ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀಕೃಷ್ಣ ಮಠ, ಉಡುಪಿ ಇವರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಪ್ರಾಯೋಜಕತ್ವದೊಂದಿಗೆ ರಾಧಾಕೃಷ್ಣ ನೃತ್ಯನಿಕೇತನ ರಿ., ಉಡುಪಿ “ತ್ರಿ-ಸಂಗಮ’ ಎಂಬ ವಿಶಿಷ್ಟ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
ನಮ್ಮ ದೇಶದ 3 ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯ, ಕೂಚು ಪುಡಿ ಹಾಗೂ ಕಥಕ್ ನೃತ್ಯ ಗಳ ಪ್ರಸ್ತುತಿಯನ್ನು “ತ್ರಿ-ಸಂಗಮ’ ಕಾರ್ಯಕ್ರಮವು ಒಳಗೊಂಡಿತ್ತು. ರಾಧಾಕೃಷ್ಣ ನೃತ್ಯ ನಿಕೇತನದ ವಿದ್ಯಾರ್ಥಿಗಳಿಂದ ವಿ| ವೀಣಾ ಎಂ. ಸಾಮಗರ ನಿರ್ದೇಶನದಲ್ಲಿ ಭರತನಾಟ್ಯ ಹಾಗೂ ಕೂಚುಪುಡಿ, ಕಥಕ್ ನೃತ್ಯವನ್ನು ವಿ| ಪೊನ್ನಮ್ಮ ದೇವಯ್ಯನವರ ನಿರ್ದೇಶನ ದಲ್ಲಿ ನೀಡಲ್ಪಟ್ಟಿತು.
ಭರತನಾಟ್ಯ ಹಾಗೂ ಕೂಚುಪುಡಿ ನೃತ್ಯಕ್ಕೆ ಹಿಮ್ಮೇಳದಲ್ಲಿ ನಟುವಾಂಗ, ಹಾಡುಗಾರಿಕೆ, ನೃತ್ಯ ನಿರ್ದೇಶನ ವಿ| ವೀಣಾ ಎಂ. ಸಾಮಗ, ಮೃದಂಗದಲ್ಲಿ ವಿ| ಮನೋಹರ್ ರಾವ್ ಮಂಗಳೂರು, ವಯೋಲಿನ್‌ನಲ್ಲಿ ವಿ| ಪಿ. ಶ್ರೀಧರ ಆಚಾರ್ಯ ಉಡುಪಿ, ಕೊಳಲಿನಲ್ಲಿ ಡಾ| ಬಾಲಕೃಷ್ಣ ಮಣಿಪಾಲ ಸಹಕರಿಸಿದ್ದು ಸುಶ್ರಾವ್ಯಾದ ಸುಂದರ ಹಿಮ್ಮೇಳ ನೃತ್ಯಕ್ಕೆ ಮೆರುಗನ್ನು ನೀಡಿತು. ಕಥಕ್ ನೃತ್ಯಕ್ಕೆ ಸಿ.ಡಿ. ಬಳಕೆ ಮಾಡಲಾಗಿತ್ತು. ಅಂದಿನ ಕಾರ್ಯಕ್ರಮದಲ್ಲಿ ಸಂಸ್ಥೆಯ 38 ಕಲಾವಿದರು ಭಾಗವಹಿಸಿದ್ದರು.
ಭರತನಾಟ್ಯದಲ್ಲಿ ತಂಜಾವೂರು ಸಹೋದರರಿಂದ ರಚಿತವಾದ ಷಣ್ಮುಖ ಕೌತ್ವಂ, ಶೃಂಗೇರಿ ಶಾರದೆಯನ್ನು ವರ್ಣಿಸುವ ಕೃತಿ ಶೃಂಗಪುರಾದೀಶ್ವರಿ, ಪುರಂದರದಾಸರ ವಿರಚಿತ ಚಂದ್ರಚೂಡ ಶಿವಶಂಕರ ದೇವರ ನಾಮ ಇದರಲ್ಲಿ ವಿಷಕಂಠ ಶಿವ, ಮಾರ್ಕಂಡೇಯ ಚರಿತೆ, ಮನ್ಮಥ ದಹನವನ್ನು ಸಂಚಾರಿ ಭಾವದ ಮೂಲಕ ವಿವರಿಸಲಾಗಿತ್ತು. ಅನಂತರ ಸ್ವಾತಿ ತಿರುನಾಳ್ ಮಹಾರಾಜರ ಧನಶ್ರೀ ರಾಗದ ತಿಲ್ಲಾನದೊಂದಿಗೆ ಭರತನಾಟ್ಯ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕೂಚುಪುಡಿ ಪ್ರಸ್ತುತಿಯಲ್ಲಿ ಪೂರ್ವರಂಗ ನೃತ್ಯ. ರಂಗವನ್ನು ಶುದ್ಧೀಕರಿಸಿ, ಪುಣ್ಯಾರ್ಚನೆಗೈದು, ರಂಗವಲ್ಲಿ ಇಟ್ಟು, ಕೂಚುಪುಡಿ ಧ್ವಜ ತಂದು ಧೂಪಾರತಿಗಳನ್ನು ಮಾಡಿ ರಂಗಕ್ಕೆ ಹೂ ಸಮರ್ಪಿಸಿ, ಗಜಾನನ ಹಾಡಿನೊಂದಿಗೆ ಪೂರ್ವರಂಗ ಮೂಡಿ ಬಂದು ದೈವಿಕ ಪರಿಸರವನ್ನು ಉಂಟು ಮಾಡಿತು. ಅನಂತರ ಬ್ರಹ್ಮಾಂಜಲಿ ಹಾಗೂ ಜತಿಸ್ವರ ನೃತ್ಯ ಪ್ರದರ್ಶಿಸಲ್ಪಟ್ಟಿತು.
ಕಥಕ್‌ನಲ್ಲಿ ರಾಷ್ಟ್ರಕವಿ ಕುವೆಂಪು ಬರೆದ “ತೇನ ವಿನಾ ತೃಣಮಪಿ ನ ಚಲತಿ’ ಎಂಬ ಸಾಹಿತ್ಯಕ್ಕೆ ನೃತ್ಯ ಸಂಯೋಜನೆಯನ್ನು ಮಾಡಲಾಗಿತ್ತು. ಕೊನೆಯದಾಗಿ ಭರತನಾಟ್ಯದಲ್ಲಿ ತಿಲ್ಲಾನ ಹೇಗೋ ಹಾಗೆ ಕಥಕ್‌ನಲ್ಲಿ ತರಾನ ನೃತ್ಯ ಪ್ರದರ್ಶಿಸಲ್ಪಟ್ಟಿತು.
ಅದ್ಭುತವಾದ ಪರಿಕಲ್ಪನೆಯ “ತ್ರಿ-ಸಂಗಮ’ ಕಾರ್ಯ ಕ್ರಮ ಅತ್ಯಪೂರ್ವವಾಗಿ ಮೂಡಿಬಂತು.