Advertisement

ತಂದೆ ಪರ ಮಾತಾಡಿದ ಮಗುವನ್ನು ಕೊಂದ ತಾಯಿ: ಗೋಬಿ ಮಂಚೂರಿ ಕೊಡಿಸಲು ಕರೆದೊಯ್ದು ಕೊಲೆ!

10:04 AM Apr 08, 2021 | Team Udayavani |

ಬೆಂಗಳೂರು: ತಾನು ಯಾರೊಂದಿಗೇ ಮಾತನಾಡಿದರೂ ತಂದೆಗೆ ಹೇಳುತ್ತಿದ್ದ ಮೂರು ವರ್ಷದ ಮಗಳನ್ನು ತಾಯಿಯೇ ವೇಲ್‌ನಿಂದ ಕುತ್ತಿಗೆ ಬಿಗಿದು ಹತ್ಯೆಗೈದಿರುವ ದಾರುಣ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮಲ್ಲತ್ತಹಳ್ಳಿ ನಿವಾಸಿ ವೀರಣ್ಣ ಅವರ 3 ವರ್ಷದ ಪುತ್ರಿ ವಿನುತಾ ಕೊಲೆಯಾದ ಮಗು. ಕೃತ್ಯ ಎಸಗಿದ ತಾಯಿ ಸುಧಾ (28)ಗಳನ್ನು ಬಂಧಿಸಲಾಗಿದೆ.

ಚಿತ್ರದುರ್ಗ ಮೂಲದ ವೀರಣ್ಣಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಕೌಟುಂಬಿಕ ಕಾರಣಕ್ಕೆ ಮೊದಲ ಪತ್ನಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ಮಧ್ಯೆ ಟೋಲ್‌ಗೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಧಾಳನ್ನು ನಾಲ್ಕು ವರ್ಷಗಳ ಹಿಂದೆ ವೀರಣ್ಣ ಪ್ರೀತಿಸಿ ಮದುವೆಯಾಗಿದ್ದು, ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. ದಂಪತಿಗೆ ಮೂರೂವರೆ ವರ್ಷದ ಹೆಣ್ಣು ಮಗು ಇತ್ತು. ವೀರಣ್ಣ ಕೂಲಿ ಕಾರ್ಮಿಕನಾಗಿದ್ದು, ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ದುಡಿಯುತ್ತಿದ್ದರು. ತಿಂಡಿ ಮತ್ತು ಮಧ್ಯಾಹ್ನ ಊಟಕ್ಕೆ ಮನೆಗೆ ಬರುತ್ತಿದ್ದರು. ಸುಧಾ ಟೈಲ್ಸ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸಕ್ಕೆ ಹೋಗುವಾಗ ಮಗಳನ್ನು ಕರೆದೊಯ್ಯುತ್ತಿದ್ದಳು.

ಇದನ್ನೂ ಓದಿ:

ಈ ಮಧ್ಯೆ ವಿನುತಾ, ತಾಯಿ ಸುಧಾ ಯಾರೊಂದಿಗೆ ಮಾತನಾಡಿದರೂ, ಮನೆಗೆ ಯಾರೇ ಬಂದರೂ ಆಕೆಯ ಪ್ರತಿ ಚಟುವಟಿಕೆಗಳನ್ನು ತಂದೆ ವೀರಣ್ಣಗೆ ಹೇಳುತ್ತಿದ್ದಳು. ಅದೇ ವಿಚಾರವಾಗಿ ಸುಧಾ ಮಗಳ ಮೇಲೆ ದ್ವೇಷ ಸಾಧಿಸುತ್ತಿದ್ದಳು. ಜತೆಗೆ ಯಾವಾಗಲೂ ತಂದೆ ಪರವಾಗಿಯೇ ಮಾತನಾಡುತ್ತಿಯಾ ಎಂದು ಹೊಡೆಯುತ್ತಿದ್ದಳು. ಅದೇ ವಿಚಾರಕ್ಕೆ ವೀರಣ್ಣ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದರು.

Advertisement

ಗೋಬಿ ಮಂಚೂರಿ ಕೊಡಿಸಲು ಕರೆದೊಯ್ದು ಕೊಲೆ: ಮಂಗಳವಾರ ಮಧ್ಯಾಹ್ನ ತಂದೆ ವೀರಣ್ಣ ಮನೆಗೆ ಬಂದಾಗ ಮಗಳು ಟಿವಿ ನೋಡುತ್ತಿದ್ದಳು. ಆಕೆಯಿಂದ ರಿಮೋಟ್‌ ಪಡೆದುಕೊಂಡು ಟಿವಿ ಚಾನೆಲ್‌ ಬದಲಿಸಿದ್ದಾರೆ. ಅಲ್ಲೇ ಇದ್ದ ಆರೋಪಿ ಏಕೆ ಚಾನೆಲ್‌ ಬದಲಿಸುತ್ತಿಯಾ? ಯಾವಾಗಲೂ ನ್ಯೂಸ್‌ ಚಾನೆಲ್‌ ಅನ್ನೇ ನೋಡುತ್ತಿಯಾ. ಅದನ್ನು ನೋಡುವುದಾದರೆ ಮನೆಗೆ ಬರಬೇಡ ಎಂದು ಜಗಳ ಮಾಡಿದ್ದಾಳೆ. ಆಗ ಪುತ್ರಿ ವಿನುತಾ, ತಂದೆ ಪರವಾಗಿ ಮಾತಾಡಿ, ಅಪ್ಪ ಏನು ಬೇಕಾದರೂ ನೋಡಲಿ, ನೀನು ಯಾಕೆ ಬೈಯುತ್ತಿಯಾ ಎಂದು ಹೇಳಿದ್ದಾಳೆ. ಅದರಿಂದ ಸಿಟ್ಟಿಗೆದ್ದ ಆರೋಪಿ, ಮಗಳಿಗೆ ನಿಂದಿಸಿದ್ದಾರೆ.

ನಂತರ ಸಂಜೆ ಪುತ್ರಿಯನ್ನು ಗೋಬಿ ಮಂಚೂರಿ ತಿನ್ನಿಸುವುದಾಗಿ ಮನೆಯಿಂದ ಹೊರಗಡೆ ಕರೆದೊಯ್ದ ಸುಧಾ, ಮಲ್ಲತ್ತಹಳ್ಳಿಯ ಕೆಲವೆಡೆ ಸುತ್ತಾಡಿಸಿದ್ದಾಳೆ. ಈ ನಡುವೆ ರಾತ್ರಿ 8 ಗಂಟೆಗೆ ವೀರಣ್ಣ ಮನೆಗೆ ಬಂದಿದ್ದು, ಮನೆ ಬೀಗ ಹಾಕಿದ್ದನ್ನು ಗಮನಿಸಿ ಸುಧಾಗೆ ಕರೆ ಮಾಡಿದ್ದಾರೆ. ಫೋನ್‌ ಸ್ವೀಕರಿಸಿದ ಸುಧಾ, ವಿನುತಾಳನ್ನು ಗೋಬಿ ಮಂಚೂರಿ ತಿನ್ನಿಸಲು ಕರೆದುಕೊಂಡು ಬಂದಿದ್ದು, ಹಣ ಕೊಡುವ ಸಂದರ್ಭದಲ್ಲಿ ಆಕೆ ಕಾಣಿಯಾಗಿದ್ದಾಳೆ ಎಂದು ಹೇಳಿದ್ದಾಳೆ. ಬಳಿಕ ಆಕೆ ಫೋನ್‌ ಸ್ವಿಚ್‌ ಆಫ್ ಆಗಿತ್ತು. ಬಳಿಕ 9.30ಕ್ಕೆ ಫೋನ್‌ ಆನ್‌ ಆದಾಗ ಮತ್ತೆ ಫೋನ್‌ ಮಾಡಿ ದಾಗ, ಮನೆ ಬಳಿ ಬರುತ್ತಿದ್ದೇನೆ ಎಂದು ಹೇಳಿದ್ದಾಳೆ. ಅನಂತರ ವೀರಣ್ಣ, ತನ್ನ ಸ್ನೇಹಿತ ಹಾಗೂ ಪತ್ನಿ ಸುಧಾಳ ಜತೆ ಜ್ಞಾನ ಭಾರತಿ ಠಾಣೆಯಲ್ಲಿ ಪುತ್ರಿ ನಾಪತ್ತೆ ಪ್ರಕರಣ ದಾಖಲಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಸುಳಿವು ಕೊಟ್ಟ ವೇಲ್‌: ಬುಧವಾರ ಬೆಳಗ್ಗೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿತ್ತು. ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಅದು ವಿನುತಾಳ ಶವ ಎಂಬುದನ್ನು ಖಾತ್ರಿ ಪಡಿಸಿಕೊಂಡರು. ಅನಂತರ ವೀರಣ್ಣ ದಂಪತಿಯನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸುವಾಗ ಸುಧಾ ಅನುಮಾನಾಸ್ಪದ ರೀತಿಯಲ್ಲಿ ನಡೆದುಕೊಂಡಿದ್ದಾಳೆ. ಸ್ಥಳೀಯರು ಹಾಗೂ ಗೋಬಿ ಮಂಚೂರಿ ಅಂಗಡಿ ಮಾಲೀಕನ ಬಳಿ ವಿಚಾರಿಸಿದಾಗ ಆಕೆ ಪುತ್ರಿಯನ್ನು ಗೋಬಿ ಮಂಚೂರಿ ಅಂಗಡಿಗೆ ಕರೆದೊಯ್ದಿಲ್ಲ ಎಂಬುದು ಗೊತ್ತಾಗಿತ್ತು.

ಬಳಿಕ ಮನೆಯಲ್ಲಿ ತಪಾಸಣೆ ನಡೆಸಿದಾಗ ಕೃತ್ಯಕ್ಕೆ ಬಳಸಿದ್ದ ವೇಲ್‌ನಲ್ಲಿ ರಕ್ತ ಅಂಟಿಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಕೃತ್ಯ ಎಸಗಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ.

“ಪುತ್ರಿ ವಿನುತಾ ಯಾವಾಗಲೂ ತಂದೆ ಪರವಾಗಿ ಮಾತಾಡುತ್ತಿದ್ದಳು. ತಂದೆ ಇಲ್ಲದ ವೇಳೆ ನಾನು ಏನೇ ಕೆಲಸ ಮಾಡಿದರೂ, ಯಾರೊಂದಿಗೇ ಮಾತನಾಡುತ್ತಿದ್ದರೂ ಅದನ್ನು ಆಕೆಯ ಅಪ್ಪನಿಗೆ ಹೇಳುತ್ತಿದ್ದಳು. ತಂದೆ ಹಾಗೂ ಬೇರೆಯವರ ಮುಂದೆ ನಿಂದಿಸುತ್ತಿದ್ದಳು. ಅದರಿಂದ ಕೋಪಗೊಂಡು ಕೊಲೆ ಮಾಡಿದ್ದೇನೆ’ ಎಂದು ಹೇಳಿಕೆ ನೀಡಿದ್ದಾಳೆ. ಆದರೂ ಕೃತ್ಯಕ್ಕೆ ಬೇರೆಯಾದರೂ ಸಹಕಾರ ನೀಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next