Advertisement

Mount Rushmore National Memorial: ಮೌಂಟ್‌ ರಶ್ಮೋರ್‌ನ ಸಿಕ್ಸ್‌ ಗ್ರಾಂಡ್‌ ಫಾದರ್ಸ್‌

11:02 AM May 11, 2024 | Team Udayavani |

ಪ್ರತೀಯೊಬ್ಬ ಮನುಷ್ಯನ ಮುಖವೂ ಭಿನ್ನ. ಅವಳಿಗಳ ಮುಖಗಳು ಪ್ರತಿರೂಪದಂತಿರುತ್ತವೆ ಮತ್ತು ಒಬ್ಬನ ಹಾಗೆ ಕಾಣುವ ಒಟ್ಟು ಏಳು ಜನರಿರುತ್ತಾರೆ ಎಂದು ನಮಗೆಲ್ಲ ಗೊತ್ತಿದೆ. ನಮ್ಮ ಹಾಗೆಯೇ ಕಾಣುವ ಆ ಇನ್ನು ಆರು ಜನರು ನಮ್ಮ ಜೀವಿತಾವಧಿಯಲ್ಲಿ ಕಾಣಸಿಗುವುದು ಅಸಾಧ್ಯ. “ನೀವು ಅವರ ಹಾಗೆಯೇ ಇದ್ದೀರಿ’ ಎಂದು ಯಾರಾದರೂ ಹೇಳಿದರೂ ಮುಖದಲ್ಲಿ ಏನೋ ಒಂದು ಭಿನ್ನವಾಗಿರುತ್ತದೆ.

Advertisement

ಮನುಷ್ಯನನ್ನು ಅವನ ಮುಖದಿಂದಲೇ ಸ್ಪಷ್ಟವಾಗಿ ಗುರುತಿಸಲು ಸಾಧ್ಯ. ಯಾರನ್ನೇ ನೋಡಿದರೂ ಮೊದಲು ನೋಡುವುದು ಅವರ ಮುಖವನ್ನು. ಹೀಗೆ ಕೋಟ್ಯಾಂತರ ಮುಖಗಳಿರುವ ಈ ಜಗತ್ತಿನಲ್ಲಿ ಜನಪ್ರಿಯವಾಗಿರುವ ಹಲವು ಮುಖಗಳಿವೆ. ಧರ್ಮಗುರು, ರಾಜಕೀಯ ವ್ಯಕ್ತಿ, ಲೇಖಕ, ಸಿನೆಮಾ ನಟಿ, ಗಾಯಕ, ಆಟಗಾರ ಮುಂತಾದವರು ತಮ್ಮ ಕಾರ್ಯಸಾಧನೆಯಿಂದ ಪ್ರಸಿದ್ಧಿ ಗಳಿಸಿ ವಿಶ್ವಮನ್ನಣೆ ಗಳಿಸಿರುತ್ತಾರೆ. ಅಂತಹವರ ಮುಖ ಎಲ್ಲಿಯೇ ಕಂಡರೂ ಗುರುತಿಸಬಹುದು. ಸುದ್ದಿ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಅವರು ಕಂಡಾಗ ನಿಸ್ಸಂಶಯವಾಗಿ ಇವರು ಅವರೇ ಎಂದು ಹೇಳಬಹುದು.

ವ್ಯಕ್ತಿಗೆ ವ್ಯಕ್ತಿತ್ವವನ್ನು ಒದಗಿಸುವ ಈ ಮುಖಗಳು ಬೆಟ್ಟದ ಮೇಲೆ ಮೂಡಿದರೆ ಹೇಗಿರುತ್ತದೆ? ಬೆಟ್ಟದ ಮೇಲೇ ಮುಖಗಳೇ? ಅದು ಹೇಗೆ ಸಾಧ್ಯ? ಸಾಧ್ಯವಾದರೂ ಯಾರ ಮುಖಗಳವು ಯಾಕೆ ಬೆಟ್ಟದ ಮೇಲೆ ಮೂಡಬೇಕು ಎಂದೆಲ್ಲ ಪ್ರಶ್ನೆಗಳು ಏಳುವುದು ಸಾಮಾನ್ಯ. ಇಂತಹ ಬೆಟ್ಟವೊಂದಿದೆ, ಅದರ ಮೇಲೆ ಮುಖಗಳಿವೆ ಎಂದಾಗ ನಮಗೂ ಇದೇ ಪ್ರಶ್ನೆಗಳು ಕಾಡಿದ್ದವು. ಅವುಗಳಿಗೆ ಪರಿಹಾರ ಸಿಕ್ಕಬೇಕೆಂದರೆ ನಾವು ಅಲ್ಲಿಗೆ ಹೋಗಿ ಪ್ರತ್ಯಕ್ಷವಾಗಿ ಕಂಡು ಪ್ರಮಾಣಿಸಿ ನೋಡಬೇಕಿತ್ತು.

