Advertisement

ಲಂಬಾಣಿ ಸಾಂಪ್ರದಾಯಿಕ ಉಡುಗೆಗೆ ಆಧುನಿಕ ಸ್ಪರ್ಶ

01:48 AM Feb 20, 2019 | |

ಬೆಂಗಳೂರು: ಕಾಲಕ್ಕೆ ತಕ್ಕಂತೆ ಜನರ ಅಭಿರುಚಿಗಳು ಬದಲಾಗುತ್ತಿವೆ. ವಿಶೇಷವಾಗಿ ಬಟ್ಟೆಯ ವಿಷಯದಲ್ಲಂತೂ ದಿನಕ್ಕೊಂದು ರೀತಿಯ ಟ್ರೆಂಡ್‌ ಹುಟ್ಟಿಕೊಳ್ಳುತ್ತದೆ. ಸದ್ಯದ ಫ್ಯಾಶನ್‌ ಲೋಕದಲ್ಲಿ ಸಾಂಪ್ರದಾಯಿಕ ಉಡುಗೆಗಳೂ ತಮ್ಮ ಸ್ವರೂಪ ಬದಲಾಯಿಸಿಕೊಂಡು ರ್‍ಯಾಂಪ್‌ ಮೇಲೆ, ನಂತರ ಜನರ ಮೈ ಮೇಲೆ ಕಾಣುತ್ತಿವೆ.

Advertisement

ಖಾದಿ ಬಟ್ಟೆ, ರೇಷ್ಮೆ ಪಂಚೆ, ಇಳಕಲ್‌ ಸೀರೆಗಳೂ ಫ್ಯಾಶನ್‌ ಲೋಕದ ಗಮನ ಸೆಳೆದಿದ್ದು, ಈಗ ಫ್ಯಾಶನ್‌ ಲೋಕಕ್ಕೆ ಮತ್ತೂಂದು ಸಾಂಪ್ರದಾಯಿಕ ಉಡುಗೆ ಪ್ರವೇಶಕ್ಕೆ ಸಿದಟಛಿತೆ ನಡೆಸುತ್ತಿದೆ. ರಾಜ್ಯದ ಲಂಬಾಣಿ ಸಮುದಾಯದ ಸಾಂಪ್ರದಾಯಿಕ ಉಡುಗೆಗೆ ಆಧುನಿಕ ಸ್ಪರ್ಶ ನೀಡಿ ಫ್ಯಾಶನ್‌ ಲೋಕಕ್ಕೆ ಪರಿಚಯಿಸಲು ರಾಜ್ಯ ಸರ್ಕಾರವೇ ಮುಂದಾಗಿದೆ.

ಲಂಬಾಣಿ ಸಮುದಾಯದ ಮಹಿಳೆಯರು ತೊಡುವ ಬಟ್ಟೆ ಪೆಟಿಯಾ ಕಾಂಚಳಿ (ಲಂಗಾ ಬ್ಲೌಜ್‌) ತನ್ನದೇ ಆದ ವಿಶಿಷ್ಟ ಆಕರ್ಷಣೆ ಹೊಂದಿದ್ದು, ಅಮೆರಿಕ, ಲಂಡನ್‌, ಸಿಂಗಾಪುರ, ಮಲೇಶಿಯಾ ಹಾಗೂ ಯೂರೋಪಿನ ಅನೇಕ ರಾಷ್ಟ್ರಗಳಲ್ಲಿ ಬೇಡಿಕೆ ಪಡೆದುಕೊಂಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಅಭಿರುಚಿಗೆ ತಕ್ಕಂತೆ ಲಂಬಾಣಿ ಸಾಂಪ್ರದಾಯಿಕ ಉಡುಗೆಗೆ ಆಧುನಿಕ ಸ್ಪರ್ಶ ನೀಡಲು ರಾಜ್ಯ ಸರ್ಕಾರದ ಕೌಶಲ್ಯಾಭಿವೃದಿಟಛಿ ಹಾಗೂ ಜೀವನೋಪಾಯ ಇಲಾಖೆ ನಿರ್ಧರಿಸಿದೆ.

ಪ್ರತಿ ಜಿಲ್ಲೆಯಿಂದ ಸುಮಾರು 30 ಜನ ಯುವಕ-ಯುವತಿಯರಿಗೆ ಲಂಬಾಣಿ ಬಟ್ಟೆ ನೇಯುವ ಕಸೂತಿ ತರಬೇತಿ ನೀಡಲು ಯೋಜಿಸಲಾಗಿದ್ದು, ಲಂಬಾಣಿ ಸಮುದಾಯ ಹೆಚ್ಚಾಗಿ ವಾಸವಾಗಿರುವ ಗದಗ, ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ, ಹರಪನಹಳ್ಳಿ, ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ಹಾಗೂ ರಾಮನಗರ ಜಿಲ್ಲೆಯ ಕನಕಪುರ ತಾಲೂಕುಗಳಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ.

ವಸತಿ ಸಹಿತ ಕೋರ್ಸ್‌

Advertisement

ಯುವ ಸಮುದಾಯಕ್ಕೆ ಸಾಂಪ್ರದಾಯಿಕ ಕಸೂತಿ ಕಲೆಯ ಬಗ್ಗೆ ತರಬೇತಿ ನೀಡುವುದರ ಜತೆಗೆ ಸ್ವಂತ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ನೋಡಿಕೊಳ್ಳಲು ಮೂರು ತಿಂಗಳು ಹಾಗೂ 6 ತಿಂಗಳ ಕೋರ್ಸ್‌ಗಳನ್ನು ಮಾಡಿ ತರಬೇತಿ ನೀಡಲು ನಿರ್ಧರಿಸಲಾಗಿದೆ. ಆಸಕ್ತರೆಲ್ಲರಿಗೂ ಕಲಿಯಲು ಅವಕಾಶ ಕಲ್ಪಿಸಿ, ತರಬೇತಿ ಸಮಯದಲ್ಲಿ ಪ್ರೋತ್ಸಾಹ ಧನ ನೀಡಲು ಇಲಾಖೆ ತೀರ್ಮಾನಿಸಿದೆ.

ಫ್ಯಾಷನ್‌ ಡಿಸೈನ್‌ ಸಂಸ್ಥೆಯೊಂದಿಗೆ ಒಪ್ಪಂದ
ಬಂಜಾರಾ ಸಮುದಾಯದ ಹಿರಿಯ ಮಹಿಳೆಯರಿಂದಲೇ ಸಾಂಪ್ರದಾಯಿಕ ಕಸೂತಿ ತರಬೇತಿ ನೀಡುವುದರ ಜತೆಗೆ ಫ್ಯಾಶನ್‌ ಲೋಕಕ್ಕೆ ಅಗತ್ಯವಿರುವ ರೀತಿಯಲ್ಲಿ ಬಟ್ಟೆ ಡಿಸೈನ್‌ ಮಾಡಿ, ಅದಕ್ಕೆ ಪೂರಕವಾಗುವಂತೆ ಕಸೂತಿ ಮಾಡಿಸಲು ಯೋಚಿಸಲಾಗಿದ್ದು, ಸದ್ಯದ ಟ್ರೆಂಡ್‌ಗೆ ಬೇಕಾದ ರೀತಿಯಲ್ಲಿ ಬಟ್ಟೆಯ ವಿನ್ಯಾಸಗೊಳಿಸಲು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಶನ್‌ ಡಿಸೈನ್ಸ್‌ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆಧುನಿಕವಾಗಿ ತಯಾರಿಸುವ ಬಟ್ಟೆಗಳಿಗೆ ಸೂಕ್ತ ಮಾರುಕಟ್ಟೆಯನ್ನೂ ಸರ್ಕಾರವೇ ಒದಗಿಸಲು ಯೋಜನೆ ರೂಪಿಸಿದ್ದು, ತರಬೇತಿ ಪಡೆದವರಿಗೆ 10 ಸಾವಿರವರೆಗೂ ಶೇ. 2ರ ಬಡ್ಡಿ ದರದಲ್ಲಿ ಸಾಲ ನೀಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಿ, ಅವರು ತಯಾರಿಸುವ ಬಟ್ಟೆಗಳಿಗೆ ಸರ್ಕಾರವೇ ಸೂಕ್ತ ಮಾರುಕಟ್ಟೆ ಒದಗಿಸಲು ನಿರ್ಧರಿಸಿದೆ.

ನಶಿಸಿ ಹೋಗುತ್ತಿರುವ ಲಂಬಾಣಿ ಸಮುದಾಯದ ಕಸೂತಿ ಕಲೆಯನ್ನು ಈಗಿನ ಪೀಳಿಗೆ ಹಾಗೂ ಸದ್ಯದ ಮಾರುಕಟ್ಟೆಗೆ ತಕ್ಕಂತೆವಿನ್ಯಾಸ ಗೊಳಿಸಲು ಅಗತ್ಯ ತರಬೇತಿ ನೀಡಲು ಇಲಾಖೆ ನಿರ್ಧರಿಸಿದೆ.

ಬಂಜಾರಾ ಸಮುದಾಯದ ಹಿರಿಯರಿಂದ ಕಸೂತಿ ಹಾಗೂ ಫ್ಯಾಶನ್‌ ಡಿಸೈನರ್‌ಗಳಿಂದ ವಿನ್ಯಾಸ ತರಬೇತಿ ನೀಡಲಾಗುವುದು. ವಿದೇಶ ಗಳಲ್ಲೂ ಲಂಬಾಣಿ ಬಟ್ಟೆಗಳಿಗೆ ಬೇಡಿಕೆ ಇರುವುದರಿಂದ ಆ ಮಾರು ಕಟ್ಟೆಗೆ ತಕ್ಕಂತೆ ವಿನ್ಯಾಸಗೊಳಿಸಲು ಯೋಚಿಸಲಾಗಿದೆ.
● ಪಿ.ಟಿ.ಪರಮೇಶ್ವರ್‌ ನಾಯ್‌ಕ್‌ , ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next