Advertisement

Moodbidri,Belthangady: ಭಾರೀ ಮಳೆ; ಮರ ಬಿದ್ದು ಶಿರ್ತಾಡಿ ರಸ್ತೆಯಲ್ಲಿ ಸಂಚಾರ ವ್ಯತ್ಯಯ

01:08 AM Nov 04, 2024 | Team Udayavani |

ಮೂಡುಬಿದಿರೆ: ರವಿವಾರ ಸಂಜೆ ಮೂಡುಬಿದಿರೆ ಪರಿಸರದಲ್ಲಿ ಭಾರೀ ಗಾಳಿ ಸಹಿತ ಮಳೆ ಸುರಿದಿದೆ. ಕೋಟೆಬಾಗಿಲು ಮಸೀದಿ ಬಳಿ ಶಿರ್ತಾಡಿ ರಾಜ್ಯ ಹೆದ್ದಾರಿಯಲ್ಲಿ ಮರ ಉರುಳಿಬಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದೇ ಹೊತ್ತಿನಲ್ಲಿ ಕೋಟೆಬಾಗಿಲು ಮಾರಿಗುಡಿಬಳಿ ಒಳಗಿನ ಪ್ರಗತಿ ರಸ್ತೆಯಲ್ಲಿ ಮರ ಉರುಳಿ ಬಿದ್ದು ಸಮಸ್ಯೆಯಾಯಿತು. ಕೆಲವೆಡೆ ವಿದ್ಯುತ್‌ ಕಂಬಗಳೂ ಧರಾಶಾಯಿಯಾಗಿವೆ.

Advertisement

ಮುರಮೇಲಿನಲ್ಲಿ ವಿದ್ಯುತ್‌ ಟಿಸಿ ನೆಲಕ್ಕೆ ಬಿದ್ದಿದೆ. ಈ ಭಾಗದಲ್ಲಿ ವಿದ್ಯುತ್‌ ಪೂರೈಕೆ ಕಡಿತಗೊಂಡಿದೆ. ಶಿರ್ತಾಡಿ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಮರ್ಯಾಡಿ ದೈವಸ್ಥಾನದ ಬಳಿಯ ಒಳರಸ್ತೆ ಬಳಸಿ ಕಲ್ಲಬೆಟ್ಟು ಎಕ್ಸಲಂಟ್‌ ಬಳಿ ಹಾದು ಮೂಡುಬಿದಿರೆ-ವೇಣೂರು ಮಾರ್ಗದಲ್ಲಿ ಸಂಚರಿಸಬೇಕಾಯಿತು. ಅರಣ್ಯ ಇಲಾಖೆ ಸಿಬಂದಿ ಸುಮಾರು ಮೂರು ತಾಸು ಕಾರ್ಯಾಚರಣೆ ನಡೆಸಿ ಮರಗಳನ್ನು ತೆರವು ಮಾಡಿದ್ದಾರೆ.

ರವಿವಾರ ಸಂಜೆ ಕಲ್ಲಬೆಟ್ಟು ಎಕ್ಸಲೆಂಟ್‌ ಕಾಲೇಜು ಬಳಿ ಮರವೊಂದು ರಸ್ತೆಗೆ ಬಿದ್ದಿದ್ದು, ಬಳಿಕ ಅದನ್ನು ತೆರವು ಮಾಡಲಾಯಿತು.

ಬೆಳ್ತಂಗಡಿಯಲ್ಲೂ ಭಾರಿ ಮಳೆ
ಬೆಳ್ತಂಗಡಿ ತಾಲೂಕಿನ ಅನೇಕ ಭಾಗಗಳಲ್ಲಿ ರವಿವಾರ ಸಂಜೆ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹರಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ದೀಪಾವಳಿ ಸಡಗರದಲ್ಲಿದ್ದ ಮಂದಿಗೆ ಮಳೆಯಿಂದಾಗಿ ಅಡ್ಡಿಯಾಗಿದೆ. ಅನೇಕ ಕಡೆಗಳಲ್ಲಿ ಭತ್ತ ಕಟಾವು ಹಂತದಲ್ಲಿದ್ದು, ಮಳೆಯಿಂದ ನಷ್ಟ ಉಂಟಾಗಿದೆ. ಹೆದ್ದಾರಿಯ ಕೆಲವೆಡೆ ಎರಡು ಅಡಿಗಿಂತಲೂ ಹೆಚ್ಚು ನೀರು ಹರಿದ ಕಾರಣ ಟ್ರಾಫಿಕ್‌ ಜಾಮ್‌ ಉಂಟಾಯಿತು. ವಿದ್ಯುತ್‌ ಪೂರೈಕೆ, ಅಂತರ್ಜಾಲ ಸಂಪರ್ಕ ಕಡಿತಗೊಂಡಿತು.

Advertisement

ಒಂದು ಗಂಟೆಗಿಂತಲೂ ಅಧಿಕ ಕಾಲ ಭಾರಿ ಮಳೆ ಸುರಿದ ಕಾರಣ ಹಳ್ಳ ಹೊಳೆಗಳು ತುಂಬಿ ಹರಿದವು. ತೀವ್ರ ಮಳೆಯ ಪರಿಣಾಮ ವಿದ್ಯುತ್‌ ಪೂರೈಕೆಗೆ ಸಮಸ್ಯೆ ಉಂಟಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next