Advertisement

ಉಣಕಲ್ಲ ರೈಲ್ವೆ ನಿಲ್ದಾಣಕ್ಕೆ ಆಧುನಿಕ ಸ್ಪರ್ಶ

11:54 AM Aug 03, 2020 | Suhan S |

ಹುಬ್ಬಳ್ಳಿ: ಇಲ್ಲಿನ ಉಣಕಲ್ಲ ರೈಲ್ವೆ ನಿಲ್ದಾಣಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

Advertisement

ಹುಬ್ಬಳ್ಳಿ ರೈಲ್ವೆ ನಿಲ್ದಾಣ ವಿಸ್ತರಣೆ ಹಾಗೂ ಆಧುನಿಕರಣ ದೃಷ್ಟಿಯಿಂದ ಅನೇಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕ ಎನ್ನುವಂತೆ ಹುಬ್ಬಳ್ಳಿ ಕೇಂದ್ರ ರೈಲ್ವೆ ನಿಲ್ದಾಣದಿಂದ ಸುಮಾರು 3 ಕಿಮೀ ದೂರದಲ್ಲಿರುವ ಉಣಕಲ್ಲ ರೈಲ್ವೆ ನಿಲ್ದಾಣವೂ ಆಧುನಿಕತೆ ಭಾಗ್ಯ ಪಡೆದುಕೊಂಡಿದೆ. ಉಣಕಲ್ಲ ರೈಲ್ವೆ ನಿಲ್ದಾಣದಲ್ಲಿ ಮೂರು ಲೈನ್‌ ಇದ್ದು, ನಾಲ್ಕನೇ ಲೈನ್‌ ಸಿದ್ಧಗೊಳ್ಳುತ್ತಿದೆ. ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಈಗಿರುವ ಕಟ್ಟಡವನ್ನು ಬಿಟ್ಟು ಇನ್ನೊಂದು ಹೊಸ ಕಟ್ಟಡ ನಿರ್ಮಿಸಿದ್ದು, ಅಲ್ಲಿ ಸ್ಟೇಶನ್‌ ಮಾಸ್ಟರ್‌ ಕೊಠಡಿ, ಎಂಜಿನಿಯರಿಂಗ್‌ ಕೊಠಡಿ, ನಿಯಂತ್ರಣ ಕೊಠಡಿ, ಸಾರ್ವಜನಿಕ ವಿಶ್ರಾಂತಿ ಕೊಠಡಿ ಹಾಗೂ ಟಿಕೆಟ್‌ ವಿತರಣಾ ಕೊಠಡಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನಿಲ್ದಾಣದಲ್ಲಿ ಕಲ್ಪಿಸಲಾಗುತ್ತಿದೆ. ಈಗಾಗಲೇ ಕಟ್ಟಡದ ಕಾಮಗಾರಿ ಮುಕ್ತಾಯಗೊಂಡಿದ್ದು, ಒಳಭಾಗದ ಕಾಮಗಾರಿ ನಡೆಸಲಾಗುತ್ತಿದೆ. ನಿಲ್ದಾಣದ ಕಂಟ್ರೋಲ್‌ ರೂಂ ಡಿಜಿಟಲೀಕರಣಗೊಳ್ಳುತ್ತಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ನಿಲ್ದಾಣ ಮುಚ್ಚಲು ಸೂಚನೆ: ಹುಬ್ಬಳ್ಳಿ ನಗರದ ರೈಲ್ವೆ ನಿಲ್ದಾಣದ ಸನಿಹದಲ್ಲಿರುವ ಉಣಕಲ್ಲ ರೈಲ್ವೆ ನಿಲ್ದಾಣವನ್ನು ಬಂದ್‌ ಮಾಡುವ ಚಿಂತನೆ ನಡೆದಿತ್ತು. ಆದರೆ, ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರ ವಿಶೇಷ ಆಸಕ್ತಿಯಿಂದಾಗಿ, ಉಣಕಲ್ಲ ನಿಲ್ದಾಣವನ್ನು ಮುಚ್ಚದೇ ಅದಕ್ಕೆ ಅಧುನಿಕ ಸ್ಪರ್ಶ ನೀಡುವ ಕೆಲಸ ನಡೆದಿದೆ. ಇದರಿಂದ ನಗರದ ಮುಖ್ಯ ರೈಲ್ವೆ ನಿಲ್ದಾಣಕ್ಕೆ ಇರುವ ಹೊರೆಯನ್ನು ಕೊಂಚ ತಗ್ಗಿಸಬಹುದು ಎಂಬ ಚಿಂತನೆಯೊಂದಿಗೆ ನಿಲ್ದಾಣ ಮೇಲ್ದರ್ಜೆರಿಸುವ ಕಾರ್ಯ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆಗಸ್ಟ್‌ ಕೊನೆಯ ವಾರ ಇಲ್ಲವೇ ಸೆಪ್ಟಂಬರ್‌ ಮೊದಲ ವಾರದಲ್ಲಿ ಉಣಕಲ್ಲ ರೈಲ್ವೆ ನಿಲ್ದಾಣ ಆಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ನಿಲ್ದಾಣದ ಮುಂಭಾಗದಲ್ಲಿ ಉತ್ತಮ ಸ್ಥಳವಕಾಶವಿದ್ದು, ಅಲ್ಲಿ ವಾಕಿಂಗ್‌ ಪಾಥ್‌, ವಾಹನ ನಿಲುಗಡೆ ಹಾಗೂ ಮಕ್ಕಳಿಗೆ ಕ್ರೀಡಾ ಪಾರ್ಕ್‌ ಮಾಡುವ ಚಿಂತನೆಗಳು ನಡೆದಿವೆ. ಈಗಾಗಲೇ ನಿಲ್ದಾಣದ ಸುತ್ತಲು ಹಸಿರು ಹೊದಿಕೆ ಸಿದ್ಧಪಡಿಸಲಾಗುತ್ತಿದ್ದು, ಡಬ್ಲಿಂಗ್‌ ಕಾಮಗಾರಿ ಜೋರಾಗಿಯೇ ನಡೆದಿದೆ. ನಿಲ್ದಾಣದಲ್ಲಿ ಫ್ರೀ ವೈಫೈ ಸೌಲಭ್ಯ, 24 ಗಂಟೆ ನೀರಿನ ಸೌಲಭ್ಯ, ಶೌಚಾಲಯ ವ್ಯವಸ್ಥೆ ಹಾಗೂ ಪ್ರಯಾಣಿಕರಿಗೆ ಎಲ್ಲ ರೀತಿಯ ಸುರಕ್ಷಾ ಕ್ರಮಕ್ಕೆ ಆದ್ಯತೆ ನೀಡಲಾಗಿದೆ.

