Advertisement

ಸೈಕಲ್‌ ವಿತರಣೆ ರದ್ದು ಮಾಡುವುದಿಲ್ಲ

09:03 AM Dec 19, 2018 | |

ವಿಧಾನಸಭೆ: ಸರ್ಕಾರಿ ಪ್ರೌಢಶಾಲೆಗಳಿಗೆ ಸೈಕಲ್‌ ವಿತರಣೆಯನ್ನು ನಿಲ್ಲಿಸಿಲ್ಲ ಮತ್ತು ನಿಲ್ಲಿಸುವುದೂ ಇಲ್ಲ. ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದ್ದ ಸೈಕಲ್‌ಗ‌ಳ ಗುಣಮಟ್ಟ ಕಳಪೆಯಾಗಿದೆ ಎಂದು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ತಿಳಿದು ಬಂದಿದ್ದರಿಂದ ತನಿಖೆಗೆ ಆದೇಶಿಸಲಾಗಿದೆ. ತನಿಖೆ ಬಳಿಕ ಸೈಕಲ್‌ಗ‌ಳನ್ನು ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.
ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. 

Advertisement

ಪ್ರಶ್ನೋತ್ತರ ವೇಳೆಯಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆದ ಬಿಜೆಪಿಯ ಬಿ.ಶ್ರೀರಾಮುಲು, ಸರ್ಕಾರಿ ಶಾಲೆಯಲ್ಲಿ ಸೌಲಭ್ಯದ ಕೊರತೆ ಇದೆ. ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಗಡಿಭಾಗದ ಜಿಲ್ಲೆಗಳಲ್ಲಿ ಶಾಲಾ ಶಿಕ್ಷಣ ವಂಚಿತ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹತ್ತಾರು ಹಳ್ಳಿಗಳಲ್ಲಿ ಶಾಲೆಯೇ ಇಲ್ಲ. ಗಡಿಭಾಗದ ಜಿಲ್ಲೆಗಳ ಸರ್ಕಾರಿ ಶಾಲೆಗಳು ದು:ಸ್ಥಿತಿ ಯಲ್ಲಿದ್ದು, ಮಕ್ಕಳು ಬರುತ್ತಿಲ್ಲ ಎಂದು ವಿಷಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಸೈಕಲ್‌ ನೀಡುವುದು ಸರಿಯಲ್ಲ ಎಂಬ ಉದ್ದೇಶದಿಂದ ತನಿಖೆಗೆ ಆದೇಶಿಸಲಾಗಿದೆ. ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸಲಾಗುವುದು ಎಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದು ಗಮನಕ್ಕೆ ಬಂದಿದ್ದು, ಇದಕ್ಕಾಗಿ 1,200 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದೇವೆ. ಪ್ರಸಕ್ತ ಸಾಲಿನಿಂದ ಸಾವಿರ ಶಾಲೆಗಳಲ್ಲಿ ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಬೋಧನೆ ಮಾಡಲು ಆರಂಭಿಸಿದ್ದೇವೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡು, ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ಬಜೆಟ್‌ನಲ್ಲಿ
ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಗಡಿಭಾಗದ ಜಿಲ್ಲೆಗಳಾದ ಬಳ್ಳಾರಿ, ಕಲಬುರಗಿ, ರಾಯಚೂರು, ಬೀದರ್‌, ವಿಜಯಪುರ, ಬೆಳಗಾವಿ ಮೊದಲಾದ ಜಿಲ್ಲೆಗಳ ಸರ್ಕಾರಿ ಶಾಲೆಗಳ ಉನ್ನತೀಕರಣ ಹಾಗೂ ಶಿಕ್ಷಕರ ಕೊರತೆ ನೀಗಿಸಲು ಮುಂದಿನ ಬಜೆಟ್‌
ನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಶಿಕ್ಷಕರಿಂದ ತಪ್ಪು ಮಾಹಿತಿ: ಸರ್ಕಾರಿ ಶಾಲಾ ಶಿಕ್ಷಕರು ವರ್ಗಾವಣೆ ಪಡೆದ ಶಾಲೆಯಲ್ಲೇ ಉಳಿದುಕೊಳ್ಳುವುದಕ್ಕಾಗಿ ಮಕ್ಕಳ ಸಂಖ್ಯೆ ಕಡಿಮೆಯಿದ್ದರೂ ತಪ್ಪು ಮಾಹಿತಿ ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳ ಬಾಲ್ಯ ಕಸಿಯುವ ಹಕ್ಕು ಯಾರಿಗೂ ಇಲ್ಲ. ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಕ್ಕಾಗಿ ಅಗತ್ಯ ಅನುದಾನ ನೀಡಬೇಕೆಂಬ ಉದ್ದೇಶದಿಂದ ಈಗಾಗಲೇ 1,200 ಕೋಟಿ ರೂ.ಬಿಡುಗಡೆ ಮಾಡಿದ್ದೇವೆ. ಮೈತ್ರಿ ಸರ್ಕಾರದಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡಿರುವುದರಿಂದ ಮುಂದಿನ ಬಜೆಟ್‌ನಲ್ಲಿ ಸರ್ಕಾರಿ ಶಾಲೆಗಳ ನ್ಯೂನತೆ ಸರಿಪಡಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಜತೆಗೆ, ಸರ್ಕಾರಿ ಶಾಲೆಗೆ ಜೀವ
ತುಂಬಲಿದ್ದೇವೆ. ಶಿಕ್ಷಕರನ್ನು ನೇಮಿಸುವುದರ ಜೊತೆಗೆ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಸದೃಢತೆಗೂ ಬೇಕಾದ ಕಾರ್ಯಕ್ರಮ ರೂಪಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದರು.

