ನಂಬಿಕೆ ಇರಬೇಕು, ಆದರೆ ಮೂಢನಂಬಿಕೆ ಇರಬಾರದು. ಯಾರೋ ಹೇಳಿದ ಮಾತನ್ನು ಕೇಳಿ ತೊಂದರೆಗೆ ಸಿಲುಕಬಾರದು… ಇಂತಹ ಒಂದು ಅಂಶವನ್ನಿಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ “ಮಾಂತ್ರಿಕ’.
ಸಿನಿಮಾ ತಂಡ ಟೈಟಲ್ ಕಾರ್ಡ್‌ನಲ್ಲಿ ಹೇಳಿಕೊಂಡಂತೆ ಇದು ಸಿನಿಮಾ ವಿದ್ಯಾರ್ಥಿಗಳು ಮಾಡಿದ ಸಿನಿಮಾ. ಅಲ್ಲಿಗೆ ಮಿಕ್ಕಿದ್ದನ್ನು ಊಹಿಸಿಕೊಳ್ಳುವುದು ಸುಲಭ. ವ್ಯಾನವರ್ಣ ಜಮ್ಮುಲ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಚಿತ್ರವಿದು. ಜೊತೆಗೆ ವ್ಯಾಸವಾನ್ ಕೃಷ್ಟ ಎಂಬ ಘೋಸ್ಟ್ ಹಂಟರ್ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ಇಡೀ ಸಿನಿಮಾ “ಮಾರ್ನುಡಿ’ ಎಂಬ ಮಾಲ್‌ವೊಂದರ ಸುತ್ತ ಸಾಗುತ್ತದೆ. ಈ ಮಾಲ್‌ನೊಳಗೆ ಹೋದವರು ಭಯಭೀತರಾಗುತ್ತಾರೆ, ನಾನಾ ತೊಂದರೆ ಸಿಲುಕುತ್ತಾರೆ, ದೆವ್ವವಿದೆ ಎಂಬ ಭಯ ಎಲ್ಲರನ್ನು ಆವರಿಸಿಬಿಡುತ್ತದೆ. ಹಾಗಾದರೆ ನಿಜಕ್ಕೂ ಆ ಮಾಲ್‌ನಲ್ಲಿ ದೆವ್ವ ಇದೆಯಾ ಅಥವಾ ಇದರ ಹಿಂದೆ ಬೇರೆಯವರ ಕೈವಾಡ ಏನಾದರೂ ಉಂಟಾ… ಇಂತಹ ಪ್ರಶ್ನೆಗಳೊಂದಿಗೆ ವ್ಯಾಸವಾನ್ ಕೃಷ್ಣ ಘೋಸ್ಟ್ ಹಂಟರ್ ಆಗಿ ಮಾರ್ನುಡಿಯ ಹಿಂದೆ ಬೀಳುತ್ತಾರೆ. ಅಲ್ಲಿಂದ ಒಂದೊಂದೇ ಕುತೂಹಲಗಳು ತೆರೆದುಕೊಳ್ಳುತ್ತದೆ. ಅದೇನು ಎಂಬುದನ್ನು ತೆರೆಮೇಲೆಯೇ ನೋಡಬೇಕು.
ನಿರ್ದೇಶಕ ವ್ಯಾನವರ್ಣ ಜಮ್ಮುಲ ಅವರಿಗೆ ಏನೋ ಹೊಸದನ್ನು ಕಟ್ಟಿಕೊಡಬೇಕೆಂಬ ತುಡಿತ. ಅದೇ ಕಾರಣದಿಂದ ರೆಗ್ಯುಲರ್ ಪ್ಯಾಟರ್ನ್ ಬಿಟ್ಟ ಸಿನಿಮಾವಾಗಿ “ಮಾಂತ್ರಿಕ’ ಚಿತ್ರ ಮೂಡಿಬಂದಿದೆ. ಇಲ್ಲಿ ದೃಶ್ಯವೈಭವಕ್ಕಿಂತ ಹಿನ್ನೆಲೆ ಸಂಗೀತದ ಅಬ್ಬರವೇ ಹೆಚ್ಚು. ಮಾತು ಕಮ್ಮಿ ಕೆಲಸ ಜಾಸ್ತಿ ಎಂಬಂತೆ ತೆರೆಮೇಲೆ ಒಂದಷ್ಟು ಘಟನೆಗಳು ನಡೆಯುತ್ತಲೇ ಇರುತ್ತದೆ. ಹೆಚ್ಚು ಪಾತ್ರಗಳಿಲ್ಲ. ಹೀಗೆ ಬಂದು ಹಾಗೆ ಹೋಗುವ ಪಾತ್ರಗಳೇ ಜಾಸ್ತಿ. ಹಾಗೆ ನೋಡಿದರೆ ಚಿತ್ರದ ಒನ್‌ಲೈನ್ ಚೆನ್ನಾಗಿದೆ. ಅದನ್ನು ಇನ್ನಷ್ಟು ಚೆನ್ನಾಗಿ ನಿರೂಪಿಸುವ ಹಾಗೂ ಪರಿಣಾಮಕಾರಿಯಾಗಿ ತೋರಿಸುವ ಅವಕಾಶವಿತ್ತು.
ಕರ್ನಾಟಕ – ಮಹಾರಾಷ್ಟ್ರದ ಗಡಿ ಮಾರ್ನುಡಿ ಎಂಬ ಸ್ಥಳದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಟೈಂ ಟ್ರಾವೆಲ್ ಕಥೆಯಿದು. ಮೊದಲು ನಮ್ಮ ಮನಸಿ ನಲ್ಲಿರುವ ಭಯ ಹೋಗಬೇಕು ಎಂಬ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ. ವ್ಯಾಸವಾನ್ ಕೃಷ್ಟ ಎಂಬ ಘೋಸ್ಟ್ ಹಂಟರ್ ಪಾತ್ರದಲ್ಲೂ ಕಾಣಿಸಿ ಕೊಂಡಿರುವ ವ್ಯಾನ ವರ್ಣ ಜಮ್ಮುಲ ನಿರ್ಮಾಣ, ನಿರ್ದೇಶನ ಸೇರಿದಂತೆ 8 ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.
ರವಿಪ್ರಕಾಶ್ ರೈ