Advertisement

ಮೊಗವೀರ ಭವನ ಮಹಾರಾಷ್ಟ್ರ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ 

11:53 AM Jan 09, 2019 | |

ಮುಂಬಯಿ: ಜಾಗತೀಕರಣದದಲ್ಲಿ ಭಾಷೆಗಳು ತನ್ನ ಗಡಿಯೊಳಗೆ ಉಳಿದಿಲ್ಲ. ಅದು ಗಡಿದಾಟಿ ಮೆರೆಯುತ್ತಿದೆ. ಜಾಗತಿಕ ಗ್ರಾಮಗಳು ಹುಟ್ಟಿದ್ದು, ಅವು ಜಗತ್ತನ್ನು  ಕಾಣುತ್ತಾ ಹೋಗುತ್ತಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಸಾಹಿತಿ ಪ್ರೊ| ಎಸ್‌. ಜಿ. ಸಿದ್ಧರಾಮಯ್ಯ ನುಡಿದರು.

Advertisement

ಜ. 6ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗ ಳೂರು ಅಂಧೇರಿಯ ಮೊಗವೀರ ಭವನದಲ್ಲಿ ಆಯೋ ಜಿಸಿದ್ದ ಮಹಾರಾಷ್ಟ್ರ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಅವರು, ಜಾಗತೀಕರಣದಿಂದಾಗಿ ವ್ಯಕ್ತಿಯು ಒಂದೇ ಕಡೆ ವಾಸ್ತವ್ಯ ಹೂಡುವ ಅಗತ್ಯವಿಲ್ಲ.  ವಿಸ್ತಾರವಾದ ಅವಕಾಶ ಇರುವುದರಿಂದ ಆತ ಸಾಮರ್ಥ್ಯಕ್ಕೆ ಅನು ಗುಣವಾಗಿ ಹೊರರಾಜ್ಯ, ಹೊರದೇಶಗಳಲ್ಲಿ ತನ್ನ ಭವಿಷ್ಯದ ಬದುಕು ಕಟ್ಟಿಕೊಳ್ಳಬಹುದಾಗಿದೆ. ಕನ್ನಡಿಗರು ಸಾಹಸಿಗರು. ಮುಖ್ಯವಾಹಿನಿಗೆ ಬೆರೆತರೂ ಕೂಡ ತಮ್ಮ ಮೂಲ ಸಂಸ್ಕೃತಿಯನ್ನು ಅವರು ತ್ಯಜಿಸು ವುದಿಲ್ಲ. ಅವರ ಕನ್ನಡ ಪ್ರಜ್ಞೆ ಮೆಚ್ಚುವಂಥದ್ದು. ಮುಂಬಯಿಯ ಸಂಘ-ಸಂಸ್ಥೆಗಳ ಕೂಡುಕಟ್ಟುವ ಪ್ರಜ್ಞೆ ಅತ್ಯಂತ ವಿಶೇಷವಾದುದು. ಮುಂಬಯಿ ನಗರ ಭಾತೀಯತೆಯ ಸರ್ವ ಸಂಸ್ಕೃತಿಗಳ ಸಂಗಮ ಪ್ರದೇಶವಾಗಿದೆ ಎಂದು ಹೇಳಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಹಿರಿಯ ಸಾಹಿತಿ ಡಾ| ನಲ್ಲೂರು ಪ್ರಸಾದ್‌ ಆರ್‌. ಕೆ. ಅವರು ಮಾತನಾಡಿ, ಮುಂಬಯಿ ಮತ್ತು ಕರ್ನಾಟಕಕ್ಕೆ ಜನ ಪದೀಯ ಸಂಬಂಧ ಇರುವುದರಿಂದ ಮುಂಬಯಿ ಮಾತೃ ಹೃದಯದ ಕೇಂದ್ರವಾಗಿದೆ. ಇಡೀ ಭಾರತ ವನ್ನು ಸಂಘಟಿಸುವ ಶಕ್ತಿ ಮುಂಬಯಿಗೆ ಇದೆ. ವಿದ್ಯಾ ರ್ಥಿಗಳು ತಮ್ಮ ಜೀವನದಲ್ಲಿ ಸಾಧಿಸುವ ಗುರಿಯನ್ನು ಹೊಂದಿರಬೇಕು ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಂಧೇರಿ ಶಾಸಕ ಅಮಿತ್‌ ಸಾಟಂ ಅವರು ಮಾತನಾಡಿ, ವಿದ್ಯಾರ್ಥಿಗಳು ಯಾವಾಗಲೂ ತನ್ನತನವನ್ನು ಬಿಟ್ಟುಕೊಡಬಾರದು. ತಮ್ಮ ಅತ್ಮಸಾಕ್ಷಿಯಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ರೀತಿಯ ಒತ್ತಡಕ್ಕೆ ಬಲಿಯಾಗಬಾರದು. ವರ್ತಮಾನಕ್ಕೆ ಹೊಂದಿಕೊಂಡು ತಮ್ಮ ನಿರ್ಧಾರವನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ನಿಮಿತ್ತ ಚಿಣ್ಣರ ಬಿಂಬವನ್ನು ಸ್ಥಾಪಿಸಲಾಗಿದೆ. ಇಂಗ್ಲೀಷ್‌ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಲ್ಲಿ ತರಬೇತಿ ನೀಡಿ ಅವರನ್ನು ಕನ್ನಡದ ರಾಯಭಾರಿಗಳನ್ನಾಗಿ ಸೃಷ್ಟಿಸಲಾಗುತ್ತಿದೆ ಎಂದರು.

