ಸೌತಾಂಪ್ಟನ್: ಕ್ರಿಕೆಟಿನ ಅದೆಷ್ಟೋ ಸಾಧನೆಗಳು ವಿಶೇಷ ಹಾಗೂ ಅಚ್ಚರಿಯಾಗಿ ಗೋಚರಿಸುತ್ತವೆ. ಈ ಸಾಲಿನಲ್ಲಿ ಇದೂ ಒಂದು… ಇಂಗ್ಲೆಂಡ್‌ನಲ್ಲಿ ನಡೆದ ಕ್ಲಬ್ ಕ್ರಿಕೆಟ್ ಪಂದ್ಯ ವೊಂದರಲ್ಲಿ ಅಮ್ಮ-ಮಗ ಶತಕದ ಜತೆಯಾಟ ನಡೆಸಿ ತಂಡವನ್ನು ಗೆಲ್ಲಿಸಿದ ಸಾಧನೆ ಇದು!
ಇಂಗ್ಲೆಂಡ್ ತಂಡದ ಮಾಜಿ ಆಟಗಾರ್ತಿ ಆರನ್ ಬ್ರಿಂಡಲ್ ಅವರು 12 ವರ್ಷದ ಪುತ್ರ ಹ್ಯಾರಿ ಬ್ರಿಂಡಲ್ ಜತೆಗೂಡಿ ಪುರುಷರ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ ಪಾಲ್ಗೊಂಡು ಮೊದಲ ವಿಕೆಟಿಗೆ ಅಜೇಯ 143 ರನ್‌ಗಳ ಜತೆಯಾಟ ನಡೆಸಿ ತಂಡದ ಗೆಲುವಿಗೆ ನೆರವಾದರು.
ನ್ಯಾಟಲ್‌ಹ್ಯಾಂ ಕ್ರಿಕೆಟ್ ಅಕಾಡೆಮಿ ಇಲೆವೆನ್ ವಿರುದ್ಧ ನಡೆದ “ಲಿಂಕನ್ ಆ್ಯಂಡ್ ಡಿಸ್ಟ್ರಿಕ್ ಲೀಗ್ ಟೂರ್ನಿ’ಯಲ್ಲಿ ಓಂಬಿ ಟ್ರೋಜನ್ಸ್ ತಂಡವನ್ನು ಪ್ರತಿನಿಧಿಸಿದ ಅಮ್ಮ-ಮಗ ಜೋಡಿ 142 ರನ್ ಸವಾಲನ್ನು ಅಜೇಯವಾಗಿ ಬೆನ್ನಟ್ಟಿತು. ಆರನ್ ಬ್ರಿಂಡಲ್ 101 ಎಸೆತಗಳಲ್ಲಿ ಅಜೇಯ 94 ರನ್ ಗಳಿಸಿದರೆ, ಪುತ್ರ ಹ್ಯಾರಿ 32 ರನ್ ಮಾಡಿದರು. ಬೌಲಿಂಗ್‌ನಲ್ಲೂ ಮಿಂಚಿದ ಹ್ಯಾರಿ 4 ವಿಕೆಟ್ ಉರುಳಿಸಿದ್ದರು.
ಇದನ್ನೂ ಓದಿ :ನಿಯಮ ಉಲ್ಲಂಘನೆ : ಪಾಕಿಸ್ಥಾನ್ ಸೂಪರ್ ಲೀಗ್‌ನಿಂದ ನಸೀಮ್‌ಗೆ ಗೇಟ್‌ಪಾಸ್
ಪುರುಷರ ಪಂದ್ಯದಲ್ಲಿ ಸೆಂಚುರಿ!
ಆರನ್ ಬ್ರಿಂಡೆಲ್ ಪುರುಷರ ವೃತ್ತಿಪರ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿದ್ದು ಇದೇ ಮೊದಲಲ್ಲ. 2011ರಲ್ಲಿ ಪುರುಷರ ಅರೆ-ವೃತ್ತಿಪರ ಕ್ರಿಕೆಟ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಮಹಿಳೆ ಎಂಬ ದಾಖಲೆಯನ್ನೂ ಬರೆದಿದ್ದರು.