂಡಿರುವ ಕಾರಣ, ವರ್ಗಾವಣೆಗೆ ಸಹಜವಾಗಿ ತೊಡಕಾಗುತ್ತದೆ. ಮೊದಲು ಅದರ ರೆಂಬೆ- ಕೊಂಬೆಗಳನ್ನು ಕಡಿದು, ಜೆಸಿಬಿ ಮೂಲಕ ಬುಡದಲ್ಲಿ ಐದಾರು ಅಡಿ ಮಣ್ಣು ತೆಗೆದು, ಕ್ರೇನ್‌ನಿಂದ ಮರವನ್ನು ನಿಧಾನಕ್ಕೆ ಎತ್ತಲಾಯಿತು. ತಮ್ಮ ಕಾಲೇಜಿನಿಂದ 10 ಕಿ.ಮೀ. ದೂರದಲ್ಲಿರುವ ಬನಶಂಕರಿಯ 6ನೇ ಹಂತದ ಶಿಲೊದ್ಯಾನದಲ್ಲಿ ಆ ಮರಗಳಿಗೆ ಸುಂದರ ಜಾಗ ನೋಡಿ, ಅಲ್ಲಿ ನೆಟ್ಟರು.

ಇಷ್ಟಕ್ಕೇ ಈ ಹುಡುಗರ ಕೆಲಸ ನಿಲ್ಲಲಿಲ್ಲ. ಹೊಸ ಜಾಗಕ್ಕೆ ಬಂದ ಮರಗಳಿಗೆ, ಮೊದಲು ಚಿಕಿತ್ಸೆ ನೀಡಿದರು. ರೆಂಬೆಗಳನ್ನು ಕಡಿದ ಜಾಗದಲ್ಲಿ ಔಷಧ ಹಚ್ಚಲಾಯಿತು. ಅದಕ್ಕೆ ಬೇಕಾದ ಗೊಬ್ಬರ, ನೀರು ಸೇರಿದಂತೆ ಸಕಲ ವ್ಯವಸ್ಥೆಯನ್ನೂ ಮಾಡಿದರು. ಈಗ ಮರಗಳು, ನಿಧಾನಕ್ಕೆ ಚಿಗುರುತ್ತಿವೆ. ಆ ಬಡಾವಣೆಯ ನಿವಾಸಿಗಳು, ಅವರ ಜೊತೆಗೇ ಈ ಹುಡುಗರೂ ವಲಸೆಯಾಗಿ ಬಂದ ಮರಕ್ಕೆ ನೀರುಣಿಸಿ, ಉಪಚರಿಸುತ್ತಿದ್ದಾರೆ.

Advertisement

ಆ ಮರಗಳು 10- 15 ವರ್ಷಗಳಿಂದ ಕಾಲೇಜಿನ ಆವರಣದಲ್ಲಿದ್ದವು. ಸಹಸ್ರಾರು ವಿದ್ಯಾರ್ಥಿಗಳಿಗೆ ನೆರಳು ಕೊಟ್ಟಿದ್ದವು. ಹೇಗಾದರೂ ಅವುಗಳಿಗೆ ಮರುಜೀವ ಕೊಡಬೇಕು ಎಂಬ ನಮ್ಮ ಆಶಯಕ್ಕೆ ಕಾಲೇಜಿನ ಆಡಳಿತ ಮಂಡಳಿಯೂ ನೆರವಾಯಿತು.
-ಚಿರಂಜನ್‌, ಎಂಜಿನಿಯರಿಂಗ್‌ ವಿದ್ಯಾರ್ಥಿ, ಬಿಎಂಎಸ್‌ ಕಾಲೇಜು

Advertisement

Udayavani is now on Telegram. Click here to join our channel and stay updated with the latest news.

Next