Advertisement

ಮಗನ ನಿರೀಕ್ಷೆಯಲ್ಲಿ ತಾಯಿ

03:35 PM Apr 03, 2022 | Team Udayavani |

ಓರ್ವ ಮಗ, ಮನ ಮೆಚ್ಚಿದ ಪತಿ ಇವಿಷ್ಟೇ ಗಾಯತ್ರಿಯ ಬದುಕು. ಸುಂದರವಾಗಿದ್ದ ಇವರ ಸಂಸಾರದಲ್ಲಿ ಅದೊಂದು ದಿನ ಬಿರುಗಾಳಿ ಎದ್ದಿತ್ತು. ಯಾರ ದೃಷ್ಟಿ ತಾಕೀತೋ ಏನೋ ಒಂದು ದಿನ ಕೆಲಸಕ್ಕೆ ಹೋಗಿದ್ದ ಗಾಯತ್ರಿಯ ಪತಿ ಶ್ಯಾಮ ಅಪಘಾತದಲ್ಲಿ ಸಾವನ್ನಪ್ಪುತ್ತಾನೆ. ಮಗ ಗಿರೀಶನ ಸಂಪೂರ್ಣ ಜವಾಬ್ದಾರಿ ಗಾಯತ್ರಿಯ ಮೇಲೆ ಬೀಳುತ್ತದೆ. ಶ್ಯಾಮನ ಮನದಿಚ್ಛೆಯಂತೆ ಗಿರೀಶನಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ಹಗಲು ರಾತ್ರಿ ಎನ್ನದೆ ದುಡಿಯಲು ಪ್ರಾರಂಭಿಸುತ್ತಾಳೆ. ತಾಯಿಯ ಪರಿಶ್ರಮವನ್ನು ಕಣ್ಣಾರೆ ಕಂಡ ಮಗ ಗಿರೀಶ ಚೆನ್ನಾಗಿ ಓದಿ ಕಾಲೇಜಿನಲ್ಲಿ ಒಳ್ಳೆಯ ಅಂಕ ಗಳಿಸಿ ತೇರ್ಗಡೆಯಾಗುತ್ತಾನೆ. ಉದ್ಯೋಗ ನಿಮಿತ್ತ ದೂರದ ದೇಶಕ್ಕೆ ಹೊರಟು ನಿಲ್ಲುತ್ತಾನೆ.

Advertisement

ಆಗ ತಾಯಿ ಬಳಿಗೆ ಬಂದ ಮಗ, ಅಮ್ಮಾ ನಾನು ವಿದೇಶಕ್ಕೆ ಹೊರಟಿದ್ದೇನೆ. ನೀನು ಇಲ್ಲಿ ಒಬ್ಬಳೇ ಹೇಗೆ ಇರುತ್ತೀಯಾ? ನಮಗೆ ಸಂಬಂಧಿಕರು ಯಾರೂ ಇಲ್ಲ, ಇದ್ದವರೂ ಜತೆ ಸೇರಿಸುವುದಿಲ್ಲ. ನಾನು ಉದ್ಯೋಗದಲ್ಲಿ ಸೆಟ್ಲ ಆಗುವವರೆಗೆ ನಿನ್ನನ್ನು ನನ್ನಲ್ಲಿಗೆ ಕರೆಸಿಕೊಳ್ಳಲೂ ಸಾಧ್ಯವಿಲ್ಲ. ಹೀಗಾಗಿ ಸ್ವಲ್ಪ ಕಾಲ ಓಲ್ಡ್‌ ಏಜ್‌ ಹೋಮ್‌ನಲ್ಲಿ ಇರುತ್ತೀಯಾ? ಎನ್ನುತ್ತಾನೆ. ಓಲ್ಡ್‌ ಏಜ್‌ ಹೋಮ್‌ ಅಂದರೇನು? ಅಲ್ಲಿ ಯಾರು ಇರುತ್ತಾರೆ? ಅಲ್ಲಿನ ಬದುಕು ಹೇಗೆ? ಎನ್ನುವುದನ್ನೂ ಅರಿಯದ ಗಾಯತ್ರಿಗೆ ಮಗನ ಮಾತನ್ನು ತಿರಸ್ಕರಿಸಲಾಗಲಿಲ್ಲ. ಅವಳ ಮೌನವನ್ನೇ ಸಮ್ಮತಿ ಎಂದರಿತ ಗಿರೀಶ್‌, ಅಮ್ಮಾ ನಿನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಲು ಎಲ್ಲ ತಯಾರಿ ಮಾಡಿದ್ದೇನೆ. ಏನೂ ಯೋಚನೆ ಮಾಡಬೇಡ. ಅಲ್ಲಿ ನಿನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹೊತ್ತುಹೊತ್ತಿಗೆ ಊಟ, ಚೆನ್ನಾಗಿ ನಿದ್ರೆ ಮಾಡಬಹುದು ಎನ್ನುತ್ತಾನೆ.

