ಹುಣಸೂರು: ಹುಣಸೂರಿನ ಕಲ್‌ಬೆಟ್ಟ ಬಳಿಯಲ್ಲಿ 80 ಕೋಟಿ ವೆಚ್ಚದ 220/11 ಕೆ.ವಿ.ವಿದ್ಯುತ್ ಸ್ವೀಕರಣಾ ಕೇಂದ್ರದ ಜೊತೆಗೆ ತಾಲೂಕಿನ 7 ನೂತನ ವಿತರಣಾ ಉಪ ಕೇಂದ್ರಗಳು ಮಂಜೂರಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಭೂಮಿ ಸ್ವಾಧೀನವಾಗದಿದ್ದರೂ ವಿದ್ಯುತ್ ಸ್ವೀಕರಣಾ ಕೇಂದ್ರದ ಗುದ್ದಲಿ ಪೂಜೆ ನೆರವೇರಿಸಿದ್ದರು. ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ತಾವೀಗ ಸರಕಾರ, ಚೆಸ್ಕಾಂ ಎಂ.ಡಿ.ಯವರ ಮೇಲೆ ಒತ್ತಡ ಹಾಕಿ ಮಂಜೂರಾತಿ ಮಾಡಿಸಿದ್ದೇನೆ. ಈ ಕೇಂದ್ರ ಆರಂಭವಾದಲ್ಲಿ ಲೋ ಓಲ್ಟೇಜ್ ಸಮಸ್ಯೆ ಹಾಗೂ ಉಪ ವಿಭಾಗದ ನಾಲ್ಕು ತಾಲೂಕುಗಳ ವಿದ್ಯುತ್ ಸಮಸ್ಯೆ ನೀಗಲಿದೆ. ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ. ಅಂತರ್ಜಲ ವೃದ್ದಿಸಲಿದೆ ಎಂದು ತಿಳಿಸಿದರು.
7 ಉಪ ಕೇಂದ್ರ ಮಂಜೂರು: ತಾಲೂಕಿನ ಕಟ್ಟೆ ಮಳಲವಾಡಿ, ಮನುಗನಹಳ್ಳಿ, ಚಲ್ಲಹಳ್ಳಿ, ದೊಡ್ಡಕೊಪ್ಪಲು, ನೇರಳಕುಪ್ಪೆ, ಕರ್ಣಕುಪ್ಪೆಗಳಲ್ಲಿ ಉಪ ಕೇಂದ್ರಗಳಿಗೆ ಅನುಮತಿ ಸಿಕ್ಕಿದ್ದು. ಕೆಲವೆಡೆ ಭೂಮಿ ಮಂಜೂರಾಗಿದ್ದರೆ, ಹಲವೆಡೆ ಮಂಜೂರಾಗಬೇಕಿದೆ.
ತಮ್ಮ ಅವಧಿಯಲ್ಲಿ ತಾಲೂಕಿನ ಪ್ರಥಮ ಬಾರಿಗೆ 83 ಹಳ್ಳಿಗಳ ಇತರೆ ಜನಾಂಗದ ಬೀದಿಗಳ ರಸ್ತೆ-ಚರಂಡಿ ಅಭಿವೃದ್ದಿಗಾಗಿ ಸುಮಾರು ನೂರು ಕೋಟಿರೂ ಅನುದಾನ ತಂದಿದ್ದೆ. ಅಲ್ಲದೆ ಜಿ.ಟಿ.ದೇವೇಗೌಡರ ಅವಧಿಯಲ್ಲಿ ವಿವಿಧ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಮಂಜೂರು ಮಾಡಿಸಿದ್ದು, ಸೌಜನ್ಯಕ್ಕಾದರೂ ನಮ್ಮಗಳ ಹೆಸರು ಹೇಳದೆ ಎಲ್ಲವನ್ನೂ ನಾನೆ ಮಾಡಿಸಿದ್ದೇನೆಂದು ಶಾಸಕ ಮಂಜುನಾಥರು ಹೇಳಿಕೊಳ್ಳುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಶಿವಕುಮಾರ್ ಹಾಗೂ ಎಸ್.ಸಿ.ಮೋರ್ಚಾದ ರಾಜ್ಯ ಉಪಾಧ್ಯಕ್ಷ ನಾಗರಾಜ ಮಲ್ಲಾಡಿ ಇದ್ದರು. ಯಡಿಯೂರಪ್ಪ ಮಂತ್ರಿಮಂಡಲದ ಕ್ಯಾಪ್ಟನ್ ಅಷ್ಟೆ, ಯಾರಿಗೆ ಏನು ಅಧಿಕಾರವಿದೆ ಎಂದು ಸಂವಿಧಾನದಲ್ಲಿ ಬರೆದಿದೆ. ನಿಯಮ ಮೀರುವಂತಿಲ್ಲವೆಂದು ಎಂ.ಎಲ್.ಸಿ. ಅಡಗೂರು ಎಚ್. ವಿಶ್ವನಾಥ್ ತಿಳಿಸಿದರು.