ಸೌತ್‌ ಡಕೋಟಾ ಎಂಬ ರಾಜ್ಯದಲ್ಲಿ ಮೌಂಟ್‌ ರಶ್ಮೋರ್‌ ಎಂಬ ಬೆಟ್ಟ. ಆ ಕಲ್ಲಿನ ಬೆಟ್ಟದ ಮೇಲೆ ಕೊರೆದಿರುವ ದೊಡ್ಡ ದೊಡ್ಡ ಮುಖಗಳು. ನಾರ್ತ್‌ ಅಮೆರಿಕದಲ್ಲಿ ವಾಸಿಸುತ್ತಿದ್ದ ಪ್ಲೇನ್ಸ್‌ ಇಂಡಿಯನ್ಸ್‌ ಎಂಬ ಹೆಸರಿನಿಂದ ಗುರುತಿಸಿಕೊಳ್ಳುವ ಆದಿವಾಸಿಗಳು ಈ ಮೌಂಟ್‌ ರಶ್ಮೋರ್‌ ಪರ್ವತ ಮತ್ತು ಸುತ್ತಲಿನ ಕಪ್ಪು ಗುಡ್ಡಗಳನ್ನು (ಬ್ಲಾಕ್‌ ಹಿಲ್ಸ್‌) ಬಹಳ ಪವಿತ್ರ ಎಂದು ಪರಿಗಣಿಸುತ್ತಾರೆ. ಈ ಪ್ರದೇಶವನ್ನು ಅವರು ಪ್ರಾರ್ಥನೆಗೆ ಮತ್ತು ತಮ್ಮ ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರು. ಇವರು ತಮ್ಮ ಪೂರ್ವಿಕ ದೈವವನ್ನು ಸಿಕ್ಸ್‌ ಗ್ರಾಂಡ್‌ ಫಾದರ್ಸ್‌ ಎಂದು ಕರೆಯುತ್ತಾರೆ. ಈ ಆರು ಗ್ರಾಂಡ್‌ ಫಾದರ್ಸ್‌ ಆರು ದಿಕ್ಕುಗಳನ್ನು ಪ್ರತಿನಿಧಿಸುತ್ತಾರೆ.

Advertisement

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮೇಲೆ (ಆಕಾಶ) ಮತ್ತು ಕೆಳಗೆ (ಭೂಮಿ). ಹೀಗಾಗಿ ಮೌಂಟ್‌ ರಶ್ಮೋರ್‌ ಪರ್ವತ ಸಿಕ್ಸ್‌ ಗ್ರಾಂಡ್‌ ಫಾದರ್ಸ್‌ ಎಂದು ಸಹ ಗುರುತಿಸಿಕೊಳ್ಳುತ್ತದೆ. ಹಾಗಂತ ಈ ಬೆಟ್ಟದ ಮೇಲಿನ ಮುಖಗಳು ಮೇಲೆ ಹೇಳಿದ ಸಿಕ್ಸ್‌ ಗ್ರಾಂಡ್‌ ಫಾದರ್ಸ್‌ ಅಥವಾ ಆರು ದಿಕ್ಕುಗಳನ್ನು ಪ್ರತಿನಿಧಿಸುತ್ತವೆ ಎಂದುಕೊಂಡರೆ ತಪ್ಪು. ಅದು ಜಾಗಕ್ಕೆ ಸಂಬಂಧಿಸಿದ ಇತಿಹಾಸವಷ್ಟೇ. ಅದಕ್ಕೂ ಈ ಮುಖಗಳಿಗೂ ಸಂಬಂಧವಿಲ್ಲ. ಇದೆಲ್ಲ ಶುರುವಾಗಿದ್ದು ಡ್ವಾನ್‌ ರಾಬಿನಸನ್‌ ಎಂಬಾತನಿಂದ. ಇವನನ್ನು ಮೌಂಟ್‌ ರಶ್ಮೋರ್‌ ಪಿತಾಮಹ ಎಂದೂ ಕರೆಯುತ್ತಾರೆ.

