Advertisement

ಧೈರ್ಯವಾಗಿರಿ, ಏಳು-ಬೀಳು ಸಹಜ…

10:37 AM Sep 09, 2019 | Lakshmi GovindaRaju |

ಬೆಂಗಳೂರು: ಹಗಲು-ರಾತ್ರಿ ಓದಿ ಪರೀಕ್ಷೆ ಬರೆದ ಮಗು, ತನ್ನ ಫ‌ಲಿತಾಂಶ “ಫೇಲ್‌’ ಅಂತ ನೋಟಿಸ್‌ ಬೋರ್ಡ್‌ ಮೇಲೆ ಕಂಡಾಗ ಸಹಜವಾಗಿ ಬಿಕ್ಕಿ ಅಳುತ್ತದೆ. ಆಗ, ಅಪ್ಪ ಆ ಮಗುವನ್ನು ಬಿಗಿದಪ್ಪಿ ಸಮಾಧಾನ ಮಾಡುತ್ತಾನೆ. ಇಸ್ರೋ ಅಧ್ಯಕ್ಷ ಕೆ.ಶಿವನ್‌ ಕೂಡ ಶನಿವಾರ ಬೆಳಗಿನ ಜಾವ ಕನಸಿನ ಕೂಸು “ವಿಕ್ರಮ್‌’ ಇಸ್ರೋದೊಂದಿಗೆ ಸಂಪರ್ಕ ಕಡಿದುಕೊಂಡಾಗ ಅಕ್ಷರಶಃ ಮಗುವಾದರು. ಅವರ ಬೆನ್ನು ತಟ್ಟಿದ ಮೋದಿ, “ಧೈರ್ಯವಾಗಿರಿ’ ಎಂದು ಹೇಳಿ ಸಮಾಧಾನಪಡಿಸಿದರು.

Advertisement

ಚಂದ್ರನಿಂದ ಕೇವಲ 2.1 ಕಿ.ಮೀ. ದೂರದಲ್ಲಿದ್ದಾಗ ಸಂಪರ್ಕ ಕಡಿದುಕೊಂಡ “ವಿಕ್ರಂ’ಗಾಗಿ ಇಸ್ರೋ ಅಧ್ಯಕ್ಷ ಶಿವನ್‌ ಮತ್ತು ತಂಡ ಇನ್ನಿಲ್ಲದ ಹುಡುಕಾಟ ನಡೆಸಿತು. ಅದರೊಂದಿಗೆ ಮತ್ತೆ ಸಂವಹನ ಸಾಧಿಸಲು ಪ್ರಯತ್ನಿಸಿತು. ಆದರೆ, ಇದು ಫ‌ಲಿಸದಿದ್ದಾಗ ಶಿವನ್‌, ಗ್ಯಾಲರಿಯಲ್ಲಿ ಕುಳಿತಿದ್ದ ಪ್ರಧಾನಿ ನರೇಂದ್ರ ಮೋದಿ ಬಳಿಗೆ ತೆರಳಿ ಮಾಹಿತಿ ನೀಡಲು ಮುಂದಾದರು. ಬಳಿಕ, ಶಿವನ್‌ ಅವರ ಜತೆಗೆ ಗ್ಯಾಲರಿಯಿಂದ ವಿಜ್ಞಾನಿಗಳಿದ್ದ ಜಾಗಕ್ಕೇ ಬಂದ ಪ್ರಧಾನಿ, ಒಂದಷ್ಟು ಹೊತ್ತು ಮರೆಯಲ್ಲಿದ್ದರು. ಇನ್ನೇನು ವಿಕ್ರಮ್‌ ಸಂಪರ್ಕ ಸಾಧಿಸಲು ಆಗಲೇ ಇಲ್ಲ ಎಂದಾದಾಗ ಇಸ್ರೋ ಅಧ್ಯಕ್ಷ ಕೆ.ಶಿವನ್‌ ಅವರೇ ಈ ಬಗ್ಗೆ ಘೋಷಿಸಿದರು. ಆಗ, ನಿಯಂತ್ರಣ ಕೊಠಡಿಯಲ್ಲಿದ್ದ ಎಲ್ಲ ರಲ್ಲೂ ಒಂದು ರೀತಿಯ ನಿರಾಸೆ ಕವಿಯಿತು.