ಗಾಯತ್ರಿ ಒಂದೂ ಮಾತನಾಡದೆ ಮಗನ ಹಿಂದೆ ತನ್ನ ಕೊಂಚ ಸಾಮಗ್ರಿಗಳನ್ನು ಚೀಲದಲ್ಲಿ ತುಂಬಿಕೊಂಡು ಹೊರಡುತ್ತಾಳೆ. ವೃದ್ಧಾಶ್ರಮದಲ್ಲಿ ತಾಯಿಗಾಗಿ ಎಲ್ಲ ವ್ಯವಸ್ಥೆ ಮಾಡಿದ ಬಳಿಕ ಹೊರಟ ಮಗನನ್ನು ನೋಡಿ ತಾಯಿಯ ಕಣ್ಣಂಚು ಒದ್ದೆಯಾದರೂ ಮಗ ಏನೋ ಸಾಧಿಸಲು ಹೊರಟಿದ್ದಾನೆ ಎನ್ನುವ ನಂಬಿಕೆ ಮತ್ತೆ ತನ್ನ ಬಳಿಗೆ ಆತ ಮರಳಿ ಬರುತ್ತಾನೆ ಎನ್ನುವ ವಿಶ್ವಾಸದಲ್ಲಿ ಆಕೆ ಮಗನನ್ನು ಬೀಳ್ಕೊಡುತ್ತಾಳೆ. ಹೊತ್ತುಹೊತ್ತಿಗೂ ಊಟ ಮಾಡು, ನನ್ನ ಬಗ್ಗೆ ಚಿಂತಿಸಬೇಡ

ಎಂದು ಬಾಯಿ ಮಾತಲ್ಲಿ ಹೇಳುತ್ತ ಮಗನನ್ನು ಕಳುಹಿಸಿದಾಗಲೂ ಆಕೆ ತನ್ನ ಹೃದಯದಲ್ಲಡಗಿದ ದುಗುಡವನ್ನು ಹಂಚಿಕೊಳ್ಳಲಿಲ್ಲ. ಅವಳಿಗೆ ಮಗನ ಭವಿಷ್ಯದ ಚಿಂತೆಯ ಎದುರು ತಾನು ಎದುರಿಸಲಿರುವ ಕಷ್ಟ, ನೋವುಗಳು ದೊಡ್ಡದಾಗಿ ಕಾಣಿಸಲಿಲ್ಲ.

ತಾಯಿಯನ್ನು ಆಶ್ರಮಕ್ಕೆ ಬಿಟ್ಟ ಗಿರೀಶ, ತನ್ನ ಮನೆಯನ್ನೊಮ್ಮೆ ದಿಟ್ಟಿಸಿ ನೋಡಿ ವಿದೇಶಕ್ಕೆ ಹೊರಟೇ ಬಿಟ್ಟ. ಅಲ್ಲಿ ಅವನನ್ನು ಬೀಳ್ಕೊಡುವವರು ಯಾರೂ ಇರಲಿಲ್ಲವಾದರೂ ತಾಯಿಯನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಿದೆ ಎನ್ನುವ ದುರಭಿಮಾನದ ಜತೆಗೆ ಆಕೆಯ ನೆನಪು, ಪ್ರೀತಿಯ ಉಡುಗೊರೆಗಳು ಜತೆಯಲ್ಲಿತ್ತು. ಹೀಗಾಗಿ ಅವನಿಗೆ ತಾನು ಒಂಟಿ ಎಂದೆನಿಸಲಿಲ್ಲ.

Advertisement

ಇತ್ತ ವೃದ್ಧಾಶ್ರಮದಲ್ಲಿದ್ದ ಗಾಯತ್ರಿ ಮಾತ್ರ ಮಗ ಹೊರಟನೇನೋ ಎನ್ನುವ ಚಿಂತೆಯಲ್ಲಿ ಕಿಟಕಿಯಂಚಿನಲ್ಲಿ ಕುಳಿತು ಅಗಸದಲ್ಲಿ ಸಾಗುವ ವಿಮಾನಗಳನ್ನು ನೋಡುತ್ತ ಅದರಲ್ಲಿ ತನ್ನ ಮಗ ಹೋಗಿರಬಹುದು ಎಂದು ಪಕ್ಕದಲ್ಲಿದ್ದ ಮಹಿಳೆಗೆ ಹೇಳುತ್ತಿದ್ದಳು.

ಗಾಯತ್ರಿಗೆ ಆಶ್ರಮದಲ್ಲಿ ಒಂದೆರಡು ದಿನ ಹೇಗೋ ಕಳೆಯಿತು. ಮೂರನೇ ದಿನ ಮಗನ ನೆನಪುಗಳು ಕಾಡಲಾರಂಭಿಸಿತು. ವಿದೇಶಕ್ಕೆ ಹಾರಿದ ಮಗ ಕೆಲಸಕ್ಕೆ ಸೇರಿದ, ಒಳ್ಳೆಯ ಮನೆ, ಓಡಾಡಲು ಕಾರು ಸಿಕ್ಕಿತು. ಕೆಲವರು ಸ್ನೇಹಿತರಾದರು. ಕೆಲಸದ ಒತ್ತಡವೂ ಹೆಚ್ಚಿತು. ದಿನಕ್ಕೊಮ್ಮೆ ತಾಯಿಗೆ ಫೋನ್‌ ಮಾಡುತ್ತಿದ್ದವನು ಈಗ ವಾರಕ್ಕೊಮ್ಮೆ ಮಾಡಲಾರಂಭಿಸಿದ್ದಾನೆ. ಇತ್ತೀಚೆಗಂತೂ ತಿಂಗಳಿಗೊಮ್ಮೆ ತಾಯಿಗೆ ಕರೆ ಮಾಡುವುದು ಅಪರೂಪವಾಯಿತು. ಹೀಗೆ ತಿಂಗಳುಗಳು ಉರುಳಿದವು, ವರ್ಷಗಳೇ ಕಳೆದವು. ಮಗ ಮರಳಿ ಬರಲಿಲ್ಲ. ತಾಯಿಯ ವೃದ್ಧಾಶ್ರಮದ ಜೀವನ ಕೊನೆಯಾಗಲಿಲ್ಲ.

ಅದೊಂದು ದಿನ ವೃದ್ಧಾಶ್ರಮದಿಂದ ಗಿರೀಶನಿಗೆ ಕರೆ ಬಂತು. ನಿಮ್ಮ ತಾಯಿಯ ಆರೋಗ್ಯ ಸರಿ ಇಲ್ಲ. ಚಿಂತಾಜನಕವಾಗಿದೆ. ಆಸ್ಪತ್ರೆಯಲ್ಲಿದ್ದಾರೆ. ನಿಮ್ಮನ್ನು ಕಾಣಲು ಹಂಬಲಿಸುತ್ತಿದ್ದಾರೆ ಎಂದರು. ಆಗ ಗಿರೀಶ, ಅಯ್ಯೋ ಏನಾಯಿತು. ಚೆನ್ನಾಗಿದ್ದಾರೆಯೇ? ಎಷ್ಟು ಖರ್ಚಾದ್ರೂ ಚಿಂತೆಯಿಲ್ಲ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ಈ ವಾರಾಂತ್ಯಕ್ಕೆ ವಿಮಾನದ ಟಿಕೆಟ್‌ ಕಾಯ್ದಿರಿಸುತ್ತೇನೆ. ವಾರದೊಳಗೆ ಅಲ್ಲಿಗೆ ತಲುಪುತ್ತೇನೆ ಎಂದು ಹೇಳಿದಾಗ, ಅತ್ತ ಕಡೆಯಿಂದ ವೈದ್ಯರು ಫೋನ್‌ ಸ್ವೀಕರಿಸಿ, ನಿಮ್ಮ ತಾಯಿಯ ದೇಹ ಸ್ಥಿತಿ ಸರಿಯಿಲ್ಲ. ಕೂಡಲೇ ಬಂದರೆ ಅನುಕೂಲ ಎನ್ನುತ್ತಾರೆ. ಆಗ ಮಗ, ಸರಿ ಪ್ರಯತ್ನಿಸುತ್ತೇನೆ ಎಂದು ಹೇಳಿ ಕರೆ ಕಟ್‌ ಮಾಡುತ್ತಾನೆ. ಎರಡು ದಿನಗಳ ಬಳಿಕ ಆಸ್ಪತ್ರೆಗೆ ದೌಡಾಯಿಸಿದ ಮಗ, ತಾಯಿ ಮಲಗಿದ್ದ ವಾರ್ಡ್‌ಗೆ ಹೋಗಿ, ಆಕೆಯನ್ನು ಕಂಡು ಹೇಗಿದ್ದಿಯಮ್ಮಾ, ಎಷ್ಟು ದಿನ ಆಯ್ತು ನಿನ್ನ ನೋಡಿ ಎಂದು ಹೇಳಿ ಆಕೆಯ ಕೈಗಳನ್ನು ಸ್ಪರ್ಶಿಸಿದಾಗ ಆಕೆಯ ಜೀವ ನಾಡಿಗಳೇ ಕಂಪಿಸಲು ಆರಂಭವಾಯಿತು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದವಳಿಗೆ ಜೀವ ಬಂದಂತಾಯಿತು. ನಿಧಾನವಾಗಿ ಕಣ್ಣು ಬಿಟ್ಟು ಮಗನನ್ನು ನೋಡಿದಾಗ ಆಕೆಯಲ್ಲಿ ಸಂತೃಪ್ತ ಭಾವ ಹರಿದು ಒಂದು ರೀತಿಯಲ್ಲಿ ಪರಮಾನಂದದ ಅನುಭೂತಿಯಾಗುತ್ತದೆ.

ಆದರೆ ಇದ್ಯಾವುದನ್ನೂ ಲೆಕ್ಕಿಸದ ಮಗ ಅಮ್ಮಾ, ನಿನಗೆ ಏನು ಬೇಕು? ಎಂದಾಗ ಆಕೆ ಆಶ್ರಮದಲ್ಲಿ ಫ್ಯಾನ್‌ ಸರಿಯಿಲ್ಲ, ಒಂದು ಫ್ರಿಡ್ಜ್ ಬೇಕು, ಹಾಸಿಗೆ, ಮಂಚಗಳ ರಿಪೇರಿ ಮಾಡಬೇಕು ಇದಕ್ಕೆಲ್ಲ ಸ್ವಲ್ಪ ಹಣದ ಸಹಾಯ ಮಾಡು ಎನ್ನುತ್ತಾಳೆ. ಆಗ ಮಗ, ನೀನು ಆಶ್ರಮದಲ್ಲಿಲ್ಲ. ಆಸ್ಪತ್ರೆಯಲ್ಲಿದ್ದಿಯ. ಆಶ್ರಮದ ಚಿಂತೆ ನಿನಗೇಕೆ ಎನ್ನುತ್ತಾನೆ. ಇಲ್ಲಿಂದ ನೀನು ನೇರ ಮನೆಗೆ ಹೋಗು. ಅಲ್ಲಿ ನಾನು ನಿನ್ನ ನೋಡಿಕೊಳ್ಳಲು ಯಾರನ್ನಾದ್ದಾರೂ ನೇಮಕ ಮಾಡುತ್ತೇನೆ ಎನ್ನುತ್ತಾನೆ.

ಆಗ ಗಾಯತ್ರಿ ನಡುಗುವ ಧ್ವನಿಯಲ್ಲಿ, ಮಗಾ ಇದೆಲ್ಲ ಏನೂ ಬೇಡ. ಇಂದು ನಾನು ಆಶ್ರಮದಲ್ಲಿದ್ದೇನೆ. ಅಲ್ಲಿಯ ಸಮಸ್ಯೆಗಳ ಬಗ್ಗೆ ತಿಳಿದಿದ್ದೇನೆ. ನಾಳೆ ನಿನಗೂ ಆಶ್ರಮ ಸೇರಬೇಕಾದ ಸಂದರ್ಭ ಬಂದರೆ ನಾನು ಅಲ್ಲಿ ಅನುಭವಿಸಿದ ಕಷ್ಟಗಳು ನಿನಗೆ ಎದುರಾಗಬಾರದಲ್ಲವೇ ಎಂದು ಹೇಳಿದೆ ಎನ್ನುತ್ತಾಳೆ. ಈಗ ಗಿರೀಶನ ಬಾಯಿಯಿಂದ ಈಗ ಮಾತುಗಳೇ ಹೊರಡಲಿಲ್ಲ.

ಸಾಯುವ ಸ್ಥಿತಿಯಲ್ಲಿದ್ದರೂ ತಾಯಿ ತನ್ನ ಬಗ್ಗೆ ಯೋಚಿಸಿದ್ದನ್ನು ನೋಡಿ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಆದರೆ ಕಾಲ ಮಾತ್ರ ಕೈ ಮೀರಿ ಹೋಗಿರುತ್ತದೆ. ಆಸ್ಪತ್ರೆಯಿಂದ ಮರಳಿ ಮನೆಗೆ ಗಾಯತ್ರಿಯನ್ನು ಕರೆದುಕೊಂಡು ಗಿರೀಶ ಬಂದರೂ ಆಕೆ ಕೆಲವೇ ದಿನಗಳಲ್ಲಿ ಇಹಲೋಕ ತ್ಯಜಿಸುತ್ತಾಳೆ.

ಆಶ್ರಮದಲ್ಲಿ ಗಾಯತ್ರಿ ತಾಯಿ ಅನುಭವಿಸಿದ ನೋವಿನ ದಿನಗಳ ಕುರಿತು ಗಿರೀಶನಿಗೆ ರೀಟಾ ಹೇಳಿದಾಗ ಅವನ ಮನಸ್ಸು ದುಃಖ ದಿಂದ ತುಂಬಿಹೋಗುತ್ತದೆ. ಆದರೆ ಅದನ್ನು ತೋಡಿಕೊಳ್ಳಲು ಯಾರೂ ಅವನ ಜತೆಯಿಲ್ಲ. ಈಗ ಅವನೂ ಒಂಟಿಯಾಗಿದ್ದಾನೆ.

– ಮಹಾಲಕ್ಷ್ಮೀ ಸುಬ್ರಹ್ಮಣ್ಯ, ದುಬಾೖ

 

Advertisement

Udayavani is now on Telegram. Click here to join our channel and stay updated with the latest news.

Next