Advertisement

ಜಲೀಲ್‌ ಕೊಲೆ ಆರೋಪಿಗಳಲ್ಲಿ ಹೆಚ್ಚಿನವರು ಸಂಘಪರಿವಾರದವರು : ರೈ

03:18 PM May 02, 2017 | Team Udayavani |

ಮಂಗಳೂರು: ಕರೋಪಾಡಿ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್‌ ಜಲೀಲ್‌ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ 11 ಆರೋಪಿ ಗಳಲ್ಲಿ ಹೆಚ್ಚಿನವರು ಸಂಘ ಪರಿವಾರಕ್ಕೆ ಸೇರಿದವರರಾಗಿದ್ದು ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನೇರ ಆರೋಪ ಮಾಡಿದರು.

Advertisement

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು ಜಲೀಲ್‌ ಗ್ರಾ. ಪಂ. ಅಧ್ಯಕ್ಷನಾಗಿ, ಉಪಾಧ್ಯಕ್ಷನಾಗಿ ಸಾಮಾಜಿಕ ಕಳಕಳಿಯೊಂದಿಗೆ ಕೆಲಸ ಮಾಡುತ್ತಾ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಹತ್ಯೆ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನಗಳು ನಡೆದವು. ಪೊಲೀಸರು ಕೊಲೆ ಆರೋಪಿಗಳನ್ನು  ಬಂಧಿಸಿದಾಗ ಆರೋಪಿಗಳಲ್ಲಿ ಸಾಕಷ್ಟು ಮಂದಿ ಸಂಘ ಪರಿವಾರದವರು ಇರುವುದು ಬಯಲಾಗಿದೆ ಎಂದರು.

ಹತ್ಯೆ ಪ್ರಕರಣದಲ್ಲಿ ವಿಕ್ಕಿ ಶೆಟ್ಟಿಯ ಪಾತ್ರವಿದೆ ಎಂಬ ಬಗ್ಗೆ ಪೊಲೀಸರ ಮಾಹಿತಿ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ತನಿಖೆ ಮುಂದುವರಿದಿದೆ. ಇನ್ನೂ ಕೆಲವರು ಇರುವ ಗುಮಾನಿ ಇದೆ. ತಪ್ಪಿತಸ್ಥರು ಯಾರೇ ಇರಲಿ ಅವರ ಮೇಲೆ ಕ್ರಮಕೈಗೊಳ್ಳುವ ಕಾರ್ಯವನ್ನು ಪೊಲೀಸರು ಮಾಡುತ್ತಾರೆ. ಮೇ 2ರಂದು ಗೃಹಸಚಿವರು ಜಿಲ್ಲೆಗೆ ಆಗಮಿಸಲಿದ್ದು ಜಲೀಲ್‌ ಮನೆಗೆ ಭೇಟಿ ನೀಡಲಿದ್ದಾರೆ. ನಾನು ಈ ಬಗ್ಗೆ ಸಚಿವರಲ್ಲಿ ವಿನಂತಿಸಿದ್ದೆ ಎಂದರು.

ಸಾಮರಸ್ಯಕ್ಕೆ ಧಕ್ಕೆ ಯಾಗಬಾರದು 
ದ.ಕ.ಮತೀಯ ಸೂಕ್ಷ್ಮ ಜಿಲ್ಲೆ. ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನಗಳನ್ನು ಎಲ್ಲರೂ ಖಂಡಿಸಬೇಕು. ಕಾರ್ತಿಕ್‌ರಾಜ್‌ ಕೊಲೆ ಪ್ರಕರಣವನ್ನು ಸಂಘ ಪರಿವಾರ ಮತೀಯಗೊಳಿಸಿತು. ಪಕ್ಷದ ನಾಯಕರು, ಸಂಸದರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಮತೀಯ ಸಂಘರ್ಷವನ್ನುಂಟು ಮಾಡುವ ಪ್ರಯತ್ನ ನಡೆಸಿದರು. ಪ್ರಕರಣದ ನೈಜ ಆರೋಪಿಗಳನ್ನು ಪೊಲೀಸರು ಬಂಧಿಸುವ ಮೂಲಕ ಸತ್ಯಾಂಶವನ್ನು ಬಯಲು ಮಾಡಿದರು ಎಂದ ಅವರು ಪೊಲೀಸ್‌ ಇಲಾಖೆಯನ್ನು ಅಭಿನಂದಿಸುತ್ತಿದ್ದೇನೆ ಎಂದರು. ಕೊಲೆಯತ್ನ ಪ್ರಕರಣದ ಆರೋಪಿ ಅಹ್ಮದ್‌ ಖುರೇಶಿ ಮೇಲೆ ಪೊಲೀಸ್‌ ದೌರ್ಜನ್ಯ ನಡೆದಿದೆ ಎಂಬುದರ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಖುರೇಶಿಗೆ ಅನ್ಯಾಯವಾಗಿದ್ದರೆ ಸೂಕ್ತ ನ್ಯಾಯ ದೊರಕಿಸಿಕೊಡಲಾಗುವುದು. ಅದೇ ರೀತಿ  ಖುರೇಶಿಯಿಂದ ಹಲ್ಲೆಗೊಳಗಾದವರಿಗೂ ನ್ಯಾಯ ಒದಗಿಸುವ ಕಾರ್ಯ ಆಗುತ್ತದೆ ಎಂದು ಸಚಿವರು ಹೇಳಿದರು. ಮಂಗಳೂರು ಚಲೋ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ಅಶ್ರಫ್‌ ಭಾಗವಹಿಸುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್‌ನಲ್ಲಿರುವವರು ಜಾತ್ಯತೀತ ನಿಲುವು ಹೊಂದಿರುವವರು. ಅವರು ಎಂದೂ ಮತೀಯವಾದಿ ಸಂಘಟನೆಗಳ ಜತೆಗೆ ಹೋಗುವವರಲ್ಲ ಮತೀಯವಾದಿಗಳ ಜತೆ ಸೇರುವವರು ಕಾಂಗ್ರೆಸಿಗರಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. 

ಗೋಷ್ಠಿಯಲ್ಲಿ ಮೇಯರ್‌ ಕವಿತಾ ಸನಿಲ್‌, ಉಪಮೇಯರ್‌ ರಜನೀಶ್‌, ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next