ಹುಣಸೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯನ್ನು ಮುಂದಿನ 45 ದಿನಗಳಲ್ಲಿ ಪ್ರತಿ ಹಳ್ಳಿ, ಮನೆ ಮನೆಗೆ ತಲುಪಿಸುವ ಮೂಲಕ ಮತ್ತೂಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿಸಲು ಕಾರ್ಯಕರ್ತರು ಪಣತೊಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.
ನಗರದ ಎಸ್‌ಎಲ್‌ವಿ ಸಭಾಂಗಣದಲ್ಲಿ ಬಿಜೆಪಿ ಆಯೋಜಿಸಿದ್ದ ಪಕ್ಷದ ಪ್ರಮುಖರ ಸಭೆಯಲ್ಲಿ ಅಭಿಪ್ರಾಯ ಪಡೆದು ಬಳಿಕ ಅವರು ಮಾತನಾಡಿದರು. ದೇಶದ 8 ಕೋಟಿ ಜನರಿಗೆ ಉಜ್ವಲ ಯೋಜನೆಯಡಿ ಉಚಿತವಾಗಿ ಗ್ಯಾಸ್ ವಿತರಿಸಲಾಗಿದೆ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಮೂಲಕ ಹೆಣ್ಣು ಮಕ್ಕಳ ಅಭ್ಯುದಯಕ್ಕೆ ನೆರವಾಗಿದೆ.
50 ಕೋಟಿ ಬಿಪಿಎಲ್ ಕಾರ್ಡ್‌ದಾರರ ಕುಟುಂಬಗಳನ್ನು ಗುರುತಿಸಿ ಆಯುಷ್ಮಾನ್ ಭಾರತ ಯೋಜನೆಯಡಿ 5 ಲಕ್ಷದ ರೂ.ವರೆಗೆ ಯಾವುದೇ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ. ಸ್ವತ್ಛ ಭಾರತ ಅಭಿಯಾನ, ಕಿಸಾನ್ ಸಮ್ಮಾನ್ ಮತ್ತಿತರ ಜನಪರ ಯೋಜನೆಗಳನ್ನು ಮತದಾರರಿಗೆ ತಲುಪಿಸಬೇಕು ಎಂದರು.
ವಿರೋಧ ಪಕ್ಷದಲ್ಲಿ ಎಲ್ಲರೂ ಪ್ರಧಾನಿ ಅಭ್ಯರ್ಥಿ ಆಕಾಂಕ್ಷಿಗಳೇ ಆಗಿದ್ದಾರೆ. ಹೆಂಡತಿ, ಮಕ್ಕಳು-ಮೊಮ್ಮಕ್ಕಳಿಗೂ ಅಧಿಕಾರ ಬೇಕೆನ್ನುತ್ತಾರೆ. ಆದರೆ, ನಮ್ಮದು ಈ ದೇಶಕ್ಕಾಗಿ ಮೋದಿ ಹೊರತು ಮೋದಿಗಾಗಿ ದೇಶವಲ್ಲ. ಅವರ ಹೆಂಡತಿಯನ್ನು ಮುಖ್ಯಮಂತ್ರಿ ಮಾಡಿಲ್ಲ ಅಥವಾ ಮಗನನ್ನು ಪ್ರಧಾನಿ ಮಾಡುತ್ತೇನೆನ್ನುತ್ತಿಲ್ಲವೆಂದು ಪರೋಕ್ಷವಾಗಿ ವಿರೋಧ ಪಕ್ಷಗಳನ್ನು ಟೀಕಿಸಿದರು.
ಕೈಪಿಡಿ ತಲುಪಿಸಿ: ಸಂಸದ ಪ್ರತಾಪಸಿಂಹ ಮಾತನಾಡಿ, ಕ್ಷೇತ್ರವ್ಯಾಪಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮದ ಕೈಪಿಡಿಯನ್ನು ಮನೆ ಮನೆಗೆ ಹಂಚಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ನಗರ ಅಧ್ಯಕ್ಷೆ ಭವಾನಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾಗರಾಜಪ್ಪ, ಮುಖಂಡರಾದ ಕೆ.ಟಿ.ಗೋಪಾಲ್, ಹಳ್ಳದಕೊಪ್ಪಲು ನಾಗಣ್ಣ, ನಾರಾಯಣ್, ಚಂದ್ರೇಗೌಡ, ಮಹದೇವ ಹೆಗ್ಗಡೆ, ಸುಬ್ಬರಾವ್ ಇತರರು ಉಪಸ್ಥಿತರಿದ್ದರು.