ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯದಲ್ಲಿನ “ಜೆಡಿಎಸ್-ಕಾಂಗ್ರೆಸ್’ ಸಮಿಶ್ರ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನಗರದಲ್ಲಿ ಮಂಗಳವಾರ ನಡೆದ ಎಸ್ಸಿ/ಎಸ್ಟಿ ಗುತ್ತಿಗೆದಾರರ ಸಂಘದ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ಶಾಸಕರಿಗೆ ಅಧಿಕಾರದ ಮತ್ತು ಹಣದ ಆಮಿಷ ನೀಡಿ ಸರ್ಕಾರ ಉರುಳಿಸುವ ದಾಳ ಹೂಡಲಾಗಿದೆ. ಆದರೆ, ಇದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದ ದಿನದಿಂದ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಯುತ್ತಲೇ ಇದೆ. ಸರ್ಕಾರ ಉರುಳಿಸುವ ಸಂಬಂಧ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸತತ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ, ಇದರಲ್ಲಿ ಮತ್ತೆ ಯಶಸ್ವಿಯಾಗಲಾರರು ಎಂದರು.
ಅಧಿಕಾರಕ್ಕಾಗಿ ಹಿಂಬಾಗಿಲ ರಾಜಕಾರಣ:ಅಧಿಕಾರ ಹಿಡಿಯಲು ಬಿಜೆಪಿ ಮುಖಂಡರು ಹಿಂಬಾಗಿಲ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಇದು ಫಲಿಸುವುದಿಲ್ಲ. ರಾಜೀನಾಮೆ ನೀಡಿರುವ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಆನಂದ್ ಸಿಂಗ್ ಜತೆ ಮಾತನಾಡಿ, ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸುತ್ತೇನೆಂದು ಸಿದ್ದರಾಮಯ್ಯ ತಿಳಿಸಿದರು.
ಸಂಪರ್ಕಕ್ಕೆ ಸಿಗುತ್ತಿಲ್ಲ:ಯಾವುದೇ ಕಾರಣಕ್ಕೂ ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್ ಬಿಜೆಪಿ ಸೇರುವುದಿಲ್ಲ. ಅವರಿಗೆ ಕೆಲವು ಅಸಮಾಧಾನ ಆಗಿರಬಹುದು. ಅದನ್ನು ಮಾತುಕತೆ ಮೂಲಕ ಬಗೆಹರಿಸಲಾಗುವುದು. ಜಾರಕಿಹೊಳಿ ಮತ್ತು ಆನಂದ್ ಸಿಂಗ್ ಅವರನ್ನು ಫೋನ್ ಮೂಲಕ ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದೇನೆ. ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ನಾವೇನು ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳುತ್ತಲೇ ತೆರೆಮರೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿ, ಅವರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಸುಭದ್ರವಾಗಿದ್ದು, ಈ ಬಗ್ಗೆ ತುರ್ತು ಶಾಸಕಾಂಗ ಸಭೆ ಕರೆಯುವ ಅಗತ್ಯವಿಲ್ಲ. ಸರ್ಕಾರದ ಆಡಳಿತ ಸುಸೂತ್ರವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.