ಬಿಜೆಪಿಯ ಸಿ.ಎಂ.ಉದಾಸಿ ಮಾತನಾಡಿ, ಸರ್ಕಾರಿ ಶಾಲೆಗಳು ಶಿಥಿಲಗೊಂಡಿರುವ ಕಡೆ ಈವರೆಗೂ ಕಟ್ಟಡ ನಿರ್ಮಿಸಿಲ್ಲ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಿ.ಟಿ.ರವಿ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ
ಯಾವಾಗ ನೀಡುತ್ತೀರಿ ಎಂದು ಪ್ರಶ್ನಿಸಿದರು. 

Advertisement

ಸ್ಪೀಕರ್‌ ರಮೇಶ್‌ ಕುಮಾರ್‌ ಮಧ್ಯಪ್ರವೇಶಿಸಿ , ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿಗಳ ಮಕ್ಕಳು ಸರ್ಕಾರಿ ಶಾಲೆಗೆ ಹೋಗುತ್ತಿದ್ದಾರೆಯೇ?. ನಾವೆಲ್ಲರೂ ದತ್ತು ಪುತ್ರರು. ನಾವ್ಯಾರೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿಲ್ಲ. ಬರೀ ಭಾಷಣ ಮಾಡುತ್ತಿದ್ದೇವೆ. ನಾವೆಲ್ಲ ರೂ ಹೈ-ಫೈ ಸೌಲಭ್ಯದಲ್ಲಿದ್ದೇವೆ. ಆತ್ಮವಂಚನೆಗೂ ಮಿತಿ ಇರಬೇಕು ಎಂದು ಚರ್ಚೆಗೆ ತೆರೆ ಎಳೆದರು

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಒಂದರಿಂದ ಐದನೇ ತರಗತಿಗೆ ಒಂದೇ ಮಗು ಇದೆ. ಹೆಸರು ನಂದಿತಾ. ಆ ಮಗು ಕೂಡ ಆ ಶಾಲೆಯ ವಿದ್ಯಾರ್ಥಿ ಅಲ್ಲ. ಪಕ್ಕದ ಶಾಲೆಯಿಂದ ದತ್ತು ತಂದಿರುವ ಮಗು. ಶಾಲೆಗಳಲ್ಲಿ
ಮಕ್ಕಳನ್ನು ಈ ರೀತಿ ನೋಡಿಕೊಳ್ಳುವುದು ಸರಿಯಲ್ಲ. ಸರ್ಕಾರ ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ನಂದಿತಾ
ರಾಜ್ಯಕ್ಕೆ ಮಾದರಿಯಾಗಬೇಕು. 

●ಸುರೇಶ್‌ ಕುಮಾರ್‌, ಶಾಸಕ

ಖಾಸಗಿ ಶಾಲೆಗಳು ಉತ್ತಮ ಮೂಲ ಸೌಕರ್ಯ, ಸಾರಿಗೆ ವ್ಯವಸ್ಥೆ ಮತ್ತು ಗುಣಮಟ್ಟದ ಶಿಕ್ಷಕರ ಮೂಲಕ ಮಕ್ಕಳನ್ನು ಆಕರ್ಷಿಸುತ್ತಿವೆ. ಸರ್ಕಾರಿ ಶಾಲೆಗಳಲ್ಲೂ ಇಂತಹ ಮೂಲಸೌಕರ್ಯ ಒದಗಿಸ ಬೇಕು. ಶಾಲಾ ಬಸ್‌ ವ್ಯವಸ್ಥೆ ಮಾಡಬೇಕು. ಬಂಟ್ವಾಳದ ದಡ್ಡಲಕಾಡು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ 30ರಿಂದ 600ಕ್ಕೆ ಏರಿಕೆಯಾಗಿದೆ. ಅಲ್ಲಿಗ 10 ಬಸ್‌ಗಳಿವೆ. ಇದೇ ಮಾದರಿಯಲ್ಲಿ ಸರ್ಕಾರಿ
ಶಾಲೆ ಅಭಿವೃದ್ಧಿಯಾಗಬೇಕು.

●ಹರೀಶ್‌ ಪೂಂಜಾ, ಬಿಜೆಪಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next