1920ರಲ್ಲಿ ಸೌತ್‌ ಡಕೋಟಾ ಅಮೆರಿಕದ ರಾಜ್ಯವಾಗಿ ಅಧಿಕೃತವಾದಾಗ ರೋಡ್‌ ಟ್ರಿಪ್‌ ಹುಚ್ಚಿರುವ ಜನರಿಗೆ ಈ ಜಾಗ ಬಹಳ ಆಕರ್ಷಣೀಯವಾಗಿತ್ತು. ನ್ಯಾಶನಲ್‌ ಹೈವೇ 87ರ ಮೂಲಕ ಬ್ಲಾಕ್‌ ಹಿಲ್ಸ್‌ ನ್ಯಾಶನಲ್‌ ಫಾರೆಸ್ಟ್‌ ಮತ್ತು ವಿಂಡ್‌ ಕೇವ್‌ ನ್ಯಾಶನಲ್‌ ಪಾರ್ಕ್‌ಗಳನ್ನು ನೋಡಬಹುದಿತ್ತು. ಹೀಗೆ ಬಹಳಷ್ಟು ಜನ ಮೌಂಟ್‌ ರಶ್ಮೋರ್‌ನತ್ತ ಬರತೊಡಗಿದಾಗ ಸೌತ್‌ ಡಕೋಟಾ ರಾಜ್ಯದ ಹಿಸ್ಟಾರಿಕಲ್‌ ಸೊಸೈಟಿಯ ಸೆಕ್ರೆಟರಿ ಆಗಿದ್ದ ಡ್ವಾನ್‌ ರಾಬಿನಸನ್‌ನಿಗೆ ಇದನ್ನು ಪ್ರವಾಸ ತಾಣವನ್ನಾಗಿ ಮಾಡಿ ಆ ಮೂಲಕ ರಾಜ್ಯಕ್ಕೆ ಪ್ರವಾಸೋದ್ಯಮದಿಂದ ದುಡ್ಡು ದಕ್ಕಲಿ ಎಂಬ ವಿಚಾರ ಹೊಳೆಯಿತು. ಇದಕ್ಕೆ ಬೇಕಾದ ಅಧಿಕೃತ ಪರವಾನಗಿ, ಸರಕಾರದಿಂದ ಹಣ ಬಿಡುಗಡೆ ಇತ್ಯಾದಿಗಳೆಲ್ಲ ಮುಗಿದ ಮೇಲೆ ಡ್ವಾನ್‌ ರಾಬಿನಸನ್‌, ಬೋರ್ಗ್ಲಮ್‌ ಎಂಬ ಶಿಲ್ಪಿಯನ್ನು ಸಂಪರ್ಕಿಸಿ ತನ್ನ ತಲೆಯಲ್ಲಿದ್ದ ಯೋಜನೆಯನ್ನು ವಿವರಿಸಿದ. ಡ್ವಾನ್‌ ರಾಬಿನಸನ್‌ ತಲೆಯಲ್ಲಿದ್ದದ್ದು ಬೇರೆ ಮುಖಗಳು. ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ಅಮೆರಿಕ ದೇಶದ ಅಭಿವೃದ್ಧಿಗಾಗಿ ತಮ್ಮ ಕೈಲಾದ ಸಹಾಯ ಮಾಡಿದವರು. ಆದರೆ ಬೋರ್ಗ್ಲಮ್‌ ಆ ಯೋಜನೆಯನ್ನು ತಿರಸ್ಕರಿಸಿ ಅದರ ಬದಲಾಗಿ ಅಮೆರಿಕದ ಅಧ್ಯಕ್ಷರ ಮುಖಗಳನ್ನು ಕೆತ್ತುವುದಾಗಿ ಸೂಚಿಸಿದ.

