ಶಿವಮೊಗ್ಗ: 2008ರಲ್ಲಿ ಪಾಕಿಸ್ತಾನದ ಉಗ್ರರು ಭಾರತದ ಮೇಲೆ ದಾಳಿ ನಡೆಸಿದರು. ಆಗ 150 ಮಂದಿ ಹುತಾತ್ಮರಾದರು. ಆಗ ಪಾಕಿಸ್ತಾನಕ್ಕೆ ನಮ್ಮ ಸೈನ್ಯದ ಶಕ್ತಿಯನ್ನು ತೋರಿಸಿದ್ದರೆ ಇಂದು ಪುಲ್ವಾಮಾ ದಾಳಿಯಂಥ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಸೋಮವಾರ ನಗರದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿಯವರು ದೇಶದ ಅಭಿವೃದ್ಧಿ, ಗೌರವ ಹೆಚ್ಚಿಸಲು ತಮ್ಮ ಸಮಯವನ್ನು ಮೀಸಲಿರಿಸಿದ್ದಾರೆ. ಮೋದಿ ಓರ್ವ ದೂರದೃಷ್ಟಿಯ ನಾಯಕ ಎಂಬುದು ಅವರ ಕಾರ್ಯದಿಂದಲೇ ತಿಳಿಯುತ್ತದೆ.
ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮೋದಿ ಸದಾ ಯೋಚಿಸುತ್ತಾರೆ. ಭಾರತ ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲಿನಲ್ಲಿರದೇ ಅಭಿವೃದ್ಧಿ ಹೊಂದಿದ ರಾಷ್ಟವಾಗಬೇಕು. ಮೋದಿಯವರಂತ ಅಪರೂಪದ ಮಾಣಿಕ್ಯ ನಮಗೆ ಸಿಕ್ಕಿದೆ.
ನಾನು ಪ್ರಧಾನಿ ಎನ್ನದೇ ಪ್ರಧಾನ ಸೇವಕ ಎಂದು ಮೋದಿಯವರೇ ಹೇಳಿದ್ದಾರೆ. ಅಂತಹ ಮಾಣಿಕ್ಯವನ್ನು ನಾವು ಮತ್ತೂಮ್ಮೆ ಪ್ರಧಾನಿಯಾಗಿ ಉಳಿಸಿಕೊಳ್ಳಬೇಕಾಗಿದೆ ಎಂದರು. 1971ರ ಇಂದಿರಾ ಗಾಂಧಿಯವರ ಕಾಲದಿಂದಲೂ ಕಾಂಗ್ರೆಸ್, ಗರೀಬಿ ಹಠಾವೋ ಘೋಷಣೆ ಪ್ರಾರಂಭಿಸಿತು. ರಾಜೀವ್ ಗಾಂಧಿಯವರ ಕಾಲದಲ್ಲಿಯೂ ಅದನ್ನೇ ಹೇಳಿತು.
ಮನಮೋಹನ್ ಸಿಂಗ್‌ರ ಕಾಲದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಮಾಡ್ತಿವಿ ಎಂದ್ರು. ಕಾಂಗ್ರೆಸ್‌ಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಡವರು, ಅಲ್ಪಸಂಖ್ಯಾತರ ನೆನಪಾಗುತ್ತದೆ. ಆದರೆ, ಮೋದಿ ಸರ್ಕಾರ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಮುದ್ರಾದಂತಹ ಯೋಜನೆ ತಂದು ಬಡವರ ಕಲ್ಯಾಣಕ್ಕೆ ಕ್ರಮ ಕೈಗೊಂಡಿದೆ ಎಂದರು.