Advertisement
ಭಾರತೀಯ ಹವಾಮಾನ ಇಲಾಖೆ ಈ ಬಾರಿ ಜೂ. 4ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸಲಿವೆ ಎಂದು ತಿಳಿಸಿತ್ತು. ಆದರೆ ಸದ್ಯದ ಪರಿಸ್ಥಿತಿ ಪ್ರಕಾರ ಮತ್ತೂ 4-5 ದಿನ ತಡವಾಗುವ ಸಾಧ್ಯತೆ ಇದೆ. ಬಹುತೇಕ ನಾಲ್ಕು ವರ್ಷದ ಬಳಿಕ ಮುಂಗಾರು ಆಗಮನ ಮತ್ತೆ ವಿಳಂಬವಾಗುತ್ತಿದೆ.
Related Articles
Advertisement
ಜೂ. 8ರ ಬಳಿಕ ಕರಾವಳಿಗೆ ಮುಂಗಾರು ಪ್ರವೇಶ ಸಾಧ್ಯತೆ :
ಮಂಗಳೂರು: ಕಳೆದ ಕೆಲ ವರ್ಷಗಳ ಬಳಿಕ 2023ರಲ್ಲಿ ರಾಜ್ಯ ಕರಾವಳಿ ಭಾಗಕ್ಕೆ ಮುಂಗಾರು ತೀರಾ ವಿಳಂಬವಾಗಿ ಆಗಮಿಸುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಸದ್ಯದ ಮಾಹಿತಿಯಂತೆ ರಾಜ್ಯ ಕರಾವಳಿಗೆ ಜೂನ್ 8ರ ಬಳಿಕ ಮುಂಗಾರು ಪ್ರವೇಶ ಪಡೆಯಲಿದೆ.
ಕಳೆದ ವರ್ಷ ಮೇ 29ಕ್ಕೆ ಕೇರಳ ಕರಾವಳಿಗೆ ಮುಂಗಾರು ಅಪ್ಪಳಿಸಿದ ಎರಡರಿಂದ ಮೂರು ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು. ಆದರೆ ಸದ್ಯ ಆ ರೀತಿಯ ವಾತಾವರಣ ಇಲ್ಲ. ಇನ್ನು 4-5 ದಿನಗಳ ಒಳಗಾಗಿ ಕೇರಳ ಕರಾವಳಿ ಭಾಗಕ್ಕೆ ಮುಂಗಾರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಬಳಿಕ ಎರಡರಿಂದ ಮೂರು ದಿನಗಳ ಒಳಗೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಉತ್ತಮ ಮಳೆ ಸುರಿಯಬಹುದು.
ಭಾರತೀಯ ಹವಾಮಾನ ಇಲಾಖೆ ಅಧಿಕಾರಿ ಪ್ರಸಾದ್ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಮುಂಗಾರು ಘೋಷಣೆ ಮಾಡಲು ಕೆಲವೊಂದು ನಿಬಂಧನೆಗಳಿವೆ. ಅದರಂತೆ ಕೇರಳ, ಲಕ್ಷದ್ವೀಪ ಮತ್ತು ಮಂಗಳೂರು ಸೇರಿದಂತೆ 14 ಕಡೆಗಳಲ್ಲಿ ಶೇ. 60ರಷ್ಟು ಮಳೆಯಾಗಬೇಕು. ಆದರೆ ಸದ್ಯ ಶೇ. 35ರಷ್ಟು ಮಾತ್ರ ಮಳೆ ಸುರಿದಿದೆ. ಅದರಲ್ಲೂ 9 ಕಡೆಗಳಲ್ಲಿ ಎರಡು ದಿನಗಳ ಕಾಲ ನಿರಂತರ 2.5 ಸೆಂ.ಮೀ.ಗಿಂತಲೂ ಅಧಿಕ ಮಳೆಯಾಗಬೇಕು. ಆದರೆ ಸದ್ಯ ಆ ನಿಬಂಧನೆ ಪೂರ್ತಿಯಾಗಿಲ್ಲ ಇದೇ ಕಾರಣಕ್ಕೆ ಮುಂಗಾರು
ಘೋಷಣೆ ಮಾಡಲು ಸಾಧ್ಯವಿಲ್ಲ. ಸದ್ಯದ ಮಾಹಿತಿಯಂತೆ ಜೂ. 8ರ ಬಳಿಕ ರಾಜ್ಯ ಕರಾವಳಿಗೆ ಮುಂಗಾರು ಅಪ್ಪಳಿಸಬಹುದು ಎಂದು ನಿರೀಕ್ಷಿಸಲಾಗಿದೆ’ ಎನ್ನುತ್ತಾರೆ.
ಸೆಕೆ ಹೆಚ್ಚಳ ಸಾಧ್ಯತೆ :
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯ ಕರಾವಳಿ ಭಾಗದಲ್ಲಿ ಈಗಾಗಲೇ ಸೆಕೆಯ ಬೇಗೆ ಹೆಚ್ಚುತ್ತಿದೆ. ವಾಡಿಕೆಗಿಂತ 2ರಿಂದ 3 ಡಿ.ಸೆ. ಉಷ್ಣಾಂಶ ಏರಿಕೆಯಾಗುತ್ತಿದೆ. ಮುಂದಿನ ಕೆಲ ದಿನಗಳ ಕಾಲ ಇದೇ ರೀತಿ ವಾತಾವರಣ ಇರಲಿದ್ದು, ಸೆಕೆಯ ಬೇಗೆ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಜೂ. 5ರಿಂದ 8ರ ವರೆಗೆ “ಎಲ್ಲೋ ಅಲರ್ಟ್’ ಘೋಷಿಸಲಾಗಿದೆ. ರವಿವಾರ ಬಿಸಿಲಿನ ಬೇಗೆ ಹೆಚ್ಚು ಇತ್ತು.