ಸೋಲಾಪುರ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬುಧವಾರ ಮೇಲ್ವರ್ಗದ ಬಡವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಾಮಾನ್ಯ ಕೆಟಗರಿಯಲ್ಲಿ ಶೇ.10ರ ಮೀಸಲಾತಿಯನ್ನು ನೀಡುವ ತಮ್ಮ ಸರಕಾರದ ಮಸೂದೆಯನ್ನು ಸಮರ್ಥಿಸಿಕೊಂಡರಲ್ಲದೆ ಲೋಕಸಭೆಯಲ್ಲಿ ಈ ಮಸೂದೆ ಪಾಸಾಗುವ ಮೂಲಕ ಸುಳ್ಳು ಹರಡುವವರಿಗೆ ಸರಿಯಾದ ಉತ್ತರ ನೀಡಿದಂತಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ತೀವ್ರ ವಾಕ್ ದಾಳಿ ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷ ರಫೇಲ್ ಫೈಟರ್ ಜೆಟ್ ಖರೀದಿ ವಿರುದ್ಧದ ಆರೋಪಗಳ ಮೂಲಕ ಏನನ್ನು ಸಾಧಿಸಲು ಮತ್ತು ಸಾಬೀತುಪಡಿಸಲು ಹೊರಟಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿದರು.
ಆರ್ಥಿಕ ದುರ್ಬಲರಿಗೆ ಶೇ.10ರ ಉದ್ಯೋಗ ಮತ್ತು ಮೀಸಲಾತಿ ಕಲ್ಪಿಸುವ ಮಸೂದೆ ರಾಜ್ಯಸಭೆಯಲ್ಲೂ ಪಾಸಾಗುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ, ಈ ಮಸೂದೆಯಿಂದ ದಲಿತರು, ಬುಡಕಟ್ಟು ಜನರು ಮತ್ತು ಅವಕಾಶ ವಂಚಿತರಿಗೆ ಯಾವ ರೀತಿಯ ಬಾಧೆಯೂ ಉಂಟಾಗುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.
ಲೋಕಸಭೆಯಲ್ಲಿ ಮೀಸಲಾತಿ ಮಸೂದೆ ಪಾಸಾಗಿರುವುದು ಒಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ವರ್ಣಿಸಿದ ಪ್ರಧಾನಿ ಮೋದಿ, ಅವಕಾಶ ವಂಚಿತ ಆರ್ಥಿಕ ದುರ್ಬಲರ ಕಲ್ಯಾಣ ಸಾಧಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಹೇಳಿದರು.
ಲೋಕಸಭೆಯಲ್ಲಿ ಪಾಸಾಗಿರುವ ಪೌರತ್ವ ಮಸೂದೆಯು ನೆರೆಯ ಬಾಂಗ್ಲಾ, ಪಾಕಿಸ್ಥಾನ, ಅಪಾ^ನಿಸ್ಥಾನದಿಂದ ಧಾರ್ಮಿಕ ದೌರ್ಜನ್ಯಕ್ಕೆ ಗುರಿಯಾಗಿ ಭಾರತಕ್ಕೆ ಬರುವ ಮುಸ್ಲಿಮೇತರರಿಗೆ ದೇಶದ ಪೌರತ್ವ ನೀಡುವ ಉದ್ದೇಶ ಹೊಂದಿದೆ; ಇದರಿಂದ ಈಶಾನ್ಯ ರಾಜ್ಯದ ಜನರು ಎಷ್ಟು ಮಾತ್ರಕ್ಕೂ ಮೊಟಕಾಗುವುದಿಲ್ಲ ಎಂಬ ಭರವಸೆ ನೀಡಿದರು.