ದೇವನಹಳ್ಳಿ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಇದರಿಂದಾಗಿ ಸಂತಸಗೊಂಡಿರುವ ರೈತ ತನ್ನ ಹೊಲದಲ್ಲಿ ಬಿತ್ತನೆ ಕಾರ್ಯ ಆರಂಭಿಸಿದ್ದಾನೆ.
ಕಳೆದ 3-4 ದಿನಗಳಿಂದ ಜಿಲ್ಲೆಯಲ್ಲಿ ಮುಂಗಾರು ಕೃಷಿ ಚುರುಕುಗೊಂಡಿದೆ. ಕಳೆದ ವರ್ಷ ಸಾಧರಣ ಮಳೆ ನಡುವೆಯೂ ರಾಗಿ ಬೆಳೆ ಉತ್ತಮ ಇಳುವರಿ ಕಂಡಿತ್ತು. ಕೋವಿಡ್ ಸಂಕಷ್ಟದಲ್ಲಿಯೂ ಕೃಷಿ ಕಡೆ ಗಮನಹರಿಸಲು ಹಿಂದೇಟು ಹಾಕುತ್ತಿದ್ದರು. ಈ ಮಧ್ಯೆ 2ನೇ ಹಂತದ ಲಾಕ್‌ಡೌನ್ ಘೋಷಣೆ ಆಗಿದ್ದರಿಂದ ಜಮೀನು ಉಳುಮೆಗೆ ಟ್ರ್ಯಾಕ್ಟರ್, ಟಿಲ್ಲರ್‌ಗಳ ಕೊರತೆ ಉಂಟಾಗುತ್ತಿದೆ.
ಮುಂಗಾರು ಹಂಗಾಮಿನಲ್ಲಿ 64.434 ಹೆಕ್ಟೇರ್ ಪೈಕಿ, ತೊಗರಿ 284 ಹೆಕ್ಟೇರ್, ಮುಸುಕಿನ ಜೋಳ 1200 ಹೆಕ್ಟೇರ್, ರಾಗಿ 185 ಹೆಕ್ಟೇರ್, ಅಲಸಂದೆ, ಕಡಲೇ ಕಾಯಿ ಇತರೆ ಬೆಳೆಗಳ ಬಿತ್ತನೆ ಸೇರಿ 2432 ಹೆಕ್ಟೇರ್ ಬಿತ್ತನೆಯಾಗಿದೆ. ಪ್ರತಿವರ್ಷ ಜೂನ್-ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆ ಕೈಕೊಡುತ್ತಿದ್ದು, ಈ ಬಾರಿ ಮುಂಗಾರು ಪ್ರಾರಂಭಗೊಂಡು ಕೆರೆಕುಂಟೆಗಳಿಗೆ ನೀರು ಹರಿಯದೇ ಇದ್ದರೂ ಹದ ಮಳೆಯಾಗಿದೆ. ಹೀಗೆ ಹಸ್ತ ಮತ್ತು ಚಿತ್ತ ಮಳೆಯೂ ಪ್ರಾರಂಭದವರೆಗೆ ಇದ್ದರೆ ರೈತರಿಗೆ ಬಂಪರ್ ಆಗಲಿದೆ. ಕಟಾವಿನ ವೇಳೆ ಅಕಾಲಿಕ ಮಳೆಯಿಂದ ಫಸಲು ನಷ್ಟ ವಾಗುವ ಕಾರಣಕ್ಕೆ ರೈತರು ಬಿತ್ತನೆ ಕಾಲಾವಧಿಯನ್ನು ಮುಂದೂಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಜುಲೈ ಅಂತ್ಯ ದವರೆಗೆ ದೀರ್ಘಾವಧಿ ರಾಗಿ ಬಿತ್ತನೆ ಮುಗಿಸಬೇಕು. ಆಗಸ್ಟ್ 10ರವರೆಗೆ ಬೆಳೆಗಳನ್ನು ಬಿತ್ತನೆ ಮಾಡಬಹುದು ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.
ರೈತರು ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದಾರೆ. ಇತ್ತೀಚಿನಲ್ಲಿ 1200 ರಿಂದ 1500ಅಡಿಗಳವರೆಗೂ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ ಇದೆ. ಕೃಷಿ ಹೊಂಡ ಮಾಡಿಕೊಂಡು ಮಳೆ ನೀರನ್ನು ಶೇಖರಿಸಿ ಕೃಷಿ ಮಾಡುವ ಮಟ್ಟಕ್ಕೆ ಬಂದಿದ್ದಾರೆ.
–ಎಸ್.ಮಹೇಶ್