ನಿಲ್ದಾಣದ ಕಾಮಗಾರಿ ಜೋರಾಗಿ ನಡೆದಿದ್ದು, ಅಂದುಕೊಂಡಂತೆ ಎಲ್ಲವೂ ಆದರೆ ಆಗಸ್ಟ್‌ ಕೊನೆ ಇಲ್ಲವೇ ಸೆಪ್ಟಂಬರ್‌ ಮೊದಲ ವಾರದಲ್ಲಿ ಹೊಸ ರೂಪದಲ್ಲಿ ಕಂಗೊಳಿಸಲಿದೆ. ನಿಲ್ದಾಣದಲ್ಲಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದ್ದು, ಒಳಭಾಗದ ಕಾಮಗಾರಿ ನಡೆಯುತ್ತಿವೆ. ಹುಬ್ಬಳ್ಳಿ ನಗರದ ರೈಲ್ವೆ ನಿಲ್ದಾಣಕ್ಕೆ ತುಂಬಾ ಹತ್ತಿರವಾಗಿರುವ ನಿಲ್ದಾಣವಾಗಿದ್ದು, ಇನ್ನು ಹೆಚ್ಚಿನ ಅಭಿವೃದ್ಧಿ ಕಾಮಗಾರಿಗೆ ಆದ್ಯತೆ ನೀಡಲಾಗುತ್ತಿದೆ. – ಅಜಯ ವೆಂಕಟೇಶ ಭಂಡಾರಿ, ಸ್ಟೇಶನ್‌ ಮಾಸ್ಟರ್‌, ಉಣಕಲ್ಲ ರೈಲ್ವೆ ನಿಲ್ದಾಣ

Advertisement

 

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next