ಮೌಂಟ್‌ ರಶ್ಮೋರ್‌ ಅನ್ನು ಪೂಜ್ಯನೀಯ ತಾಣವನ್ನಾಗಿ ನೋಡುತ್ತಿದ್ದ ಪ್ಲೇನ್ಸ್‌ ಇಂಡಿಯನ್ಸ್‌ ನಿಂದ ವಿರೋಧ ಬಂತು. ಜತೆಗೆ ಅನೇಕ್‌ ಬಿಲ್‌ಗ‌ಳಲ್ಲಿ ಇದರ ಪ್ರಸ್ತಾವವಾದರೂ ಸೂಕ್ತ ಫಂಡಿಂಗ್‌ ಒದಗಲಿಲ್ಲ. ಆದರೆ ತನ್ನ ಛಲ ಬಿಡದ ಡ್ವಾನ್‌ ರಾಬಿನಸನ್‌ ಸತತ ಪ್ರಯತ್ನದಿಂದಾಗಿ 1927ರಲ್ಲಿ ಬೆಟ್ಟದ ಮೇಲೆ ಮುಖಗಳನ್ನು ಕೆತ್ತುವ ಈ ಕಾರ್ಯ ಶುರುವಾಗಿ ಅಮೆರಿಕದ ಅಧ್ಯಕ್ಷರಲ್ಲಿ ಪ್ರಮುಖರಾದ ಜಾರ್ಜ್‌ ವಾಷಿಂಗ್ಟನ್‌, ಥಾಮಸ್‌ ಜೆಫ‌ರಸನ್‌, ಅಬ್ರಹಾಂ ಲಿಂಕನ್‌ ಮತ್ತು ಥೀಯೋಡೋರ್‌ ರೂಸವೆಲ್ಸ್‌ ಮುಖಗಳನ್ನು ಬೋರ್ಗ್ಲಮ್‌ ಮೌಂಟ್‌ ರಶ್ಮೋರ್‌ ಮೇಲೆ ಕೆತ್ತಿದ. ಈ ಕೆಲಸ ಮುಗಿದಾಗ 1941! ಅಲ್ಲಿ ಸುತ್ತುವರೆದಿರುವ ಹಲವಾರು ಬೆಟ್ಟಗಳಲ್ಲಿ ಬೋರ್ಗ್ಲಮ್‌ ಆಯ್ದುಕೊಂಡಿದ್ದು ಸಿಕ್ಸ್‌ ಗ್ರಾಂಡಫಾದರ್ಸ್‌ ಬೆಟ್ಟ. ನಾನ್ನೂರು ಜನ ಈ ಕೆತ್ತನೆಯ ಕಾರ್ಯದಲ್ಲಿ ಭಾಗಿಯಾಗಿದ್ದರಂತೆ.

ಅದಾದ ಮೇಲೆ ಈ ಜಾಗದಲ್ಲಿ ಬಹಳಷ್ಟು ಅಭಿವೃದ್ಧಿಗಳಾಗಿವೆ. ಜತೆಗೆ ಬೆಟ್ಟದ ಮೇಲೆ ಅಳಿದುಳಿದ ಜಾಗದಲ್ಲಿ ಇನ್ನು ಒಂದಿಷ್ಟು ಮುಖಗಳನ್ನು ಕೆತ್ತಬಹುದಲ್ಲ ಎಂಬ ಪ್ರಸ್ತಾವಗಳು ಬಂದಿವೆ. ಅದರಲ್ಲಿ ಮುಖ್ಯವಾಗಿ ಕೇಳಿ ಬರುವ ಹೆಸರು ಅಮೆರಿಕದ ಅಧ್ಯಕ್ಷರಾದ ಜಾನ್‌ ಎಫ್.ಕೆನಡಿ. 1963ರಲ್ಲಿ ನಡೆದ ಕೆನಡಿಯ ಹತ್ಯೆಯ ಅನಂತರ ಬಹಳಷ್ಟು ಜನ ಆತನೂ ಮೌಂಟ್‌ ರಶ್ಮೋರ್‌ ಬೆಟ್ಟದ ಮೇಲೆ ಮೂಡುವ ಸಾಮರ್ಥ್ಯ ಹೊಂದಿದ್ದಾನೆ ಎಂದು ಅಭಿಪ್ರಾಯಪಟ್ಟರು. ಆದರೆ ಬೆಟ್ಟದ ಸಾಮರ್ಥ್ಯ ಅಷ್ಟು ಶಕ್ತವಿಲ್ಲವಾದುದರಿಂದ ಆ ಪ್ರಸ್ತಾವ ಕೈಗೂಡಲಿಲ್ಲ. ಪತ್ರಕರ್ತರೊಬ್ಬರು ಬರಾಕ್‌ ಓಬಾಮನನ್ನು “ನಿನ್ನ ಮುಖ ಮೌಂಟ್‌ ರಶ್ಮೋರ್‌ ಮೇಲೆ ಮೂಡಲಿ ಎಂಬ ಆಸೆಯಿದೆಯೇ’ ಎಂದು ಕೇಳಿದರಂತೆ. ಅದಕ್ಕೆ ಓಬಾಮಾ “ಅದಾಗಲು ಸಾಧ್ಯವೇ ಇಲ್ಲ ಯಾಕೆಂದರೆ ನನ್ನ ಕಿವಿಗಳು ಬಹಳ ದೊಡ್ಡದಿವೆ’ ಎಂದು ತಮಾಷೆ ಮಾಡಿದ್ದರಂತೆ.

ತಮ್ಮ ಮುಖಗಳು ಮುಂದೊಂದು ದಿನ ಬೆಟ್ಟದ ಮೇಲೆ ಮೂಡಬಹುದು, ಅದನ್ನು ನೋಡಲು ಲಕ್ಷಾಂತರ ಜನ ಬರಬಹುದು ಎಂದು ಈ ನಾಲ್ವರು ಅಧ್ಯಕ್ಷರು ಸಹ ಊಹಿಸಿರಲಿಲ್ಲವೇನೋ. ಯಾರಿಗೆ ಗೊತ್ತಿತ್ತು ಡ್ವಾನ್‌ ರಾಬಿನಸನ್‌ಗೆ ಹೀಗೊಂದು ಯೋಜನೆ ಹೊಳೆಯುತ್ತದೆ ಮತ್ತು ಅದನ್ನು ಸಾಕಾರಗೊಳಿಸಲು ಶಿಲ್ಪಿ ಬೋರ್ಗ್ಲಮ್‌ ನೆರವಾಗುತ್ತಾನೆ ಎಂದು. ಹೀಗೆ ಒಂದು ಜಾಗವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಮತ್ತು ಅದರಿಂದ ರಾಜ್ಯದ ಬೊಕ್ಕಸವನ್ನು ತುಂಬಿಸಿಕೊಳ್ಳುವ ಯೋಜನೆ ಇಲ್ಲಿನ ಹಲವು ರಾಜಕೀಯ ಅಧಿಕಾರಿಗಳಿಗೆ ಬಂದು ಅವರ ಕಾರಣದಿಂದಾಗಿ ಹಲವಾರು ಸ್ಮಾರಕಗಳು, ನೋಡಬಹುದಾದ ತಾಣಗಳು ಹುಟ್ಟಿಕೊಂಡಿವೆ. ಈ ಜಾಗದಲ್ಲಿ ನೋಡಲು ಹೆಚ್ಚೇನೂ ಇಲ್ಲ. ದೂರದಿಂದ, ಹತ್ತಿರದಿಂದ ಮತ್ತು ತೀರಾ ಬೆಟ್ಟದ ಹತ್ತಿರಕ್ಕೆ ತಲುಪುವ ಟ್ರೈಲ್‌ ಮಾರ್ಗಗಳಿಂದ ಮುಖಗಳನ್ನು ವೀಕ್ಷಿಸಬಹುದು. ಮೌಂಟ್‌ ರಶ್ಮೋರ್‌ ಬೆಟ್ಟ ಗ್ರಾನೈಟ್‌ ನಿಂದ ಕೂಡಿದೆಯಾದ್ದರಿಂದ ಹತ್ತು ಸಾವಿರ ವರ್ಷಕ್ಕೆ ಒಂದು ಇಂಚಿನಷ್ಟು ಸವೆಯುತ್ತದೆ ಎಂದು ಮಾಹಿತಿಗಳು ಹೇಳುತ್ತವೆ. ಇದರ ಆಧಾರದ ಮೇಲೆ ಸುಮಾರು ಎರಡೂವರೆ ಮಿಲಿಯನ್‌ ವರ್ಷಗಳ ಅಂತರ ಈ ಬೆಟ್ಟದ ಮೇಲಿನ ಮುಖಗಳು ಸಂಪೂರ್ಣವಾಗಿ ಅಳಿದು ಹೋಗಬಹುದು.

*ಸಂಜೋತಾ ಪುರೋಹಿತ್‌

Advertisement

Udayavani is now on Telegram. Click here to join our channel and stay updated with the latest news.

Next