ಆಗ ಮಾತನಾಡಿದ ಪ್ರಧಾನಿ ಮೋದಿ, “ದೇಶಕ್ಕೆ ನೀವು (ಇಸ್ರೋ ವಿಜ್ಞಾನಿಗಳು) ಸಾಕಷ್ಟು ಸೇವೆ ಸಲ್ಲಿಸಿದ್ದೀರಿ. ಈಗ ಮಾಡಿರುವ ಸಾಧನೆಯೇನೂ ಕಮ್ಮಿ ಅಲ್ಲ. ಈ ಪಯಣದಲ್ಲಿ ನೀವು ಸಾಕಷ್ಟು ಕಲಿತಿದ್ದೀರಿ ಕೂಡ. ಇನ್ನೂ ಉತ್ತಮ ಸಾಧನೆ ಮಾಡುವ ವಿಶ್ವಾಸ ಇಟ್ಟುಕೊಳ್ಳಿ’ ಎಂದು ಧೈರ್ಯ ತುಂಬಿದರು. ಇಡೀ ಭಾರತೀಯ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ದಿಗ್ಗಜರು ಈ ಕ್ಷಣಕ್ಕೆ ಸಾಕ್ಷಿಯಾದರು. ಈ ವೇಳೆ, ಇಸ್ರೋ ಮಾಜಿ ಅಧ್ಯಕ್ಷರಾದ ಡಾ.ಕೆ.ರಾಧಾಕೃಷ್ಣನ್‌, ಕಸ್ತೂರಿರಂಗನ್‌ ಕೂಡ ಶಿವನ್‌ ಅವರ ಬೆನ್ನು ತಟ್ಟಿ ಸಂತೈಸಿದರು.

ರಫ್ ಬ್ರೇಕಿಂಗ್‌ ಯಶಸ್ವಿಯಾಗಿತ್ತು: ಇದಕ್ಕೂ ಮುನ್ನ ಶನಿವಾರ ಬೆಳಗಿನ ಜಾವ 1.37ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಲ್ಯಾಂಡರ್‌ ಅನ್ನು ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆಯ ಭಾಗವಾದ ವೇಗ ನಿಯಂತ್ರಕ ಕಾರ್ಯ ಆರಂಭಗೊಂಡಿತು ಎಂದು ಟ್ವೀಟ್‌ ಮಾಡಿತ್ತು. ಇದಾಗಿ ಎರಡು ನಿಮಿಷಕ್ಕೆ ಅಂದರೆ 1.39ಕ್ಕೆ “ಮೊದಲ ಹಂತದ ವೇಗ ಕಡಿತ (ರಫ್ ಬ್ರೇಕಿಂಗ್‌ ಫೇಸ್‌)ಗೊಳಿಸುವಲ್ಲಿ ಯಶಸ್ವಿ; ಫೈನ್‌ ಬ್ರೇಕಿಂಗ್‌ ಆರಂಭ’ ಎಂದು ಕೂಡ ಟ್ವೀಟ್‌ ಮಾಡಿತು. ಆಗ, ವಿಜ್ಞಾನಿಗಳಿಂದ ಕರತಾಡನ ಮೊಳಗಿತು. ಇದಕ್ಕೆ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರಧಾನಿ ಸೇರಿದಂತೆ ಹಿರಿಯ ವಿಜ್ಞಾನಿಗಳು ಕೂಡ ಸಾಥ್‌ ನೀಡಿದರು.

