ಕಲಬುರಗಿ: ಸೇಡಂ ಕ್ಷೇತ್ರದಲ್ಲಿ ಡಾ| ಶರಣಪ್ರಕಾಶ ಪಾಟೀಲ 15 ವರ್ಷ ಶಾಸಕರಾಗಿ ಕ್ಷೇತ್ರಕ್ಕೆ ತಂದ ಅನುದಾನಕ್ಕಿಂತ ಹೆಚ್ಚಿನ ಅನುದಾನವನ್ನು ಪ್ರಸ್ತುತ ಐದೇ ವರ್ಷದಲ್ಲಿ ತರದಿದ್ದರೆ ಚುನಾವಣೆಗೆ ನಿಲ್ಲೋದಿಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸವಾಲು ಹಾಕಿದರು.
ಶನಿವಾರ ಸೇಡಂ ಪಟ್ಟಣದಲ್ಲಿ 50 ಕೋಟಿ ರೂ. ವೆಚ್ಚದ ವಸತಿ ಇಲಾಖೆಯ 750 ಮನೆಗಳ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ನೆರವೇರಿಸಿದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ತಾವು ತಂದಿರುವ ಅನುದಾನ ಕುರಿತು ಪ್ರತಿಯೊಂದು ಪೈಸೆಯ ಲೆಕ್ಕ ಕೊಡುವೆ. ಈ ಕುರಿತು ಬಹಿರಂಗ ಚರ್ಚೆಗೂ ಸಿದ್ಧ ಎಂದು ಘೋಷಿಸಿದರು.
ಕ್ಷೇತ್ರದಲ್ಲಿ ಈಗ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ತಮ್ಮ ಅವ ಧಿಯಲ್ಲಿ ತಂದಿರುವ ಅನುದಾನದಿಂದ ಎಂಬ ಮಾಜಿ ಸಚಿವ ಡಾ| ಶರಣ ಪ್ರಕಾಶ ಪಾಟೀಲ ಅವರ ಹೇಳಿಕೆಗೆ ತಿರುಗೇಟು ನೀಡಿದ ಶಾಸಕರು, ತಮ್ಮ 15 ವರ್ಷದ ಅವ ಧಿಯಲ್ಲಿ ಕ್ಷೇತ್ರದಲ್ಲಿ ಒಂದೇ ಒಂದು ದೇವಾಲಯ ಅಭಿವೃದ್ಧಿಪಡಿಸಿಲ್ಲ. ಆದರೆ ತಾವು ನಾಲ್ಕು ವರ್ಷದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ 100 ದೇವಾಲಯಗಳನ್ನು ಅಭಿವೃದ್ಧಿ ಮಾಡಿದ್ದೇವೆ. ಮುಂದಿನ ವರ್ಷ ಇನ್ನೂ ಆರು ಕೋಟಿ ರೂ. ಅನುದಾನ ತಂದು ಇನ್ನಷ್ಟು ದೇವಾಲಯ ಅಭಿವೃದ್ಧಿ ಮಾಡಲಾಗುವುದು ಎಂದು ಪ್ರಕಟಿಸಿದರು.
ತಾವು ಶಾಸಕರಾಗಿದ್ದಾಗ ರೈತರಿಗೆ ಎಷ್ಟು ಬಡ್ಡಿ ರಹಿತ ಸಾಲ ಕೊಟ್ಟಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಡಾ| ಶರಣಪ್ರಕಾಶ ಅವರಿಗೆ ತಿರುಗೇಟು ನೀಡಿದ ತೇಲ್ಕೂರ, ಪ್ರಸಕ್ತ ಸೇಡಂ ಕ್ಷೇತ್ರದಲ್ಲಿ 23 ಸಾವಿರ ರೈತರಿಗೆ 150 ಕೋಟಿ ರೂ.ಗಳನ್ನು ಡಿಸಿಸಿ ಬ್ಯಾಂಕ್ ದಿಂದ ಬಡ್ಡಿ ರಹಿತ ಸಾಲ ಹಂಚಲಾಗಿದೆ. ಮುಂದಿನ ವರ್ಷ 10 ಸಾವಿರ ತಾಯಂದಿರಿಗೆ ಹಸುವೊಂದನ್ನು ನೀಡಿ ಆರ್ಥಿಕಾಭಿವೃದ್ಧಿಗೆ ಕೈ ಜೋಡಿಸಲಾಗುವುದು. ಮುಂದಿನ ದಿನಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಯುವಕರಿಗೆ ಸಾಲ ನೀಡಲಾಗುವುದು ಎಂದರು.
ಏತ ನೀರಾವರಿ ಯೋಜನೆ: ಮುಂದಿನ ತಿಂಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಯಿಸಿ ಕ್ಷೇತ್ರದಲ್ಲಿ 639 ಕೋಟಿ ರೂ. ವೆಚ್ಚದ ಕಾಗಿಣಾ ಏತ ನೀರಾವರಿ ಯೋಜನೆಗೆ ಅಡಿಗಲ್ಲು ನೆರವೇರಿಸಿ 75 ಸಾವಿರ ಹೆಕ್ಟೇರ್ ನೀರಾವರಿಯಾಗುವ ಹಸಿರು ಕ್ರಾಂತಿಗೆ ನಾಂದಿ ಹಾಡಲಾಗುವುದು. ಅಲ್ಲದೇ ತಾವು ಧರ್ಮಗಳ ನಡುವೆ ಜಾತಿ ಕಿಡಿ ಹಚ್ಚಿರುವುದನ್ನು ಜನ ಇನ್ನೂ ಮರೆತಿಲ್ಲ ಎಂದು ಆರೋಪಿಸಿದರು.