Advertisement

ಮೈಸೂರು ಅಸೋಸಿಯೇಶನ್‌ ಟ್ರಸ್ಟಿ ಡಾ| ಬಿ. ಆರ್‌. ಮಂಜುನಾಥ್‌ ಮಾತನಾಡಿ, ವಿದ್ಯಾರ್ಥಿಗಳು ಮಾತೃಭಾಷೆಯನ್ನು ಮರೆಯಬಾರದು ಎಂದರು. ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್‌. ಉಪಾಧ್ಯ  ಮಾತನಾಡಿ, ಮುಂಬಯಿಯಲ್ಲಿ ನಡೆಯುತ್ತಿರುವ ಮಕ್ಕಳ ಪ್ರತಿಭಾ ಪುರಸ್ಕಾರದ ಈ ಐತಿಹಾಸಿಕ ಸಮಾರಂಭವು ಪ್ರಶಂಸನೀಯವಾಗಿದೆ. ಮಕ್ಕಳು ಶಿಕ್ಷಣ ಪಡೆಯುವುದರೊಂದಿಗೆ ಉತ್ತಮ ಮನುಷ್ಯರಾಗಿ  ರೂಪುಗೊಳ್ಳಬೇಕು ಎಂದರು.

ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ. ಎಲ್‌. ಬಂಗೇರ ಅವರು ಮಾತನಾಡಿ, ಮೊಗವೀರ ಮಂಡಳಿಯು ಮುಂಬಯಿಯಲ್ಲಿ ಪ್ರಥಮ ಕನ್ನಡ ರಾತ್ರಿ ಶಾಲೆ, ಗ್ರಂಥಾಲಯ ಮತ್ತು ಪತ್ರಿಕೆಗಳನ್ನು ಪ್ರಾರಂಭಿಸಿ ನಗರದಲ್ಲಿ ಕನ್ನಡ ಬೆಳೆಯಲು ಬುನಾದಿ ಹಾಕಿದೆ ಎಂದು ನುಡಿದು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕನ್ನಡ ವಿಭಾಗ ಮುಂಬಯಿ ವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಶ್ರಮ ವಹಿಸಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಾಧನೆಯನ್ನು ಮಾಡಬೇಕು ಎಂದರು.

ಮೊಗವೀರ ವ್ಯವಸ್ಥಾಪಕ ಮಂಡಳಿಯ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ವಿಕಾಸ್‌ ಪುತ್ರನ್‌, ಕನ್ನಡ ಪ್ರಾಧಿಕಾರದ ಸದಸ್ಯ ರತ್ನಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧೀಕ್ಷಕ ರಾಜೇಶ್‌ ಹಾಗೂ ಸಿಬ್ಬಂದಿಗಳು ಸಹಕರಿಸಿದರು. ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ್‌ ಸುವರ್ಣ, ಉಪಾಧ್ಯಕ್ಷ ಶ್ರೀನಿವಾಸ ಸುವರ್ಣ, ಹರೀಶ್‌ ಪುತ್ರನ್‌, ದೇವರಾಜ್‌ ಬಂಗೇರ, ಪ್ರಶಾಂತ್‌ ತಿಂಗಳಾಯ, ಪುರುಷೋತ್ತಮ ಕರ್ಕೇರ, ಸುಮಿತ್ರಾ ತಿಂಗಳಾಯ ಅವರನ್ನು ಪ್ರಾಧಿಕಾರದ ವತಿಯಿಂದ ಗೌರವಿಸಲಾಯಿತು. ಸಮಾರಂಭದಲ್ಲಿ ಮುಂಬಯಿ, ಪುಣೆ, ಕೊಲ್ಹಾಪುರ, ಸೋಲಾಪುರ, ಅಕ್ಕಲ್‌ಕೋಟೆಯ ಕನ್ನಡ ಮಾಧ್ಯಮದ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿವಮೊಗ್ಗ ದೀಪಿಕಾ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಕು| ಪ್ರತಿಭಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಡಾ| ಮುರಳೀಧರ ವಂದಿಸಿದರು. ಸಮಾರಂಭದಲ್ಲಿ 326 ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಾಧಿಕಾರವು ಹೊರರಾಜ್ಯದ ಕನ್ನಡ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಪ್ರದಾನಿಸುತ್ತಿರುವುದರಿಂದ ಕನ್ನಡದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರದ ಕನ್ನಡ ಮಾಧ್ಯಮದ ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಥಮ 12 ಸಾವಿರ ರೂ., ದ್ವಿತೀಯ 11 ಸಾವಿರ ರೂ. ಹಾಗೂ ತೃತೀಯ 10 ಸಾವಿರ ರೂ. ನಗದು ಬಹುಮಾನದೊಂದಿಗೆ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ. 
-ಡಾ| ಕೆ. ಮುರಳೀಧರ,
ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next