ಈ ಸಂದರ್ಭದಲ್ಲಿ ಲ್ಯಾಂಡರ್‌ ವೇಗದ ಮಿತಿ ಪ್ರತಿ ಸೆಕೆಂಡ್‌ಗೆ 1,640 ಮೀಟರ್‌ ಇದ್ದದ್ದು, ಕೇವಲ ಪ್ರತಿ ಸೆಕೆಂಡ್‌ಗೆ 86 ಮೀಟರ್‌ಗೆ ಇಳಿಮುಖವಾಗಿತ್ತು. ಈ ವೇಳೆ, ಚಂದ್ರನ ಮೇಲ್ಭಾಗದಿಂದ “ವಿಕ್ರಮ್‌’ ಕೇವಲ 4.43 ಕಿ.ಮೀ.ದೂರದಲ್ಲಿತ್ತು. ಸೆಕೆಂಡ್‌ಗೆ ರೇಖಾಂಶದಲ್ಲಿ 48 ಮೀ. ಮತ್ತು ಅಕ್ಷಾಂಶದಲ್ಲಿ 60 ಮೀ.ವೇಗದಲ್ಲಿ ಇದ್ದಾಗ ದಿಢೀರ್‌ ಸಂವಹನ ಕಳೆದುಕೊಂಡಿತು.

Advertisement

ಇದಕ್ಕೂ ಮೊದಲು ಇಸ್ರೋ ಇಸ್ಟ್ರಾಕ್‌ನಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಚಂದ್ರನ ಮೇಲೆ ಕಾಲಿಡಲು ವಿಜ್ಞಾನಿಗಳು ತುದಿಗಾಲಲ್ಲಿ ನಿಂತಿದ್ದರು. ಗಡಿಯಾರದ ಮುಳ್ಳು 1.30ಕ್ಕೆ ಸರಿಯುತ್ತಿದ್ದಂತೆ ಎಲ್ಲರ ಚಿತ್ತ ಪರದೆ ಮೇಲೆ ನೆಟ್ಟಿತು. ಆತ್ಮವಿಶ್ವಾಸದ ನಡುವೆ ಆಗಾಗ್ಗೆ ಸುಳಿಯುವ ಆತಂಕ, ಇದರ ನಡುವೆ ಒತ್ತಡದಲ್ಲಿ ಕೈ-ಕೈ ಹಿಸುಕಿಕೊಳ್ಳುವ ವಿಜ್ಞಾನಿಗಳು, ಇದನ್ನು ವರದಿ ಮಾಡುವ ವರದಿಗಾರರ ಒತ್ತಡ ಸಾಮಾನ್ಯವಾಗಿತ್ತು.

ವಿಜ್ಞಾನಿಗಳಿಂದ ಹಿಡಿದು ಅವರಿಗೆ ತಡರಾತ್ರಿಯಲ್ಲಿ ಚಹ ಪೂರೈಸುತ್ತಿದ್ದ “ಡಿ’ ದರ್ಜೆ ನೌಕರರ ಕಣ್ಣುಗಳಲ್ಲೂ ಕುತೂಹಲ ಮತ್ತು ಆತಂಕ ಮನೆ ಮಾಡಿತ್ತು. ಕ್ಷಣ, ಕ್ಷಣಕ್ಕೂ ಉಪಗ್ರಹದ ಚಲನವಲನವನ್ನು ಪರಿಶೀಲಿಸುವ ಎಂಜಿನಿಯರ್‌ಗಳ ತಂಡ, ನಂತರ ಆ ಸಂದೇಶವನ್ನು ವಿಜ್ಞಾನಿಗಳಿಗೆ ರವಾನಿಸುವುದು, ಅದನ್ನು ಆಧರಿಸಿ ಪುನಃ ಆ ತಂಡಕ್ಕೆ ವಿಜ್ಞಾನಿಗಳು ನೀಡುತ್ತಿರುವ ಸೂಚನೆ ನೀಡುತ್ತಿರುವುದು ಕಂಡು ಬಂತು.

ಕ್ಲಿಷ್ಟಕರ‌ ಕ್ಷಣ: “ಉದಯವಾಣಿ’ಯೊಂದಿಗೆ ಮಾತಿಗಿಳಿದ ಚಂದ್ರಯಾನ-2 ರಂಭಾ ಪೇಲೋಡ್‌ ತಾಂತ್ರಿಕ ಎಂಜಿನೀಯರ್‌ ನಿರ್ಭಯ ಕುರ್ಮಾ ಉಪಾಧ್ಯಾಯ, “ಇದೊಂದು ಕ್ಲಿಷ್ಟಕರ ಕ್ಷಣವಾಗಿದ್ದು, ಈ ಬಾರಿ ಇದನ್ನು ಇಸ್ರೋ ಯಶಸ್ವಿಯಾಗಿ ಪೂರೈಸಲಿದೆ. ಇದಕ್ಕೆ ದೇಶದ ಜನರು ಕೂಡ ಪ್ರಾರ್ಥನೆ ಮಾಡಬೇಕು’ ಎಂದು ಮನವಿ ಮಾಡಿದ್ದರು.

ಚಂದ್ರಯಾನ-2 ಅಲ್ಪದರಲ್ಲಿ ವಿಫ‌ಲವಾಗಿದ್ದು, ಮುಂದಿನ ದಿನಗಳಲ್ಲಿ ವಿಜ್ಞಾನಿಗಳು ಯಶಸ್ವಿಯಾಗುವ ವಿಶ್ವಾಸ ಇದೆ. ಚಂದ್ರನ ಅಂಗಳಕ್ಕೆ ಹೋಗುವಲ್ಲಿ ಪ್ರಯತ್ನಿಸಿರುವ ನಾಲ್ಕನೇ ರಾಷ್ಟ್ರ ನಮ್ಮದು. ವಿಜ್ಞಾನಿಗಳ ಪ್ರಯತ್ನಕ್ಕೆ ಅಭಿನಂದನೆಗಳು.
-ಯಡಿಯೂರಪ್ಪ, ಮುಖ್ಯಮಂತ್ರಿ

ಗೆಲುವು ಸಾಧಿಸಿ ಗುರಿ ಮುಟ್ಟಲು ಹಲವು ಬಾರಿ ಕೆಳಗೆ ಬೀಳುತ್ತೇವೆ. ಇಸ್ರೊ ವಿಜ್ಞಾನಿಗಳ ಶ್ರಮದ ಬಗ್ಗೆ ನಮಗೆ ಹೆಮ್ಮೆಯಿದೆ. ದೇಶವನ್ನು ಈ ಹಂತಕ್ಕೆ ತೆಗೆದುಕೊಂಡು ಹೋಗಿರುವ ನಿಮ್ಮ ಜೊತೆಗೆ ನಾವಿದ್ದೇವೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಮುಂದಿನ ದಿನಗಳಲ್ಲಿ ಯಶಸ್ಸು ನಮ್ಮದಾಗಲಿದೆ. ಇಸ್ರೋ 130 ಕೋಟಿ ಜನ ಹೆಮ್ಮೆಪಡುವಂತೆ ಮಾಡಿದೆ. ಯೋಜನೆಗೆ ಉಂಟಾದ ಸಣ್ಣ ತೊಡಕಿಗೆ ಎದೆಗುಂದದೆ, ದೇಶ ನಿಮ್ಮೊಂದಿಗೆ ಇದೆ ಎಂದು ವಿಜ್ಞಾನಿಗಳನ್ನು ಪ್ರೋತ್ಸಾಹಿಸಿರುವ ಪ್ರಧಾನಿಗಳ ಶೈಲಿಯು ಅವರ ಬಗ್ಗೆ ದೇಶದ ಜನರಲ್ಲಿ ಇದ್ದ ಅಭಿಮಾನ ನೂರ್ಮಡಿಗೊಳಿಸಿದೆ.
-ನಳೀನ್‌ ಕುಮಾರ್‌ ಕಟೀಲ್‌ ಬಿಜೆಪಿ ರಾಜ್ಯಾಧ್ಯಕ್ಷ

ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯ ಸಾಧನೆ ಶ್ರೇಷ್ಠ ಮತ್ತು ಹಿಮಾಲಯದೆತ್ತರ. ಚಂದ್ರಯಾನ-2ರ ಸಂಪರ್ಕದ ಕಡಿತದ ವೈಜ್ಞಾನಿಕ, ತಾಂತ್ರಿಕ ತೊಂದರೆಯಿಂದ ಎದೆಗುಂದಬೇಕಿಲ್ಲ. ಒಟ್ಟು ಪ್ರಯೋಗ ಒಂದು ಹೆಮ್ಮೆಯ ಸಾಧನೆ. ಈ ಅನುಭವವನ್ನು ಎತ್ತರಕ್ಕೇರಿಸಲು ಮೆಟ್ಟಿಲಾಗಿಸೋಣ.
-ಎಚ್‌.ಕೆ. ಪಾಟೀಲ್‌, ಮಾಜಿ ಸಚಿವ

ನಮ್ಮ ದೇಶ ಹೆಮ್ಮೆ ಪಡುವಂತೆ ಮಾಡಿರುವ ಇಸ್ರೋ ಬಗ್ಗೆ ನಮಗೆ ಅಭಿಮಾನವಿದೆ. ಇಸ್ರೋ ವಿಜ್ಞಾನಿಗಳು ಹಾಗೂ ಅಲ್ಲಿನ ಸಿಬ್ಬಂದಿಯ ಕಠಿಣ ಶ್ರಮಕ್ಕೆ ಅಭಿನಂದನೆಗಳು. ನಾವೆಲ್ಲ ನಿಮ್ಮೊಂದಿಗಿದ್ದೇವೆ.
-ಈಶ್ವರ್‌ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಇಸ್ರೋ ಚಂದ್ರಯಾನ -2 ಸೋಲೆ ಅಲ್ಲ. ತಾಂತ್ರಿಕವಾಗಿ ಒಂದಿಷ್ಟು ಹಿನ್ನಡೆಯಾಗಿದ್ದು, ಅದನ್ನು ಶೀಘ್ರ ಸರಿಪಡಿಸಿಕೊಂಡು ಮತ್ತೆ ಚಂದ್ರಯಾನಕ್ಕೆ ಇಸ್ರೋ ವಿಜ್ಞಾನಿಗಳು ಸಜ್ಜಾಗಬೇಕಿದೆ. ನಿಮ್ಮ ಜತೆ ಇಡೀ ದೇಶವೇ ಇದೆ.
-ಆರ್‌.ರಾಜು, ಅಧ್ಯಕ್ಷರು ಕಾಸಿಯಾ

ಇಸ್ರೋ, ಚಂದ್ರಯಾನದಲ್ಲಿ ಲಕ್ಷಾಂತರ ಕಿ.ಮೀ.ನಲ್ಲಿ ದೂರವನ್ನು ಯಶಸ್ವಿಯಾಗಿ ತಲುಪಿದೆ. ನಿರೀಕ್ಷೆಯಂತೆ ಲ್ಯಾಂಡಿಂಗ್‌ ಆಗಿಲ್ಲ ಅಷ್ಟೇ. ಕೆಲ ದಿನಗಳಲ್ಲಿಯೇ ವಿಕ್ರಂ ಲ್ಯಾಂಡರ್‌ ಸಂಪರ್ಕಕ್ಕೆ ಸಿಕ್ಕು ಒಳ್ಳೆ ಸುದ್ದಿ ಸಿಗಬಹುದು ಎಂಬ ನಂಬಿಕೆ ಇದೆ. ಇಸ್ರೋ ವಿಜ್ಞಾನಿಗಳ ಮಹತ್ತರ ಸಾಧನೆ ಸ್ಮರಣೀಯ.
-ಸಿ.ಆರ್‌. ಜನಾರ್ದನ, ಅಧ್ಯಕ್ಷರು ಎಫ್ಕೆಸಿಸಿಐ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next