ಮೂಡುಬಿದಿರೆ : ಕರಾವಳಿ ಯವರಿಗೆ ತಮ್ಮ ಸಂಸ್ಕೃತಿಯನ್ನು ರಕ್ಷಿಸಿ ಜೀವಂತವಾಗಿರಿಸಿಕೊಳ್ಳುವ, ಬೆಳೆಸುವ ಎಲ್ಲ ಗುಣಗಳಿವೆ. ಇಲ್ಲಿನ ಜನರು ಸಹೃದಯಿ ಗಳು, ಮೃದುಸ್ವಭಾವದವರು. ನನ್ನನ್ನು ಈ ಎಲ್ಲ ಗುಣಗಳು ಪ್ರಭಾವಿಸಿವೆ ಎಂದು ಮಹಾರಾಷ್ಟ್ರದ ವೃತ್ತಿಪರ ಚಿತ್ರಕಲಾವಿದ ಸಚಿನ್ ಆಕಲೇಕರ್ ಹೇಳಿದರು.
ಆಳ್ವಾಸ್ ವರ್ಣ ವಿರಾಸತ್ -ರಾಷ್ಟ್ರ ಮಟ್ಟದ ಚಿತ್ರಕಲಾವಿದರ ಶಿಬಿರದಲ್ಲಿ ಪಾಲ್ಗೊಂಡ ಇನ್ನೋರ್ವ ಕಲಾವಿದ ತೆಲಂಗಾಣದ ಕಾಂಡಿ ನರಸಿಂಹಲು ಅವರಿಗೂ ತಮ್ಮ ಊರಿನ ಸಂಸ್ಕೃತಿಯ ಕಾಳಜಿ. ನಗರದಿಂದ ಬಹುದೂರದಲ್ಲಿರುವ ತಮ್ಮ ಗ್ರಾಮದವರು ವಿಶೇಷವಾಗಿ ಇಂದಿನ ಯುವ ಪೀಳಿಗೆ ಪರಂಪರೆಯ ಉಡುಪು ತೊಡುಪುಗಳಿಂದ ಹೊರಬರುತ್ತಿರುವ ಬಗ್ಗೆ ಚಿಂತೆ ಇದೆ; ಈ ಚಿಂತೆ, ಚಿಂತನೆಗಳಿಂದ ತಾವು ತಮ್ಮ ಕಲಾಕೃತಿಗಳಲ್ಲಿ ‘ತೆಲಂಗಾಣ ಸಂಸ್ಕೃತಿ’ಯನ್ನೇ ವಸ್ತುವಾಗಿರಿಸಿಕೊಂಡು ಚಿತ್ರರಚಿಸುತ್ತಿರುವುದಾಗಿ ಹೇಳಿದರು.
ಮಕ್ಕಳ ಫ್ಯಾಂಟಸಿ ಲೋಕವನ್ನು ಕಲ್ಪಿಸಿಕೊಂಡು ಬೀದರ್‌ನ ಅಶೋಕ್ ಅಲ್ಲಿ ಅವರು ಚಿತ್ರರಚಿಸಿದ್ದಾರೆ. ಕೇರಳದ ಅಶ್ವಿನಿ ಎನ್. ಕೆ. ಅವರ ‘ಮಂಗ ಮತ್ತು ಕ್ಯಾಮರಾ ಕಣ್ಣು’, ತುಮಕೂರಿನ ಕುಮಾರ ಕೆ.ಜಿ. ಅವರ ‘ಹನುಮ’, ಮಂಜು ಹಾಸನ್ ಅವರ ‘ನವಿಲಗರಿ ತಲೆಗೆ ಸಿಕ್ಕಿಸಿಕೊಂಡ ಖನ್ನವದನ ಮಗುವನ್ನು ಹೊತ್ತ ತಂದೆ’, ಕೆ.ವಿ. ಕಾಳೆ ಸಂಡೂರು ಅವರ ‘ಗಂಡ ಹೆಂಡತಿ’ ಪ್ರದರ್ಶನದಲ್ಲಿವೆ. ದೇವು ರಾಯಚೂರು ಅವರ ‘ತಾಯಿ ಮಗುವಿನ ಸಂಬಂಧ ದಲ್ಲಿ ತಂದೆ-ತಾಯಿಯ ಹಿನ್ನೆಲೆ’ ಮಾರ್ಮಿ ಕವಾಗಿ ಚಿತ್ರಿಸಲ್ಪಟ್ಟು ಗಮನ ಸೆಳೆಯುತ್ತಿದೆ. ವಿಶೇಷವಾಗಿ ಭವನ್ ಪಿ.ಜಿ. ಅವರು ರಚಿಸಿದ ‘ವಿದ್ಯುತ್ ತಂತಿ ಸ್ಪರ್ಶವಾಗಿ ಪ್ರಾಣಕಳಕೊಂಡ ಕಾಗೆ’ಯ ಚಿತ್ರವು ‘ಲೈಟ್ ಆ್ಯಂಡ್ ಡಾರ್ಕ್’ ಎಂಬ ಮನೋಜ್ಞ ಶೀರ್ಷಿಕೆಯನ್ನು ಹೊತ್ತಿದೆ.
ಹೀಗೆಯೇ ಲಕ್ಷ್ಮಿ ಮೈಸೂರು, ದಿಲೀಪ್ ಡಿ.ಆರ್., ಗಣಪತಿ ಹೆಗ್ಡೆ, ಡಾ| ಅಶೋಕ ಎಸ್. ಶಟಕರ, ಮಮತಾ ಮಹಾರಾಷ್ಟ್ರ, ಕೃಷ್ಣ ಅಶೋಕ ತೆಲಂಗಾಣ, ಪ್ರೀತಾ ಕೆ. ನಾಯರ್ ಕೇರಳ, ಮಹಾರಾಷ್ಟ್ರದ ಸತ್ಯಜಿತ್ ಶಿಂಧೆ, ಕರ್ನಾಟಕದ ಸೈಯದ್ ಆಸಿಫ್ ಆಲಿ, ಮಧ್ಯಪ್ರದೇಶದ ಸಂಜು ಜೈನ್, ಮಲ್ತೇಶ್ ರಾಣೆಬೆನ್ನೂರು, ಡಾ| ಸಂತೋಷ್ ಕುಮಾರ್ ಕುಲಕರ್ಣಿ ತುಮಕೂರು ಹೀಗೆ ದೇಶದ ವಿವಿಧ ರಾಜ್ಯಗಳಿಂದ ಬಂದ ಕಲಾವಿದರು ಚಿತ್ರಗಳನ್ನು ರಚಿಸಿದ್ದಾರೆ. ಇವುಗಳೊಂದಿಗೆ ಆಳ್ವಾಸ್‌ನ ಸಂಗ್ರಹ ದಲ್ಲಿರುವ ಸುಮಾರು 4,000 ಕಲಾಕೃತಿ ಗಳನ್ನು ಪ್ರದರ್ಶನದಲ್ಲಿ ರಿಸಲಾಗಿದ್ದು ಜ.6ರ ಸಂಜೆಯವರೆಗೆ ತೆರೆದಿರುತ